ಕುಡುಪು: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಬ್ರಹ್ಮರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ದೇಗುಲದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜೆ ಪುನಸ್ಕಾರಗಳು ಜರಗಿದವು. ಷಷ್ಠಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು, ದೇವರ ದರ್ಶನ ಪಡೆದರು. ದೇವರಿಗೆ ತಂಬಿಲ, ಪಂಚಾಮೃತ, ಕೇದಗೆ, ಹಿಂಗಾರ, ಬೆಳ್ಳಿ, ಚಿನ್ನದ ಹರಕೆಗಳನ್ನು ಒಪ್ಪಿಸಿದರು.
ಮುಂಜಾನೆ 4 ಗಂಟೆಗೆ ದೇವರಿಗೆ ಪಂಚಮಿ ಉತ್ಸವ ನಡೆಯಿತು. ನೂರಾರು ಭಕ್ತರು ಉರುಳು ಸೇವೆಗೈದರು. ಶ್ರೀ ದೇವರಿಗೆ ಉಷಾಕಾಲ ಪೂಜೆ ನೆರವೇರಿತು. ಬಳಿಕ ವಿಶೇಷ ಪಂಚಾಮೃತ ಅಭಿಷೇಕ, ನವಕಲಶಾಭಿಷೇಕ, ಸಹಸ್ರನಾಮ, ಅಷ್ಟೋತ್ತರ ಅರ್ಚನೆ, ವಿಶೇಷ ಹರಿವಾಣ ನೈವೇದ್ಯದೊಂದಿಗೆ ಸರ್ವಾಭರಣಭೂಷಿತ ಶ್ರೀ ಅನಂತಪದ್ಮನಾಭ ದೇವರಿಗೆ ಷಷ್ಠಿಯ ವೈಭವ ಮಹಾಪೂಜೆ ಜರಗಿತು.
ಮಧ್ಯಾಹ್ನ 12.30ಕ್ಕೆ ಶ್ರೀ ದೇವರ ಬಲಿ ಹೊರಟು ರಾಜಾಂಗಣದಲ್ಲಿ ವಿಶೇಷ ವಾದ್ಯ ಸುತ್ತು ಜರಗಿ ಶ್ರೀ ದೇವರು ಬ್ರಹ್ಮರಥ ಇರುವ ರಾಜಬೀದಿಗೆ ಬಂದು 1 ಗಂಟೆಗೆ ಬ್ರಹ್ಮರಥೋತ್ಸವ ನೆರವೇರಿತು. ಈ ಸಂದರ್ಭ ಭಕ್ತರ “ಗೋವಿಂದಾ ಗೋವಿಂದಾ’ ನಾಮಸ್ಮರಣೆ, ಉದ್ಘೋಷ ಮುಗಿಲು ಮುಟ್ಟಿತ್ತು.
ಷಷ್ಠಿ ಮಹೋತ್ಸವ ಸಂದರ್ಭ 6 ಸಾವಿರ ಪಂಚಾಮೃತ ಅಭಿಷೇಕ, 20 ಸಾವಿರಕ್ಕೂ ಮಿಕ್ಕಿ ನಾಗತಂಬಿಲ ಸೇವೆಗಳು ನಡೆಯಿತು. ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾ ಮಕ್ಕಳ ಮೇಳದಿಂದ ಯಕ್ಷಗಾನ ಬಯಲಾಟ ನೆರವೇರಿತು. ಷಷ್ಠಿಮಹೋತ್ಸವ ದಿನ ಮಧ್ಯಾಹ್ನ 11 ಗಂಟೆಗೆ ಪಲ್ಲಪೂಜೆ ಜರಗಿ, ಬಳಿಕ ಅನ್ನಪ್ರಸಾದ ವಿತರಣೆ ಆರಂಭಗೊಂಡಿತು. ಅಪರಾಹ್ನ 3 ಗಂಟೆಯವರೆಗೆ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಶ್ರೀ ದೇಗುಲದ ಆನುವಂಶಿಕ ಆಡಳಿತ ಮೊಕ್ತೇಸರ ಕೆ. ನರಸಿಂಹ ತಂತ್ರಿ, ಆನುವಂಶಿಕ ಮೊಕ್ತೇಸರ ಮನೋಹರ ಭಟ್ ಕುಡುಪು, ಆನುವಂಶಿಕ ಮೊಕ್ತೇಸರ, ಆನುವಂಶಿಕ ಪವಿತ್ರಪಾಣಿ ಕೆ. ಬಾಲಕೃಷ್ಣ ಕಾರಂತ, ಮೊಕ್ತೇಸರ ಭಾಸ್ಕರ ಕೆ., ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ಎಂ., ವಾಸ್ತುಶಿಲ್ಪಿ ಕೃಷ್ಣರಾಜ ತಂತ್ರಿ, ಉದಯ ಕುಮಾರ್ ಕುಡುಪು, ಸುಜನ್‌ದಾಸ್ ಕುಡುಪು, ವಾಸುದೇವ ರಾವ್, ದಿನೇಶ್ ಪೆಜತ್ತಾಯ, ರಾಘವೇಂದ್ರ ಭಟ್, ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ, ಸುದರ್ಶನ್, ಚಂದ್ರಹಾಸ ರೈ, ಉಮೇಶ್ ಮೂಡುಶೆಡ್ಡೆ ಮೊದಲಾದವರಿದ್ದರು.
ವಿವಿಧ ದೇಗುಲಗಳಲ್ಲಿ ಪೂಜೆ :
ಮಂಗಳೂರು, ಮೂಡುಬಿದಿರೆ, ಮೂಲ್ಕಿ ತಾಲೂಕುಗಳ ನಾಗಸಾನ್ನಿಧ್ಯ ವಿರುವ ದೇಗುಲಗಳಲ್ಲಿಯೂ ಷಷ್ಠಿ ಹಿನ್ನೆಲೆಯಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿತು. ಕದ್ರಿ ಶ್ರೀ ಮಂಜುನಾಥ ದೇಗುಲದಲ್ಲಿ ನಾಗನ ಕಟ್ಟೆಯಲ್ಲಿ ಪೂಜೆ ಜರಗಿತು. ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಬೆಳಗ್ಗೆ ನಾಗ ದೇವರಿಗೆ ಪೂಜೆ, ಮಧ್ಯಾಹ್ನ ಮಹಾಪೂಜೆ ನೆರವೇರಿತು. ಕೊಟ್ಟಾರ ಚೌಕಿಯ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಷಷ್ಠಿ ಉತ್ಸವ ನಡೆಯಿತು.