Advertisement

ರಂಗರಾವ್‌ ಜಿಲ್ಲೆಯ ಅಭಿನವ ಬಸವಣ್ಣ: ಡಾ|ಕಾತ್ಯಾಯಿನಿ

02:25 AM Jul 02, 2018 | Team Udayavani |

ಉರ್ವಸ್ಟೋರ್‌: ಕುದ್ಮಲ್‌ ರಂಗರಾವ್‌ ಅವರು ದ.ಕ. ಜಿಲ್ಲೆಯ ಅಭಿನವ ಬಸವಣ್ಣ. ಅವರು ವಚನಗಳನ್ನು ಬರೆಯಲಿಲ್ಲ ಆದರೆ ಸಮಾಜಮುಖಿ ಕೆಲಸವನ್ನು ಮಾಡಿದವರು ಎಂದು ಸಾಹಿತಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಅವರು ಹೇಳಿದರು. ರಾಜ್ಯ ಯುವ ಬರಹಗಾರರ ಒಕ್ಕೂಟ ಕೇಂದ್ರ ಸಮಿತಿ ಬೆಂಗಳೂರು ವತಿಯಿಂದ ಉರ್ವಸ್ಟೋರ್‌ ನ ತುಳು ಭವನದಲ್ಲಿ ರವಿವಾರ ಆಯೋಜಿಸಿದ್ದ ಕುದ್ಮಲ್‌ ರಂಗರಾವ್‌ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ಯುವ ಉದಯೋನ್ಮುಖ ಕವಿ- ಕಾವ್ಯ 1ನೇ ರಾಜ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಕುದ್ಮಲ್‌ ರಂಗರಾವ್‌ ಅವರು ಅಸ್ಪೃಶ್ಯ ನಿವಾರಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ದಿವ್ಯಚೇತನ. ಶತಮಾನದ ಹಿಂದೆಯೇ ಜಿಲ್ಲೆಯ ಶೋಷಿತ ಜನಾಂಗದವರ ಕತ್ತಲ ಬಾಳನ್ನು ಬೆಳಗಲು ಶಿಕ್ಷಣದ ಮೂಲಕ ವೈಚಾರಿಕತೆಯ ದೀಪ ಹಚ್ಚಿದವರು ಎಂದು ತಿಳಿಸಿದರು. ಕಾವ್ಯವು ಎಂತಹ ಸಾಮಾಜಿಕ ಕ್ರಾಂತಿಯನ್ನು ಉಂಟುಮಾಡಬಲ್ಲುದು ಎಂಬುವುದಕ್ಕೆ ಕಲ್ಯಾಣದ ಕ್ರಾಂತಿಯೇ ನಿದರ್ಶನ. ಪರಿಪೂರ್ಣ ಮನುಷ್ಯತ್ವದ ಕಲ್ಪನೆ ಒಂದು ಆದರ್ಶ ಮಾತ್ರ. ಅದು  ವಾಸ್ತವವಲ್ಲ. ಭಾಷೆ ನಿಂತಾಗ ಸಂಗೀತ ಆರಂಭವಾಗುತ್ತದೆ. ಭಾಷೆಯಲ್ಲೊಂದು ಲಯ, ಗುಣವಿದೆ. ಗದ್ಯದಿಂದ ಪದ್ಯದೆಡೆಗೆ ಹೋದಾಗ ಆ ನಾದಗುಣ, ಗೇಯ ಗುಣವಾಗಿ ಇಮ್ಮಡಿಯಾಗುತ್ತದೆ ಎಂದರು.

ಕಾವ್ಯವೆಂದರೆ ಬೌದ್ಧಿಕ ರಂಜನೆ
ಭಾಷಾ ದೃಷ್ಟಿಯಿಂದಲೂ ಛಂದಸ್ಸಿನ ದೃಷ್ಟಿಯಿಂದಲೂ ಕಾವ್ಯದಲ್ಲಿ ಹೆಚ್ಚೆಚ್ಚು ಅನ್ವೇಷಣೆಯ ಸಾಧ್ಯತೆಯಿದೆ. ಕಾವ್ಯವೆಂದರೆ ಪದಗಳೊಂದಿಗಿನ ಆಟ, ಬೌದ್ಧಿಕ ರಂಜನೆ. ಕನ್ನಡ ಕಾವ್ಯವು ಆರಂಭದಿಂದಲೂ ಆಯಾ ಕಾಲಘಟ್ಟದ ಯುಗಧರ್ಮಕ್ಕೆ ಸಂಬಂಧಿಸಿದಂತೆ ವಿಶ್ವಾತಾತ್ಮಕ ಮಾನವೀಯ ಮೌಲ್ಯಗಳನ್ನು ಅಭಿವ್ಯಕ್ತಗೊಳಿಸುವ ಕೆಲಸ ಮಾಡಿದೆ ಎಂದು ವಿವರಿಸಿದರು.

ಮಕ್ಕಳಲ್ಲಿ  ಸಾಹಿತ್ಯಾಭಿರುಚಿ ಬೆಳೆಸಿ
ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಯುವ ಬರಹಗಾರರಿಗೆ ಸರಕಾರ ಪ್ರೋತ್ಸಾಹ ನೀಡಬೇಕು. ಅವರು ಬರೆದ ಪುಸ್ತಕಗಳನ್ನು ಕೊಂಡು ಪ್ರೋತ್ಸಾಹಿಸುವ ಅಗತ್ಯವಿದೆ. ಮಕ್ಕಳಲ್ಲಿ ಸಾಹಿತ್ಯಾಭಿರುಚಿಯನ್ನು ಹುಟ್ಟಿಸುವ ಕಲ್ಪನೆ ಆಗಬೇಕಿದೆ ಎಂದರು. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪುತ್ತಿದ್ದು, ಅವುಗಳ ರಕ್ಷಣೆಗೆ ಸರಕಾರ ಬೆಂಬಲ ನೀಡುತ್ತಿಲ್ಲ. ಅನೇಕ ಶಾಲೆಗಳ ಲ್ಲಿನ ಗ್ರಂಥಾಲಯಗಳಲ್ಲಿ ಕನ್ನಡ ಭಾಷೆಯ ಪುಸ್ತಕಗಳ ಕೊರತೆ ಇದೆ. ಬೆಂಗಳೂರಿಗರಲ್ಲಿ ಶೇ. 35ರಷ್ಟು ಮಾತ್ರ ಕನ್ನಡ ಮಾತನಾಡುವವರಿದ್ದಾರೆ ಎಂದು ತಿಳಿಸಿದರು.

ಎಂ.ಐ. ಜಿದ್ದಿ ಅವರ ‘ಕಲಿಯುಗ ಕರ್ಣ’ ಪುಸ್ತಕ ಬಿಡುಗಡೆ ಮಾಡಲಾಯಿತು. ಮಂಗ ಳೂರು ವಿ.ವಿ. ಮಾಜಿ ಕುಲಸಚಿವ ಡಾ| ಪಿ.ಎಸ್‌. ಯಡಪಡಿತ್ತಾಯ, ಆರ್‌.ಪಿ.ಐ. ರಾಜ್ಯಾಧ್ಯಕ್ಷ ಡಾ| ಎಂ. ವೆಂಕಟಸ್ವಾಮಿ, ಕೆ. ಚಿನ್ನಪ್ಪ ಗೌಡ ಮೊದಲಾದವರು ಭಾಗವಹಿಸಿದ್ದರು.

Advertisement

ಒಕ್ಕೂಟದಿಂದ ಪ್ರೋತ್ಸಾಹ
ರಾಜ್ಯ ಯುವ ಬರಹಗಾರರ ಒಕ್ಕೂಟದ ಸಂಸ್ಥಾಪಕ ಹೂಹಳ್ಳಿ ನಾಗರಾಜ್‌ ಮಾತನಾಡಿ, ನಾವು ನಮ್ಮ ಒಕ್ಕೂಟದ ವತಿಯಿಂದ ಕನ್ನಡೆ ಭಾಷೆ, ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ  ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಕನ್ನಡ ಭಾಷೆ ವಿಚಾರದಲ್ಲಿ ಪಿಎಚ್‌.ಡಿ. ಮಾಡುವ ಸಂಶೋಧಕರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ, ಸಾಹಿತಿಗಳು ಪುಸ್ತಕಗಳನ್ನು ಹೊರತರುವುದಾದರೆ ಪ್ರಕಾಶನಕ್ಕೆ ಬೇಕಾದ ಅರ್ಧದಷ್ಟು ಹಣವನ್ನು ಒಕ್ಕೂಟದ ವತಿಯಿಂದ ನೀಡುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next