ಕೂಡ್ಲಿಗಿ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ಅಡಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯವ್ಯಾಪಿ ಕರೆ ನೀಡಿರುವ 2 ದಿನಗಳ ಅಹೋರಾತ್ರಿ ಧರಣಿ ಪ್ರಯುಕ್ತ ಕೂಡ್ಲಿಗಿಯ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೂಡ್ಲಿಗಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಅಧ್ಯಕ್ಷೆ ಎ. ದ್ರಾಕ್ಷಾಯಿಣಿ ಮಾತನಾಡಿ ರಾಜ್ಯದಲ್ಲಿರುವ 65911 ಅಂಗನವಾಡಿ ಕೇಂದ್ರಗಳು ಮತ್ತು 3331 ಮಿನಿ ಅಂಗನವಾಡಿ ಕೇಂದ್ರಗಳನ್ನು ಕಿನ್ನರ್ ಗಾರ್ಡನ್ ಗಳಾಗಿ ಮಾರ್ಪಡಿಸಿ, ಇಂಗ್ಲಿಷ್ ಕಾನ್ವೆಂಟ್ ಹಾಗೂ ನರ್ಸರಿ ಶಾಲೆಗಳನ್ನಾಗಿ ಪರಿವರ್ತಿಸಬೇಕು. 2 ವರ್ಷದ 6 ತಿಂಗಳ ಮಕ್ಕಳನ್ನು ಅಂಗನವಾಡಿ ನರ್ಸರಿ ಶಾಲೆಗೆ ಸೇರಿಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಬೇಕು. ಮಕ್ಕಳಿಗೆ ಬೋಧಿಸಲು ಬೇಕಾಗಿರುವ ಇಂಗ್ಲಿಷ್ ಪುಸ್ತಕಗಳು, ಸಮರ್ಪಕ ಆಟಿಕೆ ಸಾಮಾನುಗಳು, ಮಕ್ಕಳಿಗೆ ಯುನಿಫಾರಂ, ಶೂ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕು. ಅಂಗನವಾಡಿ ನರ್ಸರಿ ಶಾಲೆಯಲ್ಲಿ ನೀಡಿದ ಸರ್ಟಿಫಿಕೇಟ್ ಪಡೆದಿರುವ ಮಕ್ಕಳಿಗೆ ಪ್ರಾಥಮಿಕ ಶಾಲೆಗಳಿಗೆ ಸೇರಿಸಿಕೊಳ್ಳುವಂತೆ ಸರ್ಕಾರ ಆದೇಶ ನೀಡಬೇಕೆಂದರು.
ಈ ಸಂದರ್ಭದಲ್ಲಿ ಕಮ್ಯುನಿಷ್ಟ ಪಕ್ಷದ ಕಾರ್ಯದರ್ಶಿ ಮಾತನಾಡಿ, ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಅಂಗನವಾಡಿ ಶಾಲೆಗಳಲ್ಲಿ ಪ್ರಾರಂಭಿಸಬೇಕು. ಈ ಮೂಲಕ ಪ್ರಾಥಮಿಕ ಶಾಲೆಗಳಿಗೆ ಸೇರಿಸಿಕೊಳ್ಳುವಂತೆ ವ್ಯವಸ್ಥೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಸಹಾಯಕಿರಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದರು.
ಶುಕ್ರವಾರದ ಈ ದಿನದ ಧರಣಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಷ್ಟೇ ಭಾಗವಹಿಸಿದ್ದು ಶನಿವಾರದ 2ನೇ ದಿನದ ಧರಣಿಯಲ್ಲಿ ಅಂಗನವಾಡಿ ಕೇಂದ್ರಗಳು ಮಧ್ಯಾಹ್ನ ರಜೆ ಇರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಭಾಗವಹಿಸುವರು ಎಂದು ಹೆಚ್. ವೀರಣ್ಣ ಈ ಸಂದರ್ಭದಲ್ಲಿ ತಿಳಿಸಿದರು.
ಧರಣಿಯಲ್ಲಿ ಕೂಡ್ಲಿಗಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಪದಾಧಿಕಾರಿಗಳಾದ ರತ್ನಮ್ಮ, ಮಹಾಂತಮ್ಮ, ಪದ್ಮಾ, ಸುಮಾ, ನಿರ್ಮಲ, ನೇತ್ರಾ, ಬಸಮ್ಮ, ಮೊರಬ ಬಸಮ್ಮ, ಶಕುಂತಲಾ, ಮಂಜುಳಾ, ಶಾಂತಾ, ರಾಮಕ್ಕ, ಮಂಜಮ್ಮ, ಕವಿತಾ, ಗಾಯಿತ್ರಿ ಮುಂತಾದವರು ಭಾಗವಹಿಸಿದ್ದರು.