Advertisement

ರಸ್ತೆಗಳ ಹೊಂಡ ಮುಚ್ಚಿಸಲು”ಕುಡ್ಲ ಸೆಲ್ಫೀ ಮೂಮೆಂಟ್‌’

10:10 AM Nov 01, 2019 | Team Udayavani |

ವಿಶೇಷ ವರದಿ ಸ್ಮಾರ್ಟ್‌ಸಿಟಿಯಾಗಿ ರೂಪುಗೊಳ್ಳುತ್ತಿರುವ ಮಂಗಳೂರು ನಗರದ ಬಹುತೇಕ ರಸ್ತೆಗಳು ಗುಂಡಿಯಿಂದ ಕೂಡಿವೆ. ಮಳೆಗಾಲ ಆರಂಭಕ್ಕೂ ಮುನ್ನ ಗುಂಡಿ ಬಿದ್ದ ರಸ್ತೆಗಳಿಗೆಡಾಮರು ಹಾಕದಿರುವುದರಿಂದ ಇದೀಗ ಸಂಚಾರ ಸಮಸ್ಯೆ ಇನ್ನಷ್ಟು ಜಟಿಲಗೊಂಡಿದೆ.

Advertisement

ಪಾಲಿಕೆಯ ಲೆಕ್ಕಾಚಾರದ ಪ್ರಕಾರ ನಗರದಲ್ಲಿ 63 ಮತ್ತು ಸುರತ್ಕಲ್‌ ಸುತ್ತಮುತ್ತಲು ಸುಮಾರು 27 ರಸ್ತೆಗಳು ಗುಂಡಿ ಬಿದ್ದಿವೆ. ಮಂಗಳೂರು ದಸರಾ ಸಮಯದಲ್ಲಿ ಶಾರದಾ ಮೂರ್ತಿ ಸಾಗುವ ದಾರಿಯ ಸುಮಾರು 7 ರಸ್ತೆಗಳಲ್ಲಿನ ಗುಂಡಿಗಳನು ಮುಚ್ಚಲಾಗಿದೆ. ಆದರೆ ಇನ್ನೂ ಹಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಬಾಕಿ ಇವೆ.

ಗುಂಡಿ ಬಿದ್ದ ರಸ್ತೆಗಳಲ್ಲಿ ಸುಗಮ ವಾಹನ ಸಂಚಾರ ಕಷ್ಟವಾಗುತ್ತಿದ್ದು, ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಜತೆಗೆ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಬೇಕು ಎಂಬ ಉದ್ದೇಶದಿಂದ “ಎಂಸಿಸಿ ಸಿವಿಕ್‌’ ಎಂಬ ಫೇಸ್‌ಬುಕ್‌, ಟ್ವಿಟ್ಟರ್‌ ಗ್ರೂಪ್‌ನಲ್ಲಿ “ಕುಡ್ಲ ಸೆಲ್ಫೀ ಮೂಮೆಂಟ್‌’ ಆರಂಭಗೊಂಡಿದೆ.

ಏನಿದು “ಕುಡ್ಲ ಸೆಲ್ಫೀ ಮೂಮೆಂಟ್‌’?
ಗುಂಡಿ ಬಿದ್ದ ರಸ್ತೆಗಳಲ್ಲಿ ಕೂಡಲೇ ಕಾಮಗಾರಿ ನಡೆಸುವಂತೆ ಆಗ್ರಹಿಸಿ “ಎಂಸಿಸಿ ಸಿವಿಕ್‌’ ಎಂಬ ಗ್ರೂಪ್‌ ಆಯೋಜಿಸಿರುವ ವಿಶೇಷ ಅಭಿಯಾನ ಇದಾಗಿದ್ದು, ಇದರ ಪ್ರಕಾರ ಗುಂಡಿ ಬಿದ್ದ ರಸ್ತೆಯಲ್ಲಿ ನಿಂತು ಸೆಲ್ಫೀ ತೆಗೆದು ಎಂಸಿಸಿ ಸಿವಿಕ್‌ ಗ್ರೂಪ್‌ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಬೇಕು. ಈ ಮುಖೇನ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಾಗಿದೆ. ನವೆಂಬರ್‌ 10ರ ವರೆಗೂ ಈ ಅಭಿಯಾನ ಮುಂದುವರಿಯಲಿದ್ದು, ಈಗಾಗಲೇ ಅನೇಕ ಮಂದಿ ಫೋಟೊಗಳನ್ನು ಟ್ಯಾಗ್‌ ಮಾಡಿದ್ದಾರೆ ಎನ್ನುತ್ತಾರೆ ಆಯೋಜಕರು.

ಸಂಸದರು ನೀಡಿದ ಗಡುವು ಮುಗಿಯಿತು !
ಪಾಲಿಕೆ ವ್ಯಾಪ್ತಿಯ ನಗರದೊಳಗೆ ಹೊಂಡದಿಂದಿರುವ ಎಲ್ಲ ರಸ್ತೆಗಳನ್ನು ಈ ತಿಂಗಳ ಒಳಗಾಗಿ ದುರಸ್ತಿ ಕೈಗೊಳ್ಳಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಈ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೂಚಿಸಿದ್ದು, ಇದಕ್ಕೆ ಪಾಲಿಕೆ ಅಧಿಕಾರಿಗಳು ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ ಇನ್ನು ಕೂಡ ಯಾವುದೇ ರೀತಿಯ ಕಾಮಗಾರಿಗಳು ಆರಂಭಗೊಂಡಿಲ್ಲ.

Advertisement

ಮಳೆ ನಿಂತ ಬಳಿಕ ಕಾಮಗಾರಿ
ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳ ಕಾಮಗಾರಿ ಈಗಾಗಲೇ ಆರಂಭಗೊಳ್ಳಬೇಕಿತ್ತು. ಆದರೆ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆ ಬಿಡುವು ನೀಡಿದ ಒಂದು ವಾರದೊಳಗಾಗಿ ಕಾಮಗಾರಿ ಆರಂಭಿಸುತ್ತೇವೆ. ಒಟ್ಟು 90 ಗುಂಡಿ ಬಿದ್ದ ರಸ್ತೆ ಇವೆ ಎಂದು ಗುರುತಿಸಲಾಗಿದ್ದು, ಸುಮಾರು 7 ರಸ್ತೆಗಳಲ್ಲಿ ಈಗಾಗಲೇ ಗುಂಡಿ ಮುಚ್ಚಲಾಗಿದೆ.
– ಗುರುರಾಜ್‌ ಮರಲಿಹಳ್ಳಿ, ಪಾಲಿಕೆ ಅಭಿಯಂತರ

ಸಾರ್ವಜನಿಕರಲ್ಲಿ ಅರಿವು
ನಗರದ ಅನೇಕ ರಸ್ತೆಗಳು ಗುಂಡಿ ಬಿದ್ದಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕುಡ್ಲ ಸೆಲ್ಫೀ  ಮೂಮೆಂಟ್‌ ಎಂಬ ಅಭಿಯಾನವನ್ನು ಆರಂಭಿಸಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ. ಈಗಾಗಲೇ ಗುಂಡಿ ಬಿದ್ದ ರಸ್ತೆಗಳಲ್ಲಿ ಸೆಲ್ಫೀ ತೆಗೆದು ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ.
– ರೂಪನ್‌ ಫೆರ್ನಾಂಡೀಸ್‌, ಎಂಸಿಸಿ ಸಿವಿಕ್‌ ಗ್ರೂಫ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next