Advertisement

ಕುದ್ದುಪದವು: ಅಭಿವೃದ್ಧಿಯ ಭಾಷ್ಯ ಬರೆದರೆ ಉಜ್ವಲ ಭವಿಷ್ಯ

09:58 AM Aug 18, 2018 | |

ವಿಟ್ಲ: ಕೇಪು ಗ್ರಾಮದಲ್ಲಿರುವ ಕುದ್ದುಪದವು ಜಂಕ್ಷನ್‌, ಕಲ್ಲಡ್ಕ ಕಾಂಞಂಗಾಡ್‌ ಅಂತಾರಾಜ್ಯ ಹೆದ್ದಾರಿಯಲ್ಲಿರುವುದು ಪ್ಲಸ್‌ ಪಾಯಿಂಟ್‌. ಆದರೆ ಇದು ಅಭಿವೃದ್ಧಿಯಾಗಬೇಕೆನ್ನುವುದು ಜನ ಡಿಮ್ಯಾಂಡ್‌.

Advertisement

ಕುದ್ದುಪದವು ಒಂದೆಡೆ ವಿಟ್ಲದಿಂದ ನೇರವಾಗಿ ಅಡ್ಯನಡ್ಕ, ಪೆರ್ಲ, ಬದಿಯಡ್ಕ ಮೂಲಕ ಕೇರಳಕ್ಕೆ ತಲುಪಿಸುತ್ತದೆ. ಮತ್ತೊಂದೆಡೆ ಪೆರುವಾಯಿ, ಮಾಣಿಲ ಗ್ರಾಮವನ್ನು ಸ್ವಾಗತಿಸುವ ಹೆಬ್ಟಾಗಿಲು. ಪೆರುವಾಯಿ ಮೂಲಕವೂ ಕೇರಳಕ್ಕೆ ಅಂದರೆ ಬೆರಿಪದವು, ಬಾಯಾರು, ಉಪ್ಪಳಕ್ಕೆ ತಲುಪಬಹುದು. ಮುಚ್ಚಿರಪದವು ಮೂಲಕ ಕನ್ಯಾನವನ್ನು ಸಂಪರ್ಕಿಸಬಹುದು. ಇದು ಹಳೆಯ ಜಂಕ್ಷನ್‌ ಅಷ್ಟೇ ಅಲ್ಲ; ಅಭಿವೃದ್ಧಿ ಎನ್ನುವುದೂ ಹಳೆಯ ಮಾತೇ ಆಗಿದೆ. ಈ ಜಂಕ್ಷನ್‌ ಗೆ ವಿಟ್ಲದಿಂದ 7 ಕಿ.ಮೀ. ಗಡಿಭಾಗವಾದ ಅಡ್ಯನಡ್ಕಕ್ಕೆ ಇಲ್ಲಿಂದ 3 ಕಿ.ಮೀ. ದೂರ. ಕೇರಳದ ಪೆರ್ಲಕ್ಕೆ 15 ಕಿ.ಮೀ.

ರಸ್ತೆ ವಿಸ್ತರಣೆಯಾದರೆ?
ವಿಟ್ಲದಿಂದ ಸಾಗುವಾಗ ಈ ಜಂಕ್ಷನ್‌ ಬಳಿ ತಲುಪುವವರೆಗೂ ಉಳಿದೆರಡು ಮಾರ್ಗಗಳು ಗಮನಕ್ಕೆ ಬಾರವು. ಅಡ್ಯನಡ್ಕದಿಂದ ವಿಟ್ಲಕ್ಕೆ ಸಂಚರಿಸುವಾಗಲೂ ಗಮನಕ್ಕೆ ಬಾರದು. ಅದೇ ಕಾರಣಕ್ಕೆ ಇಲ್ಲಿ ಅಪಘಾತಗಳು ಸಂಭವಿಸಿವೆ. ಇಲ್ಲಿ ರಸ್ತೆ ವಿಸ್ತರಿಸಿ, ಒಂದು ಚೆಂದದ ಸರ್ಕಲ್‌ ಮಾಡಿದರೆ ಅಪಘಾತವೂ ತಡೆಗಟ್ಟಬಹುದು, ಅಭಿವೃದ್ಧಿಗೂ ಹೊಸ ಭಾಷ್ಯ ಬರೆಯಬಹುದು. 

ಬಸ್‌ ನಿಲ್ದಾಣ ಬೇಕು
ಜಂಕ್ಷನ್‌ ಪಕ್ಕದ ಮಾಣಿಲಕ್ಕೆ ತೆರಳುವ ಜಾಗದಲ್ಲಿ ಬಸ್‌ ತಂಗುದಾಣವಿದೆ. ಜಂಕ್ಷನ್‌ಗಿಂತ 50 ಮೀಟರ್‌ ದೂರದಲ್ಲಿ ಕುದ್ದುಪದವು ಪೇಟೆಯಿದೆ. ಇಲ್ಲಿ ಬೆರಳೆಣಿಕೆಯಷ್ಟು ಅಂಗಡಿಗಳಿವೆ. ಅಲ್ಲಿ ಬಸ್‌ ನಿಲ್ದಾಣವಿಲ್ಲ. ಎರಡು ಬೃಹದಾಕಾರದ ಮರಗಳ ಅಡಿಯಲ್ಲಿರುವ ಕಟ್ಟೆಯೇ ತಂಗುದಾಣ. ಸುತ್ತಮುತ್ತಲೂ ಹಳೆಯ ಕಟ್ಟಡಗಳಿವೆ. ಆದರೆ ಸುಸಜ್ಜಿತ ವಾಣಿಜ್ಯ ಕಟ್ಟಡಗಳಿಲ್ಲ. ವಾಣಿಜ್ಯ ಕೇಂದ್ರವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನವಾಗಬೇಕು. ಆಗ ಸುತ್ತಲಿನ ಜನರಿಗೂ ಅನುಕೂಲ.

ಜನಸಂಚಾರ ವಿರಳವಲ್ಲ
ಇದು ಕೇರಳ ಕರ್ನಾಟಕ ಸಂಪರ್ಕದ ಪ್ರಮುಖ ಹೆದ್ದಾರಿಯಾದ್ದರಿಂದ ಜನಸಂಚಾರ ವಿರಳವಲ್ಲ. ಶಬರಿಮಲೆ, ಮಾಣಿಲ ಕ್ಷೇತ್ರಗಳಿಗೆ ಇದೇ ದಾರಿ. ವಿಟ್ಲದಿಂದ ಅಡ್ಯನಡ್ಕ, ಪೆರ್ಲ, ಬದಿಯಡ್ಕ, ಕಾಸರಗೋಡು ಹೋಗಿ ಬರುವ ಖಾಸಗಿ ಬಸ್ಸುಗಳು 20. ಕರ್ನಾಟಕ ಸರಕಾರಿ ಬಸ್ಸುಗಳು 7 ಮತ್ತು ಕೇರಳ ಸರಕಾರಿ ಬಸ್ಸುಗಳು 8. ಬೆರಿಪದವು, ಪೆರುವಾಯಿ, ಕುದ್ದುಪದವು, ಪೆರ್ಲ ಮಾರ್ಗವಾಗಿ ನಾಲ್ಕು ಖಾಸಗಿ ಬಸ್ಸುಗಳಿವೆ. ಮಾಣಿಲದಿಂದ ಬರುವ 3 ಸರಕಾರಿ ಬಸ್‌, ಒಂದು ಖಾಸಗಿ ಬಸ್‌ ಇದೇ ಜಂಕ್ಷನ್‌ನಲ್ಲಿ ಆಗಾಗ ಹಾದುಹೋಗುತ್ತವೆ. ಟೂರಿಸ್ಟ್‌ ಕಾರು, ರಿಕ್ಷಾಗಳು ಸಂಚರಿಸುತ್ತವೆ. 2,500- 3,500 ಜನರ ಓಡಾಟವಿದೆ. ಇಲ್ಲಿ ಇಳಿದು ನಿರ್ವಹಿಸಬಹುದಾದ ವಿಶೇಷ ವ್ಯಾಪಾರ, ವಹಿವಾಟು ಕೇಂದ್ರವಾಗಿ ಬೆಳೆಯಬೇಕಿದೆ. ಅದೇ ಇದರ ಭವಿಷ್ಯ. ಆ ನಿಟ್ಟಿನಲ್ಲೇ ಕಾರ್ಯ ಪ್ರವೃತ್ತವಾಗಬೇಕಿದೆ.

Advertisement

ಏನೇನು ಬೇಕು?
ಇಲ್ಲಿ ಪ್ರಾ. ಶಾಲೆಯಿದೆ. 2 ತಿಂಗಳ ಹಿಂದೆ ಪಂ. ವತಿಯಿಂದ ಸಾರ್ವಜನಿಕ ಶೌಚಾಲಯ ತೆರೆಯಲಾಗಿದೆ. ಪೆಟ್ರೋಲ್‌ ಪಂಪ್‌ ಇದೆ. ಸರಕಾರಿ ಕಚೇರಿಗಳಿಲ್ಲ. ಬಸ್‌ ನಿಲ್ದಾಣ, ತಂಗುದಾಣ ಆಗಬೇಕಿದೆ. ಹೈಮಾಸ್ಟ್‌ ದೀಪವಿಲ್ಲ. ಬ್ಯಾಂಕ್‌, ಸಹಕಾರಿ ಸಂಘಗಳಿಲ್ಲ. ಹತ್ತಿರದಲ್ಲಿ ಆಸ್ಪತ್ರೆಯೂ ಇಲ್ಲ, ಖಾಸಗಿ ಕ್ಲಿನಿಕ್‌ ಇಲ್ಲ. 3 ಕಿ.ಮೀ. ದೂರದ ಅಡ್ಯನಡ್ಕದ ಆಸ್ಪತ್ರೆಗೇ ತೆರಳಬೇಕು. ಇಲ್ಲಿನವರಿಗೆಲ್ಲ ಪ್ರಮುಖ ಕೇಂದ್ರ ವಿಟ್ಲ.ಇಲ್ಲಿನ ಬೇಡಿಕೆ ಈಡೇರಿಸಿದರೆ ಈ ಜಂಕ್ಷನ್‌ಗೆ ಜೀವ ಬರುತ್ತದೆ.

 ಬಸ್‌ ತಂಗುದಾಣ
ಬಸ್‌ ತಂಗುದಾಣವನ್ನು ನಿರ್ಮಿಸಲು ಪಂಚಾಯತ್‌ ಯೋಚಿಸಿತ್ತು. ಆಗ ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ವತಿಯ ಸಹಕಾರದ ಭರವಸೆ ಸಿಕ್ಕಿತ್ತು. ಒಂದು ತಿಂಗಳೊಳಗೆ ನಿರ್ಮಾಣವಾಗಲಿದ್ದು, ಕುದ್ದುಪದವಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನ ಶಾಖೆ ತೆರೆಯಲು ಮನವಿ ಮಾಡುತ್ತೇವೆ. ಚರಂಡಿ ವ್ಯವಸ್ಥೆ ಸರಿಪಡಿಸುತ್ತೇವೆ. ಹೈಮಾಸ್ಟ್‌ ದೀಪ ಅಳವಡಿಸಲು ಪ್ರಯತ್ನಿಸುತ್ತೇವೆ. ಸರ್ಕಲ್‌ ರಚಿಸಲು ಬೇಡಿಕೆ ಸಲ್ಲಿಸುತ್ತೇವೆ. ಈ ಅಭಿವೃದ್ಧಿ ಕಾರ್ಯಗಳಿಗೆ ಪಂಚಾಯತ್‌ ಅನುದಾನ ಸಾಲದು. ಲೋಕೋಪಯೋಗಿ ಇಲಾಖೆ ಅನುದಾನ ನೀಡಬೇಕು. 
– ತಾರಾನಾಥ ಆಳ್ವ
 ಕುಕ್ಕೆಬೆಟ್ಟು ಅಧ್ಯಕ್ಷರು, ಕೇಪು ಗ್ರಾ.ಪಂ.

ಎಲ್ಲರ ಸಹಕಾರವಿರಲಿ
ಇದು ಪ್ರಮುಖ ವಾಣಿಜ್ಯ ಕೇಂದ್ರವಲ್ಲ ಮತ್ತು ಜಮೀನಿನ ಕೊರತೆಯನ್ನು ನಿಭಾಯಿಸಿ, ವಾಣಿಜ್ಯ ಕೇಂದ್ರವಾಗಿಸಬೇಕು. ಮೆಸ್ಕಾಂ ಶಾಖೆಯ ಕಚೇರಿಯನ್ನು ಇಲ್ಲಿ ತೆರೆಯಬೇಕು. ಅದಕ್ಕೆ ಸೂಕ್ತ ಭೂಮಿ ಒದಗಿಸಲು ಪ್ರಯತ್ನಗಳು ನಡೆಯುತ್ತಿವೆ. ಆದರೆ ಎಲ್ಲರ ಸಹಕಾರ ಸಿಕ್ಕರೆ ಅಭಿವೃದ್ಧಿ ಸಾಧ್ಯ. 
 - ರಾಜೇಶ್‌ ಕುಮಾರ್‌ ಬಾಳೆಕಲ್ಲು
    ಅಧ್ಯಕ್ಷರು, ಮಾಣಿಲ ಗ್ರಾ.ಪಂ.

ಜಂಕ್ಷನ್‌ ವಿಸ್ತಾರವಾಗಬೇಕು
ಮಾಣಿಲ, ಪೆರುವಾಯಿ ರಸ್ತೆಯು ಅಂತಾರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಈ ಜಂಕ್ಷನ್‌ನಲ್ಲಿ ವಾಹನ ಚಾಲಕರ ದೃಷ್ಟಿಯ ವ್ಯಾಪ್ತಿ ಹೆಚ್ಚು ದೂರ ತಲುಪುವುದಿಲ್ಲ. ಅಪಘಾತ ಸಂಭವಿಸದಂತೆ ಜಂಕ್ಷನ್‌ ವಿಸ್ತಾರವಾಗಬೇಕು. ಬಸ್‌ ನಿಲ್ದಾಣ ಬೇಕು. ಹೈಮಾಸ್ಟ್‌ ದೀಪ ಬೇಕು.  
– ರಾಲ್ಫ್ ಡಿ’ಸೋಜಾ ಅಧ್ಯಕ್ಷರು, ಪೆರುವಾಯಿ ಗ್ರಾ.ಪಂ.

 ಉದಯಶಂಕರ್‌ ನೀರ್ಪಾಜೆ 

Advertisement

Udayavani is now on Telegram. Click here to join our channel and stay updated with the latest news.

Next