Advertisement

ಸರ್ಕಾರದ ಸ್ಪಂದನೆಯಿಂದ ಆತ್ಮವಿಶ್ವಾಸ ಹೆಚ್ಚಳ

07:13 PM Feb 05, 2021 | Team Udayavani |

ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 2ಎ ಮೀಸಲಾತಿ ನೀಡುವ ಸಂಬಂಧ ಮುಖ್ಯಮಂತ್ರಿಗಳು ಸ್ಪಂದಿಸಿರುವುದು ಸಂತೋಷ ತಂದಿದೆ. ಸಿಎಂ ಸ್ಪಂದನೆ ಹಿನ್ನೆಲೆಯಲ್ಲಿ ನಮ್ಮ ಪಾದಯಾತ್ರೆ ಶಾಂತಿಯುತವಾಗಿ ಮುಂದುವರೆಯುತ್ತದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಸರ್ಕಾರದ ಪರವಾಗಿ ಸಚಿವರಾದ ಮುರುಗೇಶ್‌ ನಿರಾಣಿ ಹಾಗೂ ಸಿಸಿ ಪಾಟೀಲ್‌ ನೇತೃತ್ವದ ನಿಯೋಗ ಗುರುವಾರ ಹಿರಿಯೂರು ತಾಲೂಕು ಐಮಂಗಲ ಬಳಿ ಉಭಯ ಶ್ರೀಗಳನ್ನು ಭೇಟಿಯಾಗಿ ಚರ್ಚಿಸಿತು. ಚರ್ಚೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಶಾಸಕರು, ಸಚಿವರ ಮನವಿ ಮೇರೆಗೆ ಮುಖ್ಯಮಂತ್ರಿಗಳು ಒಳ್ಳೆಯ ಸಂದೇಶ ಕಳುಹಿಸಿದ್ದಾರೆ. ಮೀಸಲಾತಿ ನೀಡಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಇದು ಮೊದಲ ಹಂತದ ಜಯ ಎಂದು ಭಾವಿಸುತ್ತೇವೆ ಎಂದರು.

ಮೊದಲ ಹಂತದಲ್ಲಿ ಶಾಶ್ವತ ಹಿಂದುಳಿದ ವರ್ಗಗಗಳ ಆಯೋಗಕ್ಕೆ ಈ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಸೂಚಿಸಲು ಮುಖ್ಯಮಂತ್ರಿಗಳು ಸಿದ್ಧರಾಗಿದ್ದಾರೆ. ಅದರಂತೆ ಕಾಲಮಿತಿಯೊಳಗೆ ವರದಿ ತರಿಸಿಕೊಂಡು ಆದೇಶದ ಪ್ರತಿ ನಮ್ಮ ಕೈಗೆ  ಬರುವಂತೆ ಮಾಡಲಿ. ನಮ್ಮ ಶಾಸಕರು, ಸಚಿವರು ದೊಡ್ಡ ಪ್ರಯತ್ನ ಮಾಡಿ ಸಿಎಂ ಅವರನ್ನು ಒಪ್ಪಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗ ಪೂರಕವಾಗಿ ವರದಿ ಕೊಡಲಿ ಎಂದು ಆಶಿಸುತ್ತೇವೆ. ಪಾದಯಾತ್ರೆ ಶಾಂತಿಯುತವಾಗಿ ನಿರಂತರವಾಗಿ ನಡೆಯುತ್ತದೆ. ಫೆ. 15 ರೊಳಗೆ ಬೆಂಗಳೂರು ತಲುಪುವಷ್ಟರಲ್ಲಿ ಆದೇಶ ಹೊರಡಿಸಲಿ ಎಂದು ತಿಳಿಸಿದರು.

ಹರಿಹರ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, 22 ದಿನಗಳ ಪಾದಯಾತ್ರೆ ಯಶಸ್ವಿಯಾಗಿದೆ. ಸಮಾಜಕ್ಕೆ ಪಾಠ ಮಾಡುವ ನಾವೇ ಸರಿ ಇಲ್ಲದಿದ್ದರೆ ಶಾಸಕರು ಎಲ್ಲಿ ಸರಿಯಾಗುತ್ತಾರೆ ಎಂಬ ಭಾವನೆ ಇತ್ತು. ಈ ಹಿನ್ನೆಲೆಯಲ್ಲಿ ನಾವು ಒಟ್ಟಾಗಿ ಹೆಜ್ಜೆ ಹಾಕುತ್ತಿದ್ದೇವೆ. ನಮ್ಮ ಸಚಿವರು, ಶಾಸಕರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ ಎಂದು ತಿಳಿಸಿದರು.

ನಮ್ಮ ಪಾದಯಾತ್ರೆ ಬೆಂಗಳೂರುವರೆಗೆ ಮುಂದುವರೆಯುತ್ತದೆ.ಕಾನೂನಾತ್ಮಕ ಎಲ್ಲಾ ಪ್ರಕ್ರಿಯೆಗಳು ನಡೆಯಲಿ. 1994 ರಿಂದ ಆರಂಭವಾದ ಮೀಸಲಾತಿ ಹೋರಾಟ ನಡೆಯುತ್ತಿದೆ. 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಸಾಮಾನ್ಯ ವರ್ಗದಲ್ಲಿದ್ದ ನಮಗೆ 3ಬಿ ನೀಡಿದ್ದಾರೆ. 2ಎ ಕೂಡ ಅವರೇ ಕೊಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ ಎಂದರು.

Advertisement

ಸಚಿವ ಸಿ.ಸಿ. ಪಾಟೀಲ್‌ ಮಾತನಾಡಿ, ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯ ಬೇಡಿಕೆಯನ್ನು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಬಳಿ ಮನವಿ ಮಾಡಿದ್ದೇವೆ. ಈ ಬಗ್ಗೆ ಅಧ್ಯಯನ ಮಾಡಲು ಹಿಂದುಳಿದ ಆಯೋಗದ ಅಧ್ಯಕ್ಷರಿಗೆ ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಗಳು ಆದೇಶ ಮಾಡಲಿದ್ದಾರೆ. ಶ್ರೀಗಳ ಹೋರಾಟಕ್ಕೆ ಯಶಸ್ಸು ತರಲು ಎಲ್ಲರೂ ಮುನ್ನುಗ್ಗುತ್ತೇವೆ ಎಂದು  ಹೇಳಿದರು.

ಸಚಿವ ಮುರುಗೇಶ್‌ ನಿರಾಣಿ ಮಾತನಾಡಿ, 26 ವರ್ಷಗಳಿಂದ ಹೋರಾಟ ನಡೆಯುತ್ತಿದೆ. 2009 ರಲ್ಲಿ ಸಂಪುಟ ಉಪಸಮಿತಿ ರಚಿಸಿ ಅಧ್ಯಯನ ಆಗಿತ್ತು. ಕಾನೂನು ತೊಡಕಿನಿಂದ 3ಬಿಗೆ ಸೇರಿಸಲು ಯಶಸ್ವಿಯಾದೆವು. ಮತ್ತೆ ಯಡಿಯೂರಪ್ಪ ಅವರ ನೇತೃತ್ವದಲ್ಲೇ

ಸೇರುವ ಸದಾವಕಾಶ ಸಿಕ್ಕಿದೆ. ಸಮಾಜದ ಶಾಸಕರು ಸೇರಿದಂತೆ ಎಲ್ಲರ ಮನವಿಗೆ ಸ್ಪಂದಿಸಿ, ಸುಡು ಬಿಸಿಲಿನಲ್ಲಿ ಬರುವುದು  ಬೇಡ ಎಂದು ಪಾದಯಾತ್ರೆ ಕೈಬಿಡಲು ಮನವಿ ಮಾಡಿದ್ದೇವೆ. ಬಿಡಲೇಬೇಕು ಎಂದು ಒತ್ತಾಯ ಮಾಡಿಲ್ಲ ಎಂದರು.

ಇದನ್ನೂ ಓದಿ :ಪಿಡಿಒ ವಿರುದ್ಧ ತನಿಖೆ ವಿಳಂಬ ; ಸದಸ್ಯರಿಂದ ಅಧಿಕಾರಿಗಳ ತರಾಟೆ 

ಹಿಂದುಳಿದ ಆಯೋಗದ ಅಧ್ಯಕ್ಷರಿಗೆ ಸಂಪೂರ್ಣ ಸ್ವಾತಂತ್ರ್ಯ ಇದ್ದು, ಅವರ ಬಗ್ಗೆ ಮಾತನಾಡುವುದಿಲ್ಲ. ಇಬ್ಬರೂ ಶ್ರೀಗಳನ್ನು ಒಂದೇ ವೇದಿಕೆಯಲ್ಲಿ ಕೂರಿಸುವುದು ನಮ್ಮ ಬಹಳ ದಿನಗಳ ಒತ್ತಾಸೆಯಾಗಿತ್ತು. ಇದರಿಂದ ಸಮುದಾಯದ 80 ಲಕ್ಷ ಜನರಿಗೆ ಸಂತೋಷವಾಗಿದೆ ಎಂದು ತಿಳಿಸಿದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಾಳೆ ಎಲ್ಲಾ ಪಕ್ಷದ ಮುಖಂಡರು, ಶಾಸಕರು, ಮಾಜಿ ಶಾಸಕರ ಸಭೆ ಕರೆದಿದ್ದೇವೆ. ಅಲ್ಲಿ ಚರ್ಚಿಸಿ ಮುಂದಿನ ನಿರ್ಣಯ ತಿಳಿಸುತ್ತೇವೆ ಎಂದು ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next