ಬೆಂಗಳೂರು: ರಾಜ್ಯದ ರಾಜಧಾನಿಯ ಜನನಿಬಿಡ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಬಹುದೊಡ್ಡ ಸಂಚನ್ನು ಮಾಡಿದ್ದ ಐವರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ ಮೂರು ತಿಂಗಳ ನಂತರ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ಕೈಗೆತ್ತಿಕೊಳ್ಳಲು ಸಿದ್ಧವಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಜುಲೈನಲ್ಲಿ ಇಲ್ಲಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದರು.“ನಾವು ಆದೇಶವನ್ನು ಸ್ವೀಕರಿಸಿದ್ದೇವೆ. ಎನ್‌ಐಎ ಬಂದು ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ. ಅವರು ಬಂದ ನಂತರ ನಾವು ಪ್ರಕರಣವನ್ನು ಅಧಿಕೃತವಾಗಿ ಅವರಿಗೆ ಹಸ್ತಾಂತರಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಬಂಧಿತರು ಆರ್.ಟಿ. ನಗರದ ಸುಲ್ತಾನ್ ಪಾಳ್ಯ ನಿವಾಸಿ, ಸಯ್ಯದ್ ಸುಹೈಲ್ ಖಾನ್(24), ಕೊಡಿಗೇಹಳ್ಳಿಯ ಮಹಮದ್ ಉಮರ್ (29), ಭದ್ರಪ್ಪ ಲೇಔಟ್ ನಿವಾಸಿ ಜಾಹೀದ್ ತಬ್ರೇಜ್(25), ಸಯ್ಯದ್ ಮುದಾಸಿರ್ ಪಾಷ(28), ಮಹಮ್ಮದ್ ಫೈಸಲ್ (30) ಎನ್ನುವವರಾಗಿದ್ದಾರೆ.
2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 10 ವರ್ಷಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಿಷೇಧಿತ ಲಷ್ಕರ್ -ಎ- ತಯ್ಯಬಾ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಟಿ.ನಾಸಿರ್ ಜತೆ ನಂಟು ಹೊಂದಿದ್ದರು.
ಆರೋಪಿಗಳು ಕೊಲೆ, ದರೋಡೆ, ಕಳ್ಳಸಾಗಣೆ ಮತ್ತು ಇತರ ಅಪರಾಧಗಳ ಆರೋಪಿಗಳಾಗಿದ್ದಾರೆ. ಅವರು ಜೈಲಿನಲ್ಲಿರುವ ಇತರ ಭಯೋತ್ಪಾದಕ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದರು. ಪಾಕಿಸ್ಥಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಜತೆ ನಜೀರ್ ಸಂಪರ್ಕ ಹೊಂದಿರುವ ನಜೀರ್ ಗ್ಯಾಂಗ್ ಸದಸ್ಯರು ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಯೋಜಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತ ಉಗ್ರರಿಂದ ಅಪಾರ ಪ್ರಮಾಣದ ಸ್ಫೋಟಕಗಳನ್ನು, ಏಳು ಪಿಸ್ತೂಲ್‌ಗಳು, 12 ಮೊಬೈಲ್ ಫೋನ್‌ಗಳು, 45 ಲೈವ್ ಕಾರ್ಟ್ರಿಡ್ಜ್‌ಗಳು, ವಾಕಿ-ಟಾಕಿಗಳು ಮತ್ತು ಕೆಲವು ಮಾರಕಾಯುಧಗಳನ್ನು ವಶಪಡಿಸಿಕೊಳ್ಳಲಾಗಿತ್ತು.