Advertisement

ಉಪ್ಪಳದಲ್ಲಿ ಕೆ.ಎಸ್‌.ಟಿ.ಎ. ಮಂಜೇಶ್ವರ ವಲಯ ಸಮಾವೇಶ

01:25 AM Dec 12, 2018 | Karthik A |

ಕುಂಬಳೆ: ಕಾಸರಗೋಡು ಜಿಲ್ಲೆಯಲ್ಲಿ ತೆರವಾಗಿರುವ ನೂರಕ್ಕೂ ಅಧಿಕ ಕನ್ನಡ ಮಾಧ್ಯಮ ಶಿಕ್ಷಕರ ತ್ವರಿತ ನೇಮಕಾತಿಗೆ ರಾಜ್ಯ ಎಡರಂಗ ಸರಕಾರವನ್ನು ಉಪ್ಪಳದಲ್ಲಿ ಜರಗಿದ ಅಧ್ಯಾಪಕ ಸಂಘಟನೆಯಾದ ಕೆ.ಎಸ್‌.ಟಿ.ಎ.ಮಂಜೇಶ್ವರ ವಲಯ ಸಮಾವೇಶ ಅಭಿನಂದಿಸಿದೆ. ಜಿಲ್ಲೆಯ ಮಂಜೇಶ್ವರ, ಕಾಸರಗೋಡು.ಮತ್ತು ಹೊಸದುರ್ಗ ತಾಲೂಕಿನ ಸುಮಾರು 200ರಷ್ಟು ವಿದ್ಯಾಲಯಗಳಲ್ಲಿ ಹೆಚ್ಚಿನ ಸರಕಾರಿ ಕಿರಿಯ ಹಿರಿಯ ಪ್ರಾಥಮಿಕ ಮತ್ತು ಹೈಸ್ಕೂಲುಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಕನ್ನಡ ಮಾಧ್ಯಮ ಶಿಕ್ಷಕರ ನೇಮಕಾತಿ ನನೆಗುದಿಗೆ ಬಿದ್ದು ಸುಗಮ ಶಿಕ್ಷಣ ವ್ಯವಸ್ಥೆಗೆ ಅಡ್ಡಿಯಾಗಿತ್ತು. ಪ್ರಸ್ತುತ ಎಡರಂಗ ಸರಕಾರದ ಶಿಕ್ಷಣ ಸಂರಕ್ಷಣೆ ಯಜ್ಞದ ಧೋರಣೆಯ ಫಲವಾಗಿ ತ್ವರಿತ ನೇಮಕಾತಿಗೆ ಚಾಲನೆ ದೊರೆತಿದೆ.

Advertisement

ನೆರೆಯ ಕರ್ನಾಟಕದಲ್ಲಿ ನೂರಾರು ಶಾಲೆಗಳನ್ನು ಮುಚ್ಚಿ ಶಿಕ್ಷಕ ಹುದ್ದೆಗಳನ್ನು ಕಡಿತಗೊಳಿಸುವಾಗ ಕೇರಳದಲ್ಲಿ ಒಂದು ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠ 8ಕ್ಕಿಂತ ಕಡಿಮೆ ಇದ್ದರೂ ಹುದ್ದೆ ಕಡಿತವಾಗದಂತೆ ಸರಕಾರ ನಿಗಾ ವಹಿಸಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ  ವಿದ್ಯಾರ್ಥಿಗಳಿರುವ ಕಿರಿಯ ಹಿರಿಯ ವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಶಿಕ್ಷಕ ನಿಷ್ಪತ್ತಿಯನ್ನು 1:30ರಿಂದ 1:35ಕ್ಕೆ ಇಳಿಸಿ ನೂತನ ಹುದ್ದೆಯನ್ನು ಸೃಷ್ಟಿಸಿದೆ.ಆದುದರಿಂದ ಶೀಘ್ರದಲ್ಲಿ ನೂರರಷ್ಟು ಕನ್ನಡ ಶಿಕ್ಷಕ ಉದ್ಯೋಗಾರ್ಥಿಗಳು ನೇಮಕಾತಿ ಪಡೆಯಲಿರುವರು. ಎಡರಂಗ ಸರಕಾರದ ಶಿಕ್ಷಣಪರ ಧೋರಣೆಯನ್ನು ಕೆ.ಎಸ್‌.ಟಿ.ಎ. ಸಮಾ ವೇಶದಲ್ಲಿ ವಿಶೇಷ ಠರಾವಿನ ಮೂಲಕ ಪ್ರಶಂಸಿಸಲಾಯಿತು.

ಉಪ್ಪಳ ಸರಕಾರಿ ವಿದ್ಯಾಲಯದಲ್ಲಿ ಜರಗಿದ 28ನೇ ಕೆ.ಎಸ್‌.ಟಿ.ಎ.ಉಪಜಿಲ್ಲಾ ವಾರ್ಷಿಕ ಸಮ್ಮೇಳನವನ್ನು ಸಂಘಟನೆಯ ಪ್ರಾಂತ ಸಮಿತಿ ಸದಸ್ಯ ದಿಲೀಪ್‌ ಕುಮಾರ್‌ ಉದ್ಘಾಟಿಸಿದರು. ವಿಜಯಕುಮಾರ್‌ ಪಾವಳ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ವಿ. ರಾಜೇಶ್‌ ಸಂಘಟನಾ ವರದಿ ಮಂಡಿಸಿದರು. ಸಂಘಟನೆಯ ರಾಜ್ಯ ಸಮಿತಿ ಸದಸ್ಯೆ ಶಾಂತ ಕುಮಾರಿ, ಜಿಲ್ಲಾ ಉಪಾಧ್ಯಕ್ಷ ಮೋಹನ್‌ ಬಿ., ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಷ್ಣುಪಾಲ್‌, ಬಿ.ಶ್ಯಾಮ ಭಟ್‌, ದಿನೇಶ್‌ ವಿ., ಜಿಲ್ಲಾ ಸಮಿತಿ ಸದಸ್ಯ ಪ್ರೇಮರಾಜನ್‌ ಶುಭ ಹಾರೈಸಿದರು.ಉಪಜಿಲ್ಲಾ ಕಾರ್ಯದರ್ಶಿ ಅಹಮ್ಮದ್‌ ಹುಸೈನ್‌ ಪಿ.ಕೆ. ವರದಿ ಮಂಡಿಸಿ ಸ್ವಾಗತಿಸಿದರು. ರತೀಶ್‌ಬಾಬು ಹುತಾತ್ಮ ಮತ್ತು ಕೃಷ್ಣವೇಣಿ ಶ್ರದ್ಧಾಂಜಲಿ ಠರಾವು ಮಂಡಿಸಿದರು. ವಿಜಯಾ ಸಿ.ಎಚ್‌.ವಂದಿಸಿದರು. ನವೋತ್ಥಾನ ಮೌಲ್ಯಗಳನ್ನು ಸಂರಕ್ಷಿಸಲು ಮತ್ತು ಸಹಸ್ರಾರು ಅಧ್ಯಾಪಕ ಸರಕಾರಿ ನೌಕರ ವರ್ಗವನ್ನು ಭಾಧಿಸುತ್ತಿರುವ ಸಹಭಾಗಿತ್ವ ಪಿಂಚಣಿ ಪರಿಶೀಲನೆಗೆ ಸಮಿತಿ ರಚನೆ ಮುಂದಾಗಿರುವ ಸರಕಾರಕ್ಕೆ ಅಭಿನಂದನೆ ಎಂಬ ಠರಾವುಗಳನ್ನು ಸಭೆಯಲ್ಲಿ ಮಂಡಿಸಲಾಯಿತು.

ಅನುದಾನಕ್ಕೆ ಅಭಿನಂದನೆ
ಮೊಗ್ರಾಲ್‌ ಪುತ್ತೂರು ಸರಕಾರಿ ಹೈಸ್ಕೂಲಿಗೆ 5 ಕೋಟಿ ರೂ., ಪೈವಳಿಕೆ ನಗರ ಮತ್ತು ಅಂಗಡಿಮೊಗರು ಸರಕಾರಿ ಹೈಸ್ಕೂಲುಗಳಿಗೆ ತಲಾ 3 ಕೋಟಿ ರೂ. ನಿಧಿ ಅನುದಾನ ಮಂಜೂರು ಮಾಡಿದ ರಾಜ್ಯ ಸರಕಾರವನ್ನು ಸಮಾವೇಶದಲ್ಲಿ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next