Advertisement

ಕೊರಿಯರ್‌, ಪಾರ್ಸೆಲ್‌ ಮೇಲೆ ಕೆಎಸ್ಸಾರ್ಟಿಸಿ ಹದ್ದಿನ ಕಣ್ಣು!

12:53 AM Sep 23, 2021 | Team Udayavani |

ಮಂಗಳೂರು: ರಾಜ್ಯದಲ್ಲಿ ಹಲವು ಅಡ್ಡದಾರಿಗಳ ಮೂಲಕ ಮಾದಕ ವಸ್ತುಗಳ ಸಾಗಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ವೂ ತನ್ನ ಬಸ್‌ಗಳ ಮೂಲಕ ರವಾನೆಯಾಗುವ ಕೊರಿಯರ್‌ ಮತ್ತು ಪಾರ್ಸೆಲ್‌ಗ‌ಳ ಮೇಲೆ ಹೆಚ್ಚಿನ ನಿಗಾ  ವಹಿಸಿದೆ.

Advertisement

ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹಾಗೂ ಗ್ರಾಮೀಣ ಭಾಗದಲ್ಲಿ ಪಾರ್ಸೆಲ್‌ಗ‌ಳ ರವಾನೆಗೆ ಜನರು ಕೆಎಸ್ಸಾರ್ಟಿಸಿ ಅಥವಾ ಖಾಸಗಿ ಸಾರಿಗೆ ವ್ಯವಸ್ಥೆಯನ್ನು  ಬಳಸುತ್ತಿದ್ದಾರೆ. ಇದೀಗ ಡ್ರಗ್ಸ್‌ ಪೆಡ್ಲರ್‌ಗಳು  ಈ ದಾರಿಯನ್ನೂ ಬಳಸುತ್ತಿರುವ ಸಂಶಯವಿದೆ. ಹಾಗಾಗಿ ಕೆಎಸ್ಸಾರ್ಟಿಸಿ ಮುಖ್ಯ ಕಚೇರಿಯಿಂದ ಎಲ್ಲ ವಿಭಾಗಗಳಿಗೂ ನಿಗಾ ವಹಿಸಲು ಸೂಚಿಸಲಾಗಿದೆ. ಪ್ರಯಾಣಿಕರ ಪಾರ್ಸೆಲ್‌ ಮೇಲೂ ಕಣ್ಣಿಡಲು ಟಿಕೆಟ್‌ ಪರೀಕ್ಷಕರಿಗೂ ಸೂಚಿಸಲಾಗಿದೆ.

ಕೆಲವು ಪ್ರಕರಣಗಳು:

ಗಾಂಜಾ ಸಾಗಣೆಗೆ ಕಳೆದ ತಿಂಗಳು ಸರಕಾರಿ ಬಸ್‌ಗಳನ್ನು ಸ್ವತಃ ಇಬ್ಬರು ಸಿಬಂದಿ ಬಳಸಿಕೊಳ್ಳುತ್ತಿದ್ದ ಅಂಶ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಅಧಿಕಾರಿಗಳ ನಿದ್ದೆಗೆಡಿಸಿತ್ತು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಿರಿಯ ಸಹಾಯಕ ಚಾಲಕ ಕಂ ನಿರ್ವಾಹಕರೊಬ್ಬರು ಲಗೇಜುಗಳ ರೂಪದಲ್ಲಿ ಗಾಂಜಾವನ್ನು ವಿಜಯಪುರ ಮತ್ತು ಕಲಬುರಗಿಯಿಂದ ಬೆಂಗಳೂರಿಗೆ ಸಾಗಣೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಕೂಡಲೇ ಇವರನ್ನು ಬಿಎಂಟಿಸಿ ಅಮಾನತುಗೊಳಿಸಿತ್ತು. ಅದೇ ರೀತಿ, ಕಳೆದ ಕೆಲವು ತಿಂಗಳ ಹಿಂದೆ ಕೇರಳದಿಂದ ಖಾಸಗಿ ಬಸ್‌ನಲ್ಲಿ ಗಾಂಜಾ ಹಾಗೂ ಹ್ಯಾಷ್‌ ಆಯಿಲ್‌ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ .

ಕೇರಳದ ಇಬ್ಬರು ಸೇರಿ ಒಟ್ಟು ನಾಲ್ಕು ಮಂದಿಯನ್ನು ಮಡಿವಾಳ ಉಪ ವಿಭಾಗದ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ಬಂಧಿಸಿದ್ದರು. ಆದೇ ರೀತಿ ಆಂಧ್ರಪ್ರದೇಶದಿಂದ ಕಾಸರಗೋಡಿಗೆ ಟೂರಿಸ್ಟ್‌ ಬಸ್‌ನಲ್ಲಿ ಸಾಗಿಸುತ್ತಿದ್ದ 240 ಕಿಲೋ ಗಾಂಜಾವನ್ನು ವಶಪಡಿಸಿಕೊಂಡು ಮೂವರನ್ನು ವಿದ್ಯಾನಗರ ಠಾಣೆ ಪೊಲೀಸರು ಮೇ ತಿಂಗಳಲ್ಲಿ ಬಂಧಿಸಿದ್ದರು.

Advertisement

ಅಂಚೆ ರವಾನೆ ಮೇಲೂ ನಿಗಾ :

ದೇಶ-ವಿದೇಶಗಳಿಗೆ ಅಂಚೆ ಮೂಲಕವೂ ಪಾರ್ಸೆಲ್‌ಗ‌ಳ ರವಾನೆಯಾಗುತ್ತಿದ್ದು, ಈ ಬಗ್ಗೆ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್‌. ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಬಹುತೇಕ ಅಂಚೆ ಕಚೇರಿಯಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಜನರಿಂದ ಪಾರ್ಸೆಲ್‌ಗ‌ಳನ್ನು  ಸ್ವೀಕರಿಸುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವಂತೆ ಸಿಬಂದಿಗೆ ಸೂಚಿಸಲಾಗಿದೆ. ಸಂಶಯ ಬಂದರೆ ಪಾರ್ಸೆಲ್‌ ಗಳನ್ನು ಪರಿಶೀಲಿಸುತ್ತೇವೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ರವಾನೆಯಾಗುತ್ತಿರುವ ವಸ್ತುಗಳನ್ನು ಪರಿಶೀಲಿಸುತ್ತೇವೆ ಎಂದರು.

ಖಾಸಗಿ ಬಸ್‌ಗಳ ಸಿಬಂದಿಗೂ ಎಚ್ಚರಿಕೆ :

ಕರಾವಳಿಯಲ್ಲಿ ಸಾಮಾನ್ಯವಾಗಿ ಸ್ಥಳೀಯವಾಗಿ ಖಾಸಗಿ ಬಸ್‌ಗಳಲ್ಲಿಯೂ ಚಾಲಕ, ನಿರ್ವಾಹಕರ ಮೂಲಕ ಪಾರ್ಸೆಲ್‌ ರವಾನೆಯಾಗುತ್ತದೆ. ಈ ವೇಳೆ ಜಾಗರೂಕರಾಗಿರುವಂತೆ ಖಾಸಗಿ ಬಸ್‌ ಮಾಲಕರ ಸಂಘದಿಂದಲೂ ಸೂಚನೆ ನೀಡಲಾಗಿದೆ.

ರಾಜ್ಯ, ಅಂತಾರಾಜ್ಯ ನಡುವೆ ನಿತ್ಯವೂ ಸಾವಿರಾರು ಬಸ್‌ಗಳು ಸಂಚರಿಸುತ್ತಿದ್ದು, ಕೆಎಸ್ಸಾರ್ಟಿಸಿಯು ಕೆಲವು ತಿಂಗಳ ಹಿಂದೆ ಕಾರ್ಗೋ ಸೇವೆ ಆರಂಭಿಸಿದೆ. ಪಾರ್ಸೆಲ್‌ ಪಡೆಯುವ ವೇಳೆ ದುರು ಪಯೋಗವಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಪಾರ್ಸೆಲ್‌ ನೀಡುವವರಿಂದಲೂ ಮುಚ್ಚಳಿಕೆ ಪತ್ರ ಕಡ್ಡಾಯವಾಗಿ ಪಡೆಯಲಾಗುತ್ತಿದೆ.

ಸಿಬಂದಿ ಕೈಯಲ್ಲಿ ಕಳಿಸುವಂತಿಲ್ಲ

ಈ  ಹಿಂದೆ  ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ವಾರಸುದಾರರಿಲ್ಲ ದೆಯೂ ಪಾರ್ಸೆಲ್‌ ಕಳುಹಿಸಲಾಗುತ್ತಿತ್ತು. ಸಾರ್ವಜನಿಕರು ಚಾಲಕ ಅಥವಾ ನಿರ್ವಾಹಕನ ಕೈಯಲ್ಲಿ ಕಟ್ಟುಗಳನ್ನು ನೀಡಿ ತಮಗೆ ಬೇಕಾದವರಿಗೆ ತಲುಪಿಸುತ್ತಿದ್ದರು. ಆದರೆ ಇನ್ನು ಮುಂದೆ ವಾರಸುದಾರರಿಲ್ಲದ ಪಾರ್ಸೆಲ್‌ಗ‌ಳ (ಕಾರ್ಗೋ ಸೇವೆ ಹೊರತು ಪಡಿಸಿ) ರವಾನೆಯನ್ನು ನಿರ್ಬಂಧಿಸಲು ನಿಗಮ ನಿರ್ಧರಿಸಿದೆ.

 

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next