Advertisement

ಕೆಎಸ್‌ಆರ್‌ಟಿಸಿ: ಜೇಷ್ಠತೆ ಆಧಾರದಲ್ಲಿ ವರ್ಗಾವಣೆ

10:50 PM Jan 30, 2023 | Team Udayavani |

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಶ್ರೇಣಿಯ ಅಧಿಕಾರಿಗಳನ್ನು ಶಾಶ್ವತವಾಗಿ ಆಯಾ ನಿಗಮಗಳಿಗೆ ಜೇಷ್ಠತೆ ಆಧಾರದಲ್ಲಿ ವರ್ಗಾಯಿಸಲು ಸರಕಾರ ಮುಂದಾಗಿದೆ.
ಕೆಎಸ್‌ಆರ್‌ಟಿಸಿ ಸೇರಿ ನಾಲ್ಕೂ ನಿಗಮಗಳಲ್ಲಿ ದರ್ಜೆ- 3ರ ಮೇಲ್ವಿಚಾರಕ ಸಿಬಂದಿ, ದರ್ಜೆ- 2 ಮತ್ತು ದರ್ಜೆ- 1ರ ಕಿರಿಯ ಶ್ರೇಣಿಯ ಅಧಿಕಾರಿಗಳಿಗೆ ಈಗ ಶಾಶ್ವತ ವರ್ಗಾವಣೆ ಆಗಲಿದೆ. ಇದಕ್ಕಾಗಿ ಅಧಿಕಾರಯುತ ಸಮಿತಿ ರಚಿಸಲಾಗಿದ್ದು, ಜೇಷ್ಠತೆ ಆಧಾರದಲ್ಲಿ ನಡೆಯುವ ಈ ವರ್ಗಾವಣೆ ಪ್ರಕ್ರಿಯೆಯನ್ನು ಆನ್‌ಲೈನ್‌ ಕೌನ್ಸೆಲಿಂಗ್‌ ಮೂಲಕ ನಡೆಸಲಾಗುತ್ತಿದೆ.

Advertisement

“ದಕ್ಷ ಅಧಿಕಾರಿಗಳನ್ನು ತಾವು ಇಟ್ಟುಕೊಂಡು ಬೇಡವಾದವರನ್ನು ತಮಗೆ ಕಳುಹಿಸುತ್ತಾರೆ’ ಎಂದು ಹಲವಾರು ವರ್ಷಗಳಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಮೇಲೆ ಉಳಿದೆರಡು ನಿಗಮಗಳ ಆರೋಪ ಇತ್ತು. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದರ್ಜೆ- 3ರ ಮೇಲ್ವಿಚಾರಕ ಸಿಬಂದಿ, ದರ್ಜೆ- 2 ಹಾಗೂ ದರ್ಜೆ- 1 (ಕಿರಿಯ ಶ್ರೇಣಿ) ಅಧಿಕಾರಿಗಳ ಶಾಶ್ವತ ಹಂಚಿಕೆ ನಿಯಮಗಳು- 2023′ ಅನ್ನು ರೂಪಿಸಿ, ಕಿರಿಯ ಶ್ರೇಣಿಯ ಅಧಿಕಾರಿಗಳನ್ನು ಶಾಶ್ವತವಾಗಿ ಆಯಾ ನಿಗಮಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.

ಅನ್ಯಾಯದ ಅಪಸ್ವರ
ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಈ ಹೊಸ ಆದೇಶದ ವ್ಯಾಪ್ತಿಗೆ ಬರಲಿದ್ದು, ಪ್ರಸ್ತುತ ಹೊಂದಿರುವ ಮೂಲ ಹುದ್ದೆಯಲ್ಲಿ ಹುದ್ದೆಯ ಲಭ್ಯತೆ ಮತ್ತು ಸೇವಾ ಜೇಷ್ಠತೆಗೆ ಅನುಗುಣವಾಗಿ ಹಂಚಿಕೆ ಆಗಲಿದೆ. ಅಧಿಕಾರಿಗಳು ತಮಗೆ ಬೇಕಾದ ನಿಗಮವನ್ನು ಕೌನ್ಸೆಲಿಂಗ್‌ ಮೂಲಕ ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಅದಕ್ಕೀಗ ಅಪಸ್ವರ ವ್ಯಕ್ತವಾಗಿದ್ದು, ಉದ್ದೇಶಿತ ಪ್ರಕ್ರಿಯೆಯಿಂದ ಕೆಲವು ಅಧಿಕಾರಿಗಳಿಗೆ ಕಿರಿಕಿರಿ ಆಗುವ ಸಾಧ್ಯತೆಯೂ ಇದೆ ಎಂಬ ಆರೋಪ ಕೇಳಿಬರುತ್ತಿದೆ.

ಈ ಮೊದಲು ಮುಂಭಡ್ತಿ ವೇಳೆ ನಾಲ್ಕೂ ನಿಗಮಗಳ ಅಧಿಕಾರಿಗಳ ಸೇವಾ ಜೇಷ್ಠತೆ ಪರಿಗಣನೆ ಆಗುತ್ತಿತ್ತು. ಇನ್ಮುಂದೆ ಕೇವಲ ಆಯಾ ನಿಗಮಕ್ಕೆ ಸೀಮಿತವಾಗುತ್ತದೆ. ಈಗಾಗಲೇ ಅಲ್ಲಿ ಹಿರಿಯ ಅಧಿಕಾರಿಗಳು ಇದ್ದರೆ, ಅಂತಹ ನಿಗಮಕ್ಕೆ ಹೊಸ ನಿಯಮದಡಿ ವರ್ಗಾವಣೆಗೊಳ್ಳುವ ಅಧಿಕಾರಿಗೆ ಮುಂಭಡ್ತಿ ಸಿಗುವಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಇದರಿಂದ ನಮಗೆ ಅನ್ಯಾಯ ಆಗುವುದಿಲ್ಲವೇ? ಎಂದು ಬಿಎಂಟಿಸಿಯ ಘಟಕ ವ್ಯವಸ್ಥಾಪಕರೊಬ್ಬರು ಕೇಳುತ್ತಾರೆ.

ಕೋರ್ಟ್‌ ಮೊರೆ?
ಮೇಲ್ವಿಚಾರಕರು, ಡಿಟಿಒ, ಡಿಎಂಇ, ಎಂಜಿನಿಯರ್‌ಗಳು, ಸಹಾಯಕ ಭದ್ರತಾ ಅಧಿಕಾರಿ, ಸಾಂಖೀÂಕ ಅಧಿಕಾರಿ, ಸಿಸ್ಟ್‌ಂ ಮ್ಯಾನೇಜರ್‌ ಸಹಿತ ನೂರಾರು ಅಧಿಕಾರಿಗಳು ಬರುತ್ತಾರೆ. ಕೆಲವರನ್ನು ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಅಥವಾ ದಕ್ಷತೆ ಕೊರತೆ ಇರುವ ಅಧಿಕಾರಿಯನ್ನು ಈ ಹಿಂದೆ ವರ್ಗಾವಣೆ ಮಾಡಲಾಗಿರುತ್ತದೆ. ಈಗ ಪುನಃ “ಶಾಶ್ವತ ಹಂಚಿಕೆ ವ್ಯವಸ್ಥೆ’ ಅಡಿ ಅಂತಹ ಅಧಿಕಾರಿ ಮತ್ತದೆ ಜಾಗಕ್ಕೆ ಬರುವ ಸಾಧ್ಯತೆಯೂ ಇದೆ. ಹಾಗಾಗಿ, ಕೋರ್ಟ್‌ ಮೆಟ್ಟಿಲೇರುವುವುದು ಅನಿವಾರ್ಯ ಆಗಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ.

Advertisement

ಎಲ್ಲರಿಗೂ ಸಮಾನ ಅವಕಾಶಗಳು ಸಿಗಲಿ ಎಂಬ ಕಾರಣಕ್ಕೆ ನಿಯಮಗಳನ್ನು ಮಾಡಲಾಗುತ್ತದೆ. ಶಾಶ್ವತ ಹಂಚಿಕೆ ಪ್ರಕ್ರಿಯೆ ಕೂಡ ಅದರ ಭಾಗವೇ ಆಗಿದೆ. ಸದ್ಯಕ್ಕೆ ಈ ವಿಚಾರದಲ್ಲಿ ಯಾವುದೇ ಅಪಸ್ವರ ಕೇಳಿಬಂದಿಲ್ಲ. ಒಂದು ವೇಳೆ ಈ ಬಗ್ಗೆ ಗಮನಕ್ಕೆ ಬಂದರೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ವಿ. ಅನ್ಬುಕುಮಾರ್‌, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ.

Advertisement

Udayavani is now on Telegram. Click here to join our channel and stay updated with the latest news.

Next