Advertisement
ಸದ್ಯ ಕೆಎಸ್‌ಆರ್‌ಟಿಸಿಯು ಪ್ರಯಾಣಿಕರನ್ನು ಸಾಗಿಸುವ ಬಸ್‌ಗಳಲ್ಲೇ ಪಾರ್ಸೆಲ್ ಸೇವೆಗಳನ್ನು ಒದಗಿಸುತ್ತಿದೆ. ಅದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸರಕು ಸಾಗಣೆ ಉದ್ದೇಶಕ್ಕಾಗಿಯೇ ಮೊದಲ ಹಂತದಲ್ಲಿ ಅಂದಾಜು ಹತ್ತು ಲಾರಿಗಳನ್ನು ರಸ್ತೆಗಿಳಿಸಲು ಮುಂದಾಗಿದೆ.ಒಟ್ಟು 20 ಲಾರಿಗಳ ಖರೀದಿಗೆ ಟೆಂಡರ್ ಕರೆಯಲಾಗಿದ್ದು, ಅತ್ಯಂತ ಕಡಿಮೆ ಮೊತ್ತದಲ್ಲಿ ಲಾರಿಗಳನ್ನು ಪೂರೈಸುವ ತಯಾರಿಕಾ ಕಂಪೆನಿಗೆ ಟೆಂಡರ್ ನೀಡಲಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಎರಡು ತಿಂಗಳಲ್ಲಿ ಕೆಎಸ್‌ಆರ್‌ಟಿಸಿ ಸರಕು ಸಾಗಣೆ ಲಾರಿಗಳು ಕಾರ್ಯಾಚರಣೆ ಆರಂಭಿಸಲಿವೆ. ಇದು ಆರ್ಥಿಕ ಸಂಕಷ್ಟದಲ್ಲಿರುವ ನಿಗಮವನ್ನು ಲಾಭದ ಹಳಿಗೆ ತರುವ ಭಾಗವೇ ಆಗಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಇದರ ಮುಂದುವರಿದ ಭಾಗವಾಗಿ ಲಾರಿಗಳನ್ನು ರಸ್ತೆಗಿಳಿಸಲಾಗುತ್ತಿದೆ. ಇಲ್ಲಿ 5-6 ಟನ್‌ವರೆಗೆ ಒಮ್ಮೆಲೇ ಸಾಗಿಸಬಹುದು. ಎಲ್ಲೆಲ್ಲಿ ಬೇಡಿಕೆ ಇದೆ ಎಂಬುದರ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದಕ್ಕೆ ವಿಪುಲ ಅವಕಾಶಗಳಿದ್ದು, ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅಗತ್ಯಬಿದ್ದರೆ ನೆರೆರಾಜ್ಯಗಳಿಗೂ ಪರಿಚಯಿಸುವ ಚಿಂತನೆ ಇದೆ. ಕೆಎಸ್‌ಆರ್‌ಟಿಸಿ ಚಾಲಕರನ್ನೇ ಲಾರಿಗಳಿಗೂ ನಿಯೋಜಿಸಲಾಗುತ್ತದೆ. ಇದಕ್ಕಾಗಿ ಹೊಸದಾಗಿ ನೇಮಕಾತಿ ಮಾಡಿಕೊಳ್ಳುವ ಅಗತ್ಯ ಇರದು ಎಂದು ಹೆಸರು ಹೇಳಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Related Articles
ಸರಕು ಸಾಗಣೆ ಜತೆಗೆ ಗ್ರಾಹಕರ ಮನೆಬಾಗಿಲಿಗೇ ವಸ್ತುಗಳನ್ನು ತಲುಪಿಸುವ ನಿಟ್ಟಿನಲ್ಲೂ ಕೆಎಸ್‌ಆರ್‌ಟಿಸಿ ಚಿಂತಿಸಿದೆ. ನಿಗಮದ ನಿಲ್ದಾಣಗಳಿಗೆ ಬಂದಿಳಿಯುವ ವಸ್ತುಗಳನ್ನು ಸ್ಥಳೀಯ ಸಿಬಂದಿ ಮೂಲಕ ಪೋರ್ಟರ್ ಮಾದರಿಯಲ್ಲಿ ಆಯಾ ಮನೆಗಳಿಗೆ ತಲುಪಿಸಲು ಅವಕಾಶಗಳಿವೆ. ಅದಕ್ಕೆ ಪ್ರತ್ಯೇಕ ಶುಲ್ಕ ವಿಧಿಸಿ, ಸೇವೆಗಳನ್ನು ಕಲ್ಪಿಸಲು ಸಾಧ್ಯವಿದೆ. ಈ ಕುರಿತು ಇನ್ನೂ ಆಲೋಚನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಲಾಜಿಸ್ಟಿಕ್‌ಗಾಗಿಯೇ ಪ್ರತ್ಯೇಕ ಲಾರಿಗಳನ್ನು ರಸ್ತೆಗಿಳಿಸಲು ನಿಗಮ ಚಿಂತನೆ ನಡೆಸಿದೆ. ಆರಂಭದಲ್ಲಿ ಹತ್ತು ಲಾರಿಗಳನ್ನು ಪರಿಚಯಿಸುವ ಉದ್ದೇಶ ಇದೆ. ಈ ಪ್ರಕ್ರಿಯೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಮುಂಬರುವ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.– ವಿ. ಅನ್ಶುಕುಮಾರ್, ಕೆಎಸ್‌ಆರ್‌ಟಿಸಿ ಎಂಡಿ ವಿಜಯಕುಮಾರ ಚಂದರಗಿ