Advertisement

ಬಂಟ್ವಾಳಕ್ಕೆ ಆಗಮಿಸಿದ ಕೆಎಸ್‌ಆರ್‌ಟಿಸಿ ಐಸಿಯು ಬಸ್

12:26 PM Jul 11, 2021 | Team Udayavani |

ಬಂಟ್ವಾಳ: ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಕೈ ಜೋಡಿಸುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿಯು ಸಾರಿಗೆ ಸುರಕ್ಷಾ-ಐಸಿಯು ಬಸ್ಸನ್ನು ವಿನ್ಯಾಸಗೊಳಿಸಿದ್ದು, ಬಂಟ್ವಾಳದ ಜನತೆಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಒಂದು ಐಸಿಯು ಬಸ್ಸು ಈಗಾಗಲೇ ಬಿ.ಸಿ.ರೋಡು ಕೆಎಸ್‌ಆರ್‌ಟಿಸಿ ಘಟಕವನ್ನು ತಲುಪಿದೆ.

Advertisement

ದ.ಕ, ಉಡುಪಿ, ಕೊಡುಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ಹಾಗೂ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಐಸಿಯು ಬಸ್ಸು ಬಂಟ್ವಾಳಕ್ಕೆ ಆಗಮಿಸಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜೂ. 17 ರಂದು ಉಪಮುಖ್ಯಮಂತ್ರಿ ಯಾಗಿರುವ ಸಾರಿಗೆ ಸಚಿವ ಲಕ್ಷಣ್ ಸವದಿ ಅವರನ್ನು ಭೇಟಿಯಾಗಿ ಐಸಿಯು ಬಸ್ಸು ನೀಡುವ ಕುರಿತು ಚರ್ಚಿಸಿದ್ದು, ಡಿಸಿಎಂ ಒಪ್ಪಿಗೆ ಸೂಚಿಸಿದ್ದರು.

ಬಿ.ಸಿ.ರೋಡು ಕೆಎಸ್‌ಆರ್‌ಟಿಸಿ ಘಟಕದಲ್ಲಿ ಈಗಾಗಲೇ ಬಸ್ಸಿನ ವ್ಯವಸ್ಥೆಗಳ ಕುರಿತು ತಾಂತ್ರಿಕ ಸಿಬಂದಿ ಪರಿಶೀಲಿಸಿದ್ದು, ಎಲ್ಲಾ ಘಟಕಗಳು ಕಾರ್ಯಾಚರಣೆಗಳ ಕುರಿತು ಪರಿಶೀಲನೆ ನಡೆಸಲಾಗಿದೆ. ಆಂಬ್ಯುಲೆನ್ಸ್ ರೀತಿಯಲ್ಲೇ ಸೈರನ್ ವ್ಯವಸ್ಥೆಯನ್ನು ಬಸ್ಸು ಒಳಗೊಂಡಿದ್ದು, ಒಳಭಾಗಕ್ಕೆ ಹೊಕ್ಕರೆ ಮಿನಿ ಕ್ಲಿನಿಕ್‌ನ ರೀತಿಯ ವ್ಯವಸ್ಥೆ ಇರುತ್ತದೆ. ಹಿಂದಿನ ಭಾಗದಲ್ಲಿ ರೋಗಿಗಳು ಪ್ರವೇಶಿಸುವ ವ್ಯವಸ್ಥೆ ಇರುತ್ತದೆ.

ಇದನ್ನೂ ಓದಿ: ಪೊಲೀಸರಿಗೆ ಮಾಸ್ಕ್ ಹಾಕಿಕೊಳ್ಳಿ ಎಂದ ಲಾರಿ ಚಾಲಕ! ವಿಡಿಯೋ ವೈರಲ್

ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಐಸಿಯು ಬಸ್ಸು ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡಿದ್ದು, ಐದು ಹಾಸಿಗೆಗಳು, ಪ್ರತಿ ಬೆಡ್‌ಗಳಿಗೂ ಆಕ್ಸಿಜನ್ ವ್ಯವಸ್ಥೆ, ರೋಗಿಗಳ ರಕ್ತದೊತ್ತಡ, ಆಕ್ಸಿಜನ್ ಪ್ರಮಾಣ, ಇಸಿಜಿ, ತಾಪಮಾನ ಮೊದಲಾದವುಗಳನ್ನು ಮಾನಿಟರ್ ಮಾಡುವ ವ್ಯವಸ್ಥೆ ಇರುತ್ತದೆ. ಐವಿ ವ್ಯವಸ್ಥೆ, ವೆಂಟಿಲೇಟರ್ ಅಳವಡಿಸುವ ಸೌಲಭ್ಯ, ತುರ್ತು ಔಷಧ ವ್ಯವಸ್ಥೆ, ತುರ್ತು ಅಗತ್ಯಗಳಿಗೆ ಜನರೇಟರ್ ವ್ಯವಸ್ಥೆಯೂ ಇದೆ. ಜತೆಗೆ ನೋಟಿಸ್ ಬೋರ್ಡ್, ರೋಗಿಗಳ ಶೀಘ್ರ ಗುಣಮುಖರಾಗುವ ಕುರಿತು ಬರಹಗಳು ಕೂಡ ಇವೆ.

Advertisement

ಜು.13 ರಂದು ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಪೊಳಲಿ ಕ್ಷೇತ್ರದಲ್ಲಿ ಸಾರಿಗೆ ಸುರಕ್ಷಾ ಐಸಿಯು ಬಸ್ಸಿಗೆ ಚಾಲನೆ ದೊರೆಯಲಿದ್ದು, ಬಳಿಕ ಬಂಟ್ವಾಳ ಪ್ರತಿ ಗ್ರಾಮಗಳಿಗೆ ತೆರಳಿ ಸಂಚಾರಿ ಆಸ್ಪತ್ರೆಯ ರೀತಿಯಲ್ಲಿ ಬಸ್ಸು ಕಾರ್ಯನಿರ್ವಹಿಸಲಿದೆ. ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬಂದಿ ರೋಗಿಗಳ ತಪಾಸಣೆಯ ಜತೆಗೆ ಅಗತ್ಯ ಔಷಧ ನೀಡುವ ಕಾರ್ಯ ನಿರ್ವಹಿಸಲಿದ್ದಾರೆ. ಈ ಬಸ್ಸು ಕ್ರಮವಾಗಿ ಸಂಚರಿಸಿದರೆ ಸರಾಸರಿಯಾಗಿ 2 ತಿಂಗಳಿಗೊಮ್ಮೆ ಬಸ್ಸು ಒಂದು ಗ್ರಾಮಕ್ಕೆ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕ ರಾಜೇಶ್ ನಾಯ್ಕ್ ಅವರ ವಿಶೇಷ ಪ್ರಯತ್ನದಿಂದ ಬಸ್ಸು ಬಂಟ್ವಾಳಕ್ಕೆ ಆಗಮಿಸಿದ್ದು, ಅವರ ನಿರ್ದೇಶನದಂತೆ ಹಳ್ಳಿ ಹಳ್ಳಿಗೆ ತೆರಳಿ ಸಂಚಾರಿ ಆಸ್ಪತ್ರೆಯ ರೀತಿಯಲ್ಲಿ ಬಸ್ಸು ಕೆಲಸ ಮಾಡುತ್ತದೆ. ಘಟಕದ ಚಾಲಕರು ಅದರ ಚಾಲನೆ ಮಾಡಲಿದ್ದು, ಆರೋಗ್ಯ ಇಲಾಖೆ ವೈದ್ಯರು, ಸಿಬಂದಿ ರೋಗಿಗಳ ತಪಾಸಣೆ ನಡೆಸಲಿದ್ದಾರೆ. ಪ್ರತಿದಿನ ಬಸ್ಸು ಬಿ.ಸಿ.ರೋಡು ಘಟಕಕ್ಕೆ ಆಗಮಿಸಲಿದೆ.-ಶ್ರೀಶ ಭಟ್ ಘಟಕ ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ, ಬಿ.ಸಿ.ರೋಡು.

Advertisement

Udayavani is now on Telegram. Click here to join our channel and stay updated with the latest news.

Next