ಬೆಂಗಳೂರು: ಕೋವಿಡ್ ಮೂರನೇ ಅಲೆ ಎದುರಿಸಲು ಭರದ ಸಿದ್ಧತೆಗಳು ನಡೆದಿದ್ದು, ಇದಕ್ಕೆ ಪೂರಕವಾಗಿ ಕನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಕೂಡ ತನ್ನ ಸಿಬ್ಬಂದಿಗಾಗಿ ಮೀಸಲಿರುವ ಆಸ್ಪತ್ರೆಯನ್ನು ಮಕ್ಕಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಮುಂದಾಗಿದೆ.
ಇಲ್ಲಿನ ಜಯನಗರದಲ್ಲಿರುವ ಹೊರರೋಗಿಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಹಾಸಿಗೆಗಳ ಕೆಎಸ್ಆರ್ಟಿಸಿ ಆಸ್ಪತ್ರೆ (ಜನರಲ್ ಆಸ್ಪತ್ರೆ) ಯನ್ನು ಮೇಲ್ದರ್ಜೆಗೇರಿಸಿ, ಅಲ್ಲಿ 50 ಹಾಸಿಗೆಗಳ ಮಕ್ಕಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಕೆಎಸ್ಆರ್ಟಿಸಿ ಉದ್ದೇಶಿ ಸಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕೋವಿಡ್ ಮೂರನೇ ಅಲೆ ಕಾಲಿಡುವ ಭೀತಿ ಇದ್ದು, ಇದು ಮಕ್ಕಳಿಗೆ ಹೆಚ್ಚು ವ್ಯಾಪಿಸುವ ಸಾಧ್ಯತೆ ಇದೆ ಎಂದೂ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗಿನಿಂದಲೇ ವೈದ್ಯಕೀಯ ಮೂಲಸೌಕರ್ಯಗಳ ಅಭಿ ವೃದ್ಧಿಗೆ ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕೆ ಅನುಗುಣವಾಗಿ ನಿಗಮವು 50 ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗೆ ಮೀಸಲಿಡಲು ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ ಸೇವೆಗೆ ಅಣಿ; ಎಂಡಿ: ಇಂತಹದ್ದೊಂದು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮತ್ತೂಂದೆಡೆ ಈ ನಿಟ್ಟಿನಲ್ಲಿ ಸಿದ್ಧತೆಯನ್ನೂ ಮಾಡಲಾಗುತ್ತಿದೆ. ಅಂದಾಜು ವೆಚ್ಚ ಇನ್ನೂ ಅಂತಿಮವಾಗಿಲ್ಲ. ಅಕ್ಟೋಬರ್-ನವೆಂಬರ್ ವೇಳೆಗೆ ಈ ಆಸ್ಪತ್ರೆ ಮಕ್ಕಳ ಚಿಕಿತ್ಸೆ ಮತ್ತು ಆರೈಕೆಗೆ ಅಣಿಗೊಳಿಸುವ ಗುರಿ ಇದೆ. ಸರ್ಕಾರ ಮತ್ತು ನಿಗಮದ ಸಹಯೋಗದಲ್ಲಿ ಕೈಗೆತ್ತಿಕೊಳ್ಳುವ ಯೋಚನೆ ಇದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಉದಯವಾಣಿಗೆ ಸ್ಪಷ್ಟಪಡಿಸಿದರು. ಮಕ್ಕಳ ರೋಗ ತಜ್ಞರು, ವೈದ್ಯಕೀಯ ಉಪಕರಣಗಳು, ಆಕ್ಸಿಜನ್ ವ್ಯವಸ್ಥೆ, ಅಗತ್ಯ ವೈದ್ಯಕೀಯ ಸಿಬ್ಬಂದಿ ಇಲ್ಲಿ ಇರಲಿದ್ದಾರೆ. ಪ್ರಸ್ತುತ ಸಾರಿಗೆ ಸಿಬ್ಬಂದಿಗೆ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ದಾಖಲಾತಿ ಸಂದರ್ಭದಲ್ಲಿ ಮಕ್ಕಳ ಜತೆಗೆ ಸಾರಿಗೆ ನೌಕರರು ಮತ್ತು ಅವರ ಮಕ್ಕಳಿಗೆ ಶೇ. 50ರಷ್ಟು ಆದ್ಯತೆ ನೀಡಬೇಕು ಎಂಬ ನಿಯಮ ಇರಲಿದೆ ಎಂದೂ ಹೇಳಿದರು.
ವಿಜಯಕುಮಾರ್ ಚಂದರಗಿ