Advertisement

ಕೆಎಸ್‌ಆರ್‌ಟಿಸಿ: ಕಾಡಲಿದೆ ಬಸ್‌ ಬರ

07:58 PM Sep 21, 2021 | Team Udayavani |

ಪುತ್ತೂರು: ಸಂಚಾರಕ್ಕೆ ಯೋಗ್ಯವಲ್ಲದ ಅನುಪಯುಕ್ತ ಬಸ್‌ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದರೂ, ಹೊಸ ಬಸ್‌ ಪೂರೈಕೆಯಾಗದಿರುವ ಪರಿಣಾಮ ಭವಿಷ್ಯದಲ್ಲಿ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಸಂಚಾರಕ್ಕೆ ಬಸ್‌ ಕೊರತೆ ಉಂಟಾಗಲಿದೆ.

Advertisement

ದ.ಕ.ಜಿಲ್ಲೆಯ ಗ್ರಾಮಾಂತರ ಸಂಚಾರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ಹೊಂದಿರುವ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ದಿನನಿತ್ಯ 545ಕ್ಕೂ ಅಧಿಕ ರೂಟ್‌ಗಳಿದ್ದು ಅಷ್ಟೇ ಪ್ರಮಾಣದ ಬಸ್‌ ಬೇಡಿಕೆಯು ಇದೆ. ಹೀಗಾಗಿ ಬಸ್‌ ಕೊರತೆ ಉಂಟಾದಲ್ಲಿ ಪ್ರಯಾಣಿಕರ ಸಂಚಾರಕ್ಕೂ ಬಿಸಿ ತಟ್ಟಲಿದೆ.

127 ಬಸ್‌ ಸ್ಕ್ಯಾಪ್‌ ಪಟ್ಟಿಗೆ :

ಪುತ್ತೂರು, ಸುಳ್ಯ, ಧರ್ಮಸ್ಥಳ, ಬಿ.ಸಿ.ರೋಡ್‌ ಹಾಗೂ ಮಡಿಕೇರಿ ಘಟಕದಲ್ಲಿ ಒಟ್ಟು 127 ಬಸ್‌ಗಳನ್ನು ಅನುಪಯುಕ್ತದ ಪಟ್ಟಿಗೆ ಸೇರಿಸಲಾಗಿದೆ. 90 ಬಸ್‌ಗಳನ್ನು ಏಲಂ ಮಾಡಲಾಗಿದೆ. ಹೀಗಾಗಿ ಈ ಹಿಂದೆ ಹೆಚ್ಚುವರಿಯಾಗಿ  ಲಭ್ಯವಿರುತ್ತಿದ್ದ ಬಸ್‌ ಸಂಖ್ಯೆಯೀಗ ಇಳಿದಿದೆ. ಇದರಿಂದ ಅನಿವಾರ್ಯ ಸಂದರ್ಭದಲ್ಲಿ ಹೆಚ್ಚುವರಿ ಬಸ್‌ ಬಳಕೆಗೂ ಹೊಡೆತ ಬೀಳಲಿದೆ.

ಅನುಪಯುಕ್ತ ಬಸ್‌ಗಳ ಮಾರಾಟ:

Advertisement

ಪುತ್ತೂರು ವಿಭಾಗದಲ್ಲಿ 2018-19 ಹಾಗೂ  2019-20 ನೇ ಸಾಲಿನಲ್ಲಿ 90 ಬಸ್‌ಗಳನ್ನು ಅನುಪಯುಕ್ತವೆಂದು ಪಟ್ಟಿ ಮಾಡಿ ಪುತ್ತೂರಿನಲ್ಲಿ ಏಲಂ ಮಾಡಲಾಗಿದೆ. ಇದರಿಂದ 1.53 ಕೋ.ರೂ. ಆದಾಯ ಲಭಿಸಿದೆ. ಸಾಮಾನ್ಯ ಸಾರಿಗೆ ಬಸ್‌ಗಳು ಕನಿಷ್ಠ 1.50 ಲಕ್ಷ ರೂ.ನಿಂದ 1.78 ಲಕ್ಷ ರೂ. ತನಕ ಮಾರಾಟವಾಗಿದೆ. ರಾಜಹಂಸ ಬಸ್‌ಗಳು ಕನಿಷ್ಠ 1.75 ಲಕ್ಷ ರೂ.ನಿಂದ 2.50 ಲಕ್ಷ ರೂ.ತನಕ ಮಾರಾಟವಾಗಿದೆ. ಉಳಿದಂತೆ 2020-21ನೇ ಸಾಲಿನಲ್ಲಿ ವಿಭಾಗದಲ್ಲಿ ಅನುಪಯುಕ್ತ ಎಂದು ಗುರುತಿಸಲ್ಪಟ್ಟಿರುವ 127 ಬಸ್‌ಗಳ ಪೈಕಿ 45 ಬಸ್‌ಗಳನ್ನು ಹಾಸನ ವರ್ಕ್‌ಶಾಪ್‌ಗೆ ಕಳುಹಿಸಲಾಗಿದೆ. ಉಳಿದ ಬಸ್‌ಗಳ ವಿಲೇವಾರಿಗೆ ಪ್ರಕ್ರಿಯೆ ನಡೆಯುತ್ತಿದೆ.

ಬಾರದ ಹೊಸ ಬಸ್‌:

ಕಳೆದ ಮೂರು ವರ್ಷಗಳಲ್ಲಿ ಪುತ್ತೂರು ವಿಭಾಗೀಯ ವ್ಯಾಪ್ತಿಯಲ್ಲಿ 220 ಬಸ್‌ಗಳು ಅನುಪಯುಕ್ತ ಪಟ್ಟಿಗೆ ಸೇರ್ಪಡೆಗೊಂಡು ಸಂಚಾರ ಸ್ಥಗಿತಗೊಳಿಸಿದೆ. ಆದರೆ ಇಷ್ಟೇ ಸಂಖ್ಯೆಯ ಹೊಸ ಬಸ್‌ ಪೂರೈಕೆ ಆಗಿಲ್ಲ. 2020 ರಲ್ಲಿ 12 ಬಸ್‌ ಮಾತ್ರ ಪೂರೈಕೆಯಾಗಿದೆ. ಹಳೆ ಬಸ್‌ಗೆ ಬದಲಿಯಾಗಿ ವಿಭಾಗೀಯ ಕಚೇರಿಯಿಂದ ಹೊಸ ಬಸ್‌ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದೆಡೆ ಕೋವಿಡ್‌ ಸಂಕಷ್ಟ ಹಾಗೂ ಆರ್ಥಿಕ ನಷ್ಟದಲ್ಲಿರುವ ಸಂಸ್ಥೆ ಸದ್ಯಕ್ಕೆ ಹೊಸ ಬಸ್‌ ಒದಗಿಸುವುದು ಅನುಮಾನ ಎನಿಸಿದೆ. ಹೀಗಾಗಿ ಗ್ರಾಮಾಂತರ ಪ್ರದೇಶದಲ್ಲಿ ಹೊಸ ರೂಟ್‌ಗೆ ಬೇಡಿಕೆ ಬಂದರೂ ಬಸ್‌ ಕೊರತೆ ಉಂಟಾಗುವ ಸಾಧ್ಯತೆ ಇದೆ.

ಅವಧಿ ನಿಗದಿ ಹೇಗೆ? :

ಪ್ರತೀ ಬಸ್‌ 9 ಲಕ್ಷ ಕಿ.ಮೀ. ಓಡಿದ ಅನಂತರ ಅವು ಸಂಚಾರಕ್ಕೆ ಯೋಗ್ಯವಲ್ಲ ಎಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ಬಸ್‌ನ ಸಾಮರ್ಥ್ಯವನ್ನು ಗಮನಿಸಿ 11 ಲಕ್ಷ ಕಿ.ಮೀ. ತನಕವು ಓಡಿಸಬಹುದು. ಅನುಪಯುಕ್ತ ಬಸ್‌ಗಳನ್ನು ರನ್ನಿಂಗ್‌ ಸ್ಕ್ಯಾಪ್‌ ಮತ್ತು ನಾನ್‌ ರನ್ನಿಂಗ್‌ ಸ್ಕ್ಯಾಪ್‌ ಎಂದು ಪಟ್ಟಿ ಮಾಡಿದ ಅನಂತರ ಕಂಟ್ರೋಲ್‌ ಆಫ್‌ ಸ್ಟೋರ್ಸ್‌ ಆ್ಯಂಡ್‌ ಪರ್ಚೇಸ್‌ ಮಾರ್ಗದರ್ಶನದಲ್ಲಿ ಮುಂದಿನ ಪ್ರಕ್ರಿಯೆ ನಡೆಯುತ್ತದೆ. ಆರ್‌ಟಿಒದಿಂದ ನೋಂದಣಿ ಸಂಖ್ಯೆ ರದ್ದು ಮಾಡಿದ ಬಳಿಕವಷ್ಟೇ ಅನುಪಯುಕ್ತ ಬಸ್‌ಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಏಲಂ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಇದು ಕೇಂದ್ರ ಕಚೇರಿ ಮೂಲಕವೇ ನಡೆಯುತ್ತದೆ.

ಅನುಪಯುಕ್ತ ಬಸ್‌ಗಳಿಗೆ ಬದಲಿಯಾಗಿ ಹೊಸ ಬಸ್‌ ಪೂರೈಕೆ ಆಗಬೇಕಿದೆ. ಈ ಹಿಂದೆ ಓಡಾಟಕ್ಕಿಂತ 40 ಬಸ್‌ಗಳು ಹೆಚ್ಚುವರಿಯಾಗಿ ಇತ್ತು. ಈಗ ಓಡಾಟಕ್ಕೆ ತಕ್ಕಷ್ಟೇ ಬಸ್‌ಗಳಿವೆ. ಅನುಪಯುಕ್ತ ಬಸ್‌ಗೆ ಪರ್ಯಾಯವಾಗಿ ಹೊಸ ಬಸ್‌ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಜಯಕರ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ

 

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next