Advertisement

ಕೆಎಸ್‌ಆರ್‌ಟಿಸಿ ಬಿ.ಸಿ. ರೋಡ್‌ ಡಿಪೋ: ಬೇಕಿವೆ 4 ಹೆಚ್ಚುವರಿ ಬಸ್‌

11:18 PM Sep 25, 2019 | Sriram |

ಬಂಟ್ವಾಳ: ಗ್ರಾಮೀಣ ಜನತೆಯ ಸಂಪರ್ಕದ ಕೊಂಡಿ ಕೆಎಸ್‌ಆರ್‌ಟಿಸಿಯ ಡಿಪೋಗಳಿಗೆ ಹೊಸ ಬಸ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದ್ದು, ಪ್ರಸ್ತುತ ಬಿ.ಸಿ. ರೋಡ್‌ ಡಿಪೋದಲ್ಲಿ 4 ಸಾಮಾನ್ಯ ಬಸ್‌ಗಳ ಕೊರತೆಯಿದೆ. ಡಿಪೋದಲ್ಲಿ ಒಟ್ಟು 114 ಬಸ್‌ಗಳಿದ್ದು, 5 ಹೆಚ್ಚುವರಿ ಬಸ್‌ಗಳಿರ ಬೇಕಿದ್ದರೂ ಪ್ರಸ್ತುತ ಒಂದು ಮಾತ್ರ ಇದೆ.

Advertisement

ಹೊಸ ಬಸ್‌ಗಳು ಆಗಮಿಸದೇ ಇದ್ದರೂ ಸಂಚಾರ ನಡೆಸಲು ಯೋಗ್ಯವಲ್ಲದ ಬಸ್‌ಗಳ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ಬಿ.ಸಿ. ರೋಡ್‌ ಡಿಪೋಗೆ ಕಳೆದ ಸುಮಾರು 9 ತಿಂಗಳ ಹಿಂದೆ 4 ಹೊಸ ಬಸ್‌ಗಳು ಆಗಮಿಸಿದ್ದು, ಆ ಬಳಿಕ ಹೊಸ ಬಸ್‌ಗಳು ಆಗಮಿಸಿಲ್ಲ. ರಾಜ್ಯಾದ್ಯಂತ ಈ ಸಮಸ್ಯೆಯಿದ್ದು, ಸೀಮಿತ ಸಂಖ್ಯೆಯ ಹೆಚ್ಚುವರಿ ಬಸ್‌ಗಳಿದ್ದ ಡಿಪೋಗಳಿಗೆ ಇದು ತೊಂದರೆಯಾಗುತ್ತದೆ.

ಬಿ.ಸಿ. ರೋಡ್‌ನ‌ ಒಟ್ಟು 114 ಬಸ್‌ಗಳು 112 ರೂಟ್‌ಗಳಲ್ಲಿ ಸಂಚಾರ ನಡೆಸುತ್ತಿವೆ. 2017ರಲ್ಲಿ ಬಿ.ಸಿ. ರೋಡ್‌ಡಿಪೋದಿಂದ 5 ನೂತನ ಬಸ್‌ಗಳು ಬಿ.ಸಿ. ರೋಡ್‌ – ಕಾಸರಗೋಡು ಮಧ್ಯೆ ಓಡಾಟ ಆರಂಭಿಸಿದ್ದು, ಪ್ರಸ್ತುತ ಎಲ್ಲ ಬಸ್‌ಗಳು ಎರಡೂ ಕಡೆಗಳಿಂದ 12 ಟ್ರಿಪ್‌ ನಡೆಸುತ್ತಿವೆ.

ರಾತ್ರಿ ಬಸ್‌ಗಳ ಹೊಂದಾಣಿಕೆ
ಪ್ರಸ್ತುತ ಬಿ.ಸಿ. ರೋಡ್‌ ಡಿಪೋದಲ್ಲಿ ಸಾಮಾನ್ಯ ರೂಟ್‌ಗಳಲ್ಲಿ ಓಡಾಟ ನಡೆಸುವ ಒಂದು ಮಾತ್ರ ಹೆಚ್ಚುವರಿ ಬಸ್‌ ಇದ್ದು, ಯಾವುದೇ ರೂಟ್‌ನ ಬಸ್‌ ಕೈಕೊಟ್ಟರೂ ಟ್ರಿಪ್‌ ಕಡಿತ ಮಾಡಬೇಕಾದ ಸ್ಥಿತಿ ಇದೆ. ಇದಕ್ಕಾಗಿ ರಾತ್ರಿ ವೇಳೆ ಬೆಂಗಳೂರು ಸಹಿತ ದೂರದ ರೂಟ್‌ಗಳಲ್ಲಿ ಸಂಚರಿಸಿದ್ದ ಬಸ್‌ಗಳನ್ನು ಹಗಲು ವೇಳೆ ಸ್ಟೇಟ್‌ಬ್ಯಾಂಕ್‌-ವಿಟ್ಲ, ಸ್ಟೇಟ್‌ಬ್ಯಾಂಕ್‌-ಪುತ್ತೂರು ಮೊದಲಾದ ರಸ್ತೆಗಳಲ್ಲಿ ಓಡಿಸಿ ಹೊಂದಾಣಿಕೆ ನಡೆಸಲಾಗುತ್ತಿದೆ.

ದೂರದ ರೂಟ್‌ಗಳಿಗೆ ಹೆಚ್ಚಿನ ಕಂಡೀಶನ್‌ಗಳಿರುವ ಬಸ್‌ಗಳ ಆವಶ್ಯಕತೆ ಅಗತ್ಯವಾಗಿದ್ದು, ಆದರೆ ಬಸ್‌ಗಳು ರಾತ್ರಿ ಹಾಗೂ ಹಗಲು ಎಡೆಬಿಡದೆ ಸಂಚರಿಸಿದರೆ ಬಸ್‌ಗಳ ಕಿ.ಮೀ. ಸಂಚಾರ ಹೆಚ್ಚಳಗೊಂಡು ಶೀಘ್ರ ಸ್ಟಾಪ್ ಗೆ ಹೋಗುವ ಸಾಧ್ಯತೆ ಇರುತ್ತದೆ ಎಂದು ಮೂಲಗಳು ಹೇಳುತ್ತವೆ.

Advertisement

5 ರಾಜಹಂಸ, 4 ಸ್ಲೀಪರ್‌
ಬಿ.ಸಿ. ರೋಡ್‌ ಡಿಪೋದಲ್ಲಿ ಒಟ್ಟು 5 ರಾಜಹಂಸ ಬಸ್‌ಗಳಿದ್ದು, 4 ರೂಟ್‌ಗಳಲ್ಲಿ ಸಂಚಾರ ನಡೆಸುತ್ತಿವೆ. ಅಂದರೆ ಒಂದು ಬಸ್‌ ಹೆಚ್ಚುವರಿಯಾಗಿರುತ್ತದೆ. ಜತೆಗೆ 4 ನಾನ್‌-ಎಸಿ ಸ್ಲೀಪರ್‌ ಬಸ್‌ಗಳು ಓಡಾಟ ನಡೆಸುತ್ತಿದ್ದು, 2 ಬಸ್‌ಗಳು ಪುತ್ತೂರು ಮೂಲಕ ಬೆಂಗಳೂರಿಗೆ ಹಾಗೂ 2 ಬಸ್‌ಗಳು ಧರ್ಮಸ್ಥಳದ ಮೂಲಕ ಬೆಂಗಳೂರಿಗೆ ಸಂಚಾರ ನಡೆಸುತ್ತಿವೆ. ಆದರೆ ಬಿ.ಸಿ. ರೋಡ್‌ ಡಿಪೋದಲ್ಲಿ ಎಸಿ ಸ್ಲೀಪರ್‌ ಬಸ್‌ಗಳಿಲ್ಲ.

ನಾಲ್ಕು ಬಸ್‌ಗಳ ಆವಶ್ಯಕತೆ
ಬಿ.ಸಿ. ರೋಡ್‌ ಡಿಪೋದಲ್ಲಿ ಪ್ರಸ್ತುತ ಒಟ್ಟು 114 ಬಸ್‌ಗಳಿದ್ದು, ಹೆಚ್ಚುವರಿಯಾಗಿ ಕೇವಲ ಒಂದು ಮಾತ್ರ ಸಾಮಾನ್ಯ ಬಸ್‌ ಇದೆ. ಹೀಗಾಗಿ ಡಿಪೋಗೆ 4 ಬಸ್‌ಗಳ ಆವಶ್ಯಕತೆ ಇದೆ. ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ರಾತ್ರಿ ಓಡಾಟ ನಡೆಸುವ ಬಸ್‌ಗಳನ್ನು ಹಗಲು
ಹೊತ್ತಿನಲ್ಲಿ ಓಡಿಸಲಾಗುತ್ತಿದೆ.
 - ಶ್ರೀಶ ಭಟ್‌,ಡಿಪೋ ಮ್ಯಾನೇಜರ್‌,
ಕೆಎಸ್‌ಆರ್‌ಟಿಸಿ, ಬಿ.ಸಿ. ರೋಡ್‌

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next