Advertisement

ಕಾಂಗ್ರೆಸ್ ನಾಯಕರು ಮಹಾ ಸುಳ್ಳುಗಾರರು,ಇವರಿಗೆ ನೋಬೆಲ್ ಪ್ರಶಸ್ತಿ ಕೊಡಬೇಕು: ಈಶ್ವರಪ್ಪ

05:48 PM Nov 21, 2021 | Team Udayavani |

ಮಂಡ್ಯ: ಪ್ರಸ್ತುತ ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ಕೇವಲ ಪ್ರಾದೇಶಿಕ ಪಕ್ಷವಾಗಿ ಬದಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

Advertisement

ನಗರದ ಎ.ಸಿ.ಮಾದೇಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆದ ಬಿಜೆಪಿ ಜನಸ್ವರಾಜ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷ ದೇವೇಗೌಡರ ರೂಪದಲ್ಲಿ ಪ್ರಾದೇಶಿಕ ಪಕ್ಷವಾಗುತ್ತಿದೆ. ಕಾಂಗ್ರೆಸ್ ನಾಯಕರು ಮಹಾ ಸುಳ್ಳುಗಾರರು. ಇವರಿಗೆ ನೋಬೆಲ್ ಪ್ರಶಸ್ತಿ ಕೊಡಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಸುಳ್ಳು ಹೇಳುವುದರಲ್ಲಿ ಪೈಪೋಟಿ ನಡೆಯುತ್ತಿದೆ ಎಂದು ಟೀಕಿಸಿದರು.

ಕದ್ದುಮುಚ್ಚಿ ಲಸಿಕೆ ಹಾಕಿಸಿಕೊಂಡರು:

ಜಗತ್ತಿಗೆ ಕೋವಿಡ್ ಕಂಠಕ ಎದುರಾದಾಗ ಪ್ರಧಾನಿ ನರೇಂದ್ರಮೋದಿಯವರು ಇದರಿಂದ ದೇಶವಾಸಿಗಳನ್ನು ರಕ್ಷಿಸಲು ಬಹಳಷ್ಟು ಶ್ರಮವಹಿಸಿದ್ದರು. ಇದರ ಫಲವಾಗಿ ನಮ್ಮ ವಿಜ್ಞಾನಿಗಳು ಲಸಿಕೆ ಸಂಶೋಧಿಸಿದರು. ಕೋವಿಡ್ ಲಸಿಕೆ ನೀಡಲು ಪ್ರಾರಂಭಿಸಿದ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಲಸಿಕೆ ಹಾಕಿಸಿಕೊಂಡಲ್ಲಿ ಪುರುಷತ್ವ ಹೋಗಿಬಿಡುತ್ತೆ. ಯಾರೂ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಜನರಲ್ಲಿ ಗೊಂದಲ ಮೂಡಿಸಿದ್ದರು. ಆದರೆ ಅವರೇ ಜೀವ ಉಳಿಸಿಕೊಳ್ಳಲು ಕದ್ದುಮುಚ್ಚಿ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆದರು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ಪಕ್ಷದೊಳಗಿನ ವೈಮನಸ್ಸಿನಿಂದಾಗಿ ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಿದ್ದಾರೆ: ಬಿಎಸ್ ವೈ

Advertisement

ಕೈ ನಾಯಕರಿಗೆ ನಾಚಿಕೆ-ಮರ್ಯಾದೆ ಇಲ್ಲ:

ಜಗತ್ತಿನ ಯಾವ ರಾಷ್ಟ್ರಕ್ಕೆ ಪ್ರಧಾನಿ ಮೋದಿಯವರು ಹೋದರೂ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡು ವಿಶ್ವನಾಯಕನ ಪಟ್ಟ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮೋದಿಯವರನ್ನು ಏಕವಚನದಲ್ಲಿ ಲಘುವಾಗಿ ಮಾತನಾಡುತ್ತಾರೆ. ಇವರಿಗೆ ನಾಚಿಕೆ-ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು.

8.5 ಕೋಟಿ ಮನೆಗಳಿಗೆ ನೀರಿನ ಸಂಪರ್ಕ:

ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆ ರೂಪಿಸಿದ್ದಾರೆ. 20 ಕೋಟಿ ಕುಟುಂಬಗಳಿರುವ ದೇಶದಲ್ಲಿ ಮೋದಿಯವರು 7 ವರ್ಷಗಳಲ್ಲಿ 8.5 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ ಎಂದರು.

ಹೆಚ್ಚಿನ ಅನುದಾನದ ಭರವಸೆ:

ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಶುದ್ಧ ಕುಡಿಯುವ ನೀರೊದಗಿಸಲು ಜಿಲ್ಲೆಗೆ 1700 ಕೋಟಿ ಬಿಡುಗಡೆ ಮಾಡಿದ್ದೇನೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಬಿಜೆಪಿ ಅಭ್ಯರ್ಥಿ ಬಿ.ಸಿ. ಮಂಜು ಅವರನ್ನು ಗೆಲ್ಲಿಸಿ ಕಳುಹಿಸಿದರೆ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಅಂಗಾರ, ಮಾಜಿ ಸಚಿವ ಬಿ.ಸೋಮಶೇಖರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್, ಮುಡಾ ಅಧ್ಯಕ್ಷ ಶ್ರೀನಿವಾಸ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಶಂಕರಪ್ಪ, ಕಾರ್ಯದರ್ಶಿ ವಿನಯ್, ವಿಭಾಗೀಯ ಉಸ್ತುವಾರಿ ಮೈ.ವಿ.ರವಿಶಂಕರ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next