ಬೆಂಗಳೂರು: ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆ ಸ್ಥಗಿತಗೊಳಿಸಲಾಗಿದ್ದು, ಪರವಾನಿಗೆ ನವೀಕರಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಅವರು ವರದಿ ನೀಡಿದ ಬಳಿಕ ಪರಿಶೀಲಿಸಿ ಗಣಿಗಾರಿಕೆಗೆ ಪರವಾನಿಗೆ ನೀಡಲಾಗುವುದು ಎಂದು ಗಣಿ ಹಾಗೂ ಮಹಿಳಾ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಸೋಮವಾರ ಗಣಿ ಇಲಾಖೆಯ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆಯಿಂದ ತೆರಿಗೆ ಸಂಗ್ರಹ ಹೆಚ್ಚು ಮಾಡಬೇಕು. ಏಕಗವಾಕ್ಷಿ ಯೋಜನೆಯಡಿಯಲ್ಲಿ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು. ಈ ವರ್ಷ ಹೆಚ್ಚಿನ ರಾಜಸ್ವ ಸಂಗ್ರಹಣೆ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಕೆಆರ್‌ಎಸ್ ಸುತ್ತ 256 ಗಣಿಗಾರಿಕೆಗೆ 1980ರಲ್ಲಿಯೇ ಅವಕಾಶ ನೀಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಾಗಿದೆ. ಅದನ್ನು ತಡೆಯುವ ಕೆಲಸ ಮಾಡಿದ್ದೇವೆ. ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆ ನಿಂತಿದೆ. ಈಗ ಪರವಾನಿಗೆ ನವೀಕರಿಸುವಂತೆ ಮನವಿ ಮಾಡಿದ್ದಾರೆ. ಪರಿಶೀಲನೆ ಮಾಡಿದ ಬಳಿಕ ನಿರ್ಧಾರ ಮಾಡುತ್ತೇವೆ.
ಮರಳು ನೀತಿಗೆ ಕಾಯಕಲ್ಪ:
ಮರಳು ನೀತಿಗೆ ಹೊಸ ಕಾಯಕಲ್ಪ ನೀಡುತ್ತೇನೆ. ಅಕ್ರಮ ಮರಳುಗಾರಿಕೆ ಕಡಿವಾಣ ಹಾಕಲಾಗಿದೆ ಎಂದು ಸಚಿವರು ಹೇಳಿದರು.