Advertisement

ಬಾಣಂತಿಯರ ಪ್ರಕರಣ: ಕೆಆರ್‌ಎಸ್‌ ಪಕ್ಷ ಪ್ರತಿಭಟನೆ

05:30 PM May 18, 2022 | Shwetha M |

ವಿಜಯಪುರ: ರಾಜ್ಯದಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲೇ ಸೌಲಭ್ಯ ನೀಡುವಲ್ಲಿ ಮುಂಚಣೀಯಲ್ಲಿದೆ ಎಂದು ಹೆಸರು ಮಾಡಿರುವ ವಿಜಯಪುರ ಸರ್ಕಾರಿ ಜಿಲ್ಲಾಸ್ಪತ್ರೆ ಹಲವು ಬಾರಿ ಎರಡು ಬಾರಿ ಪ್ರಶಸ್ತಿ ಪಡೆದಿದೆ. ಆದರೆ ಇದೀಗ ಸದರಿ ಆಸ್ಪತ್ರೆಯಲ್ಲಿ ವೈದ್ಯರು ಬಾಣಂತಿಯರ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ನಿಷ್ಕಾಳಜಿ ತೋರುವ ಮೂಲಕ ಆಸ್ಪತ್ರೆಯ ಸೇವಾ ಸೌಲಭ್ಯಗಳನ್ನು ಅನುಮಾನದಿಂದ ನೋಡುವಂತೆ ಮಾಡಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಪಕ್ಷದ ಪದಾಧಿಕಾರಿಗಳು, ಹೆರಿಗೆಗೆ ಬಂದಿದ್ದ ಸುಮಾರು 18 ಕ್ಕೂ ಹೆಚ್ಚು ಬಾಣಂತಿಯರು ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಹಾಕಿದ ಹೊಲಿಗೆ ಬಿಚ್ಚಿ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಸದರಿ ಸಮಸ್ಯೆಗೆ ಕಾರಣರಾಗಿರುವ ವೈದ್ಯ-ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಯಡಹಳ್ಳಿ, ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ. ಬಹುತೇಕ ವೈದ್ಯರು ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಅನುಕೂಲತೆ ಹೆಚ್ಚಿಸುವ ಸಲುವಾಗಿ ಬಹುತೇಕ ಔಷಧಿಗಳನ್ನು ಹೊರಗಡೆ ಬರೆದುಕೊಡುವ ಹಾಗೂ ಬೇರೆ ಆಸ್ಪತ್ರೆಗೆ ಕಳುಹಿಸುವ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ. ಇಂತಹ ಗಂಭೀರ ಘಟನೆ ನಡೆದಿದ್ದರೂ ಜಿಲ್ಲಾಡಳಿತ ಮೂಕ ಜಾಣನಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಸದರಿ ಘಟನೆ ಸಾರ್ವಜನಿಕರು ನೋವ ಅನುಭವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಮೊದಲು ಎರಡು ಬಾರಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಲಂಚಮುಕ್ತ ಅಭಿಯಾನ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಆಸ್ಪತ್ರೆಯಲ್ಲಿರುವ ಮೂಲಸೌಕರ್ಯ ಕಲ್ಪಿಸಲು ಹೋರಾಟ ನಡೆಸಿತ್ತು. ಆಗ ಎಚ್ಚೆತ್ತಿದ್ದ ಅಕಾರಿಗಳು ಕೊಂಚ ಸೌಲಭ್ಯ ಕಲ್ಪಿಸಿದ್ದರು. ಆಸ್ಪತ್ರೆಗೆ ಆಗಮಿಸುವ ರೋಗಿಗಳ ಕುಂದು-ಕೊರತೆ ಆಲಿಸಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ನಮ್ಮ ಮನವಿಯ ನಂತರ ಸ್ವಲ್ಪ ದಿನಗಳವರೆಗೆ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಕರ್ತವ್ಯ ಪಾಲನೆ ಮಾಡಿ ನಂತರದಲ್ಲಿ ಬ್ರಿಟಿಷ್‌ ವೈದ್ಯಕೀಯ ಮನಃಸ್ಥಿತಿಯ ಭ್ರಷ್ಟಾಚಾರದ ಚಾಳಿಯನ್ನು ಮುಂದುವರಿಸಿದ್ದಾರೆ. ಮುಂದಿನ ದಿನಮಾನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಹಮೀದ ಇನಾಮದಾರ, ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಅರ್ಜುನಗಿ, ಚಡಚಣ ತಾಲೂಕು ಅಧ್ಯಕ್ಷ ರಾಕೇಶ್‌ ಇಂಗಳಗಿ, ಸಿಂದಗಿ ತಾಲೂಕು ಅಧ್ಯಕ್ಷ ಪುಂಡಲೀಕ ಬಿರಾದಾರ, ರಮೇಶ ದೊಡ್ಡಮನಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next