Advertisement
ಕ್ಷೇತ್ರದಲ್ಲಿ ಬ್ರಾಹ್ಮಣ, ವೀರಶೈವ- ಲಿಂಗಾಯತ, ಪರಿಶಿಷ್ಟ ಜಾತಿ, ಕುರುಬ, ಒಕ್ಕಲಿಗ, ಅಲ್ಪಸಂಖ್ಯಾತ, ನಾಯಕ ಸಮುದಾಯಗಳು ಪ್ರಾಬಲ್ಯ ಹೊಂದಿದ್ದು, ಈ ಜಾತಿ ಲೆಕ್ಕಾಚಾರದಲ್ಲಿಯೇ ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲುವಿಗಾಗಿ ತಂತ್ರ ರೂಪಿಸಿವೆ. 1967 ರಚನೆಯಾದ ಕೆ.ಆರ್. ಕ್ಷೇತ್ರದಲ್ಲಿ ಈವರೆಗೆ ಒಂದು ಉಪಚುನಾವಣೆ ಸೇರಿ 15 ಚುನಾವಣೆಗಳು ನಡೆದಿದ್ದು, ಮೊದಲು ಸಾಹುಕಾರ್ ಚೆನ್ನಯ್ಯ ಸ್ವತಂತ್ರ ಅಭ್ಯರ್ಥಿಯಾಗಿ ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾಗುತ್ತಾರೆ. ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಮೂರು ಬಾರಿ ಜಯ ಕಂಡಿದ್ದರೆ, ಬಿಜೆಪಿ 5 ಬಾರಿ ಈ ಕ್ಷೇತ್ರದಲ್ಲಿ ಗೆಲುವು ಪಡೆದಿದೆ.
Related Articles
Advertisement
1994 ರಿಂದ 2018ರವರೆಗೆ ಪ್ರತಿ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಾ ಬಂದಿದ್ದ ಶಾಸಕ ಎಸ್.ಎ. ರಾಮದಾಸ್, ಒಟ್ಟು 6 ಚುನಾವಣೆಗಳನ್ನು ಎದುರಿಸಿ 4 ಬಾರಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಶಾಸಕ ರಾಮದಾಸ್ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತು. ಇದು ಬಿಜೆಪಿ ಅಭ್ಯರ್ಥಿಯ ಮತಗಳಿಕೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಕುತೂಹಲ ಮೂಡಿಸಿದೆ. ಆದರೂ, ತನ್ನ ಸಾಂಪ್ರದಾಯಿಕ ಮತಗಳ ಆಧಾರದ ಮೇಲೆ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದೆ.
ಇತ್ತ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ. ಸೋಮಶೇಖರ್ ಒಟ್ಟು 5 ಚುನಾವಣೆಗಳನ್ನು ಎದುರಿಸಿ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಎರಡು ಬಾರಿ ಜೆಡಿಎಸ್ ಹಾಗೂ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ತಲಾ ಒಂದು ಬಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದಾರೆ. ಈ ಬಾರಿಯ ಚುನಾವಣೆ 6ನೇಯದ್ದಾಗಿದ್ದು, 2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ಎಚ್.ವಿ. ರಾಜೀವ್ ಸ್ಪರ್ಧೆಯಿಂದ ಬಿಜೆಪಿ ಮತಗಳ ವಿಭಜನೆಯಿಂದ ಎಂ.ಕೆ. ಸೋಮಶೇಖರ್ ಸುಲಭವಾಗಿ ಗೆಲುವು ಸಾಧಿಸಿದ್ದರು. ಆದರೆ, 2018ರಲ್ಲಿ ರಾಜಕೀಯ ಚಿತ್ರಣ ಬದಲಾಗಿ ಬಿಜೆಪಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಾಯಕತ್ವ, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜತೆಗೆ ರಾಮದಾಸ್‌ಗೆ ಟಿಕೆಟ್ ಕೈತಪ್ಪಿರುವುದರ ಲಾಭ ಪಡೆದು ಗೆಲ್ಲುವ ತವಕದಲ್ಲಿ ಕಾಂಗ್ರೆಸ್ ಇದೆ.
ವೀರಶೈವ- ಲಿಂಗಾಯತ ಸಮುದಾಯಕ್ಕೆ ಸೇರಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಅವರನ್ನು ಎರಡನೇ ಬಾರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವ ಜೆಡಿಎಸ್ ವೀರಶೈವ -ಲಿಂಗಾಯತ ಸಮುದಾಯದ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆದು ಗೆಲುವು ಸಾಧಿಸುವ ತವಕದಲ್ಲಿದೆ. ಕಳೆದ ಬಾರಿ ಮಲ್ಲೇಶ್ 11,607 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದರು.
ಕಳೆದ 35 ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ ಅನುಭವವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳ ಸಾಧನೆ ಮುಂದಿಟ್ಟುಕೊಂಡು ಚುನಾವಣೆ ಪ್ರಚಾರ ನಡೆಸುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಎಸ್.ಎ. ರಾಮದಾಸ್ ಅವರೇ ನನಗೆ ಮಾದರಿ. – ಟಿ.ಎಸ್. ಶ್ರೀವತ್ಸ, ಬಿಜೆಪಿ ಅಭ್ಯರ್ಥಿ
ಕ್ಷೇತ್ರದಲ್ಲಿ ಈ ಹಿಂದೆ ನಾನು ಮಾಡಿದ ಕೆಲಸ, ಹಿಂದಿನ ನಮ್ಮ ಸರ್ಕಾರ ನೀಡಿದ ಯೋಜನೆ, ಮುಂದೆ ನಾವು ನೀಡಿರುವ ಭರವಸೆ ನನ್ನ ಗೆಲುವಿನ ಶ್ರೀರಕ್ಷೆಯಾಗಿದೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ನನ್ನೆಲ್ಲಾ ಕೆಲಸಗಳನ್ನು ಜನರ ಮುಂದಿಟ್ಟು ಮತಯಾಚಿಸುತ್ತಿರುವೆ. – ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ಅಭ್ಯರ್ಥಿ.
ಎರಡು ಬಾರಿ ಮಹಾನಗರ ಪಾಲಿಕೆ ಸದಸ್ಯನಾಗಿ ಕೆಲಸ ಮಾಡಿದ ಅನುಭವ ಇದೆ. ಒಂದು ಬಾರಿ ಎಂಎಲ್‌ಎ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದೇನೆ. ನಮ್ಮ ಸರ್ಕಾರದ ಅವಧಿಯಲ್ಲಿ ಪೊಲೀಸ್ ಠಾಣೆಗಳಿಗೆ ಉತ್ತಮ ಕಟ್ಟಡ ನಿರ್ಮಿಸ ಲಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್ ಪರ ಒಲವಿದೆ. ಎಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಸರ್ಕಾರದ ರೈತ ಪರ, ಮಹಿಳಾ ಪರ ಯೊಜನೆಗಳು ನನ್ನ ಗೆಲುವಿಗೆ ನೆರವಾಗಲಿವೆ. – ಕೆ.ವಿ. ಮಲ್ಲೇಶ್, ಜೆಡಿಎಸ್ ಅಭ್ಯರ್ಥಿ
– ಸತೀಶ್ ದೇಪುರ