Advertisement

251ನೇ ದ್ವೈವಾರ್ಷಿಕ ಪರ್ಯಾಯ ಸಂಭ್ರಮ; ಸಾಂಪ್ರದಾಯಿಕ ಪರ್ಯಾಯ ಮೆರವಣಿಗೆ

01:04 AM Jan 19, 2022 | Team Udayavani |

ಶ್ರೀ ಕೃಷ್ಣ ಮಠದಲ್ಲಿ ದ್ವೈವಾರ್ಷಿಕ ಪರ್ಯಾಯ ಮಹೋತ್ಸವವು ಮಂಗಳವಾರ ಮುಂಜಾನೆ ನೆರವೇರಿತು. ಸಂಪ್ರದಾಯದಂತೆ ಕಳೆದ ಎರಡು ವರ್ಷ ಪರ್ಯಾಯ ಪೂಜೆ ನೆರವೇರಿಸಿದ್ದ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಂಗಳವಾರ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರಿಗೆ ಮುಂದಿನ ಎರಡು ವರ್ಷಗಳ ಅವಧಿಯ ಶ್ರೀ ಕೃಷ್ಣ ದೇವರ ಪೂಜಾ ಕೈಂಕರ್ಯವನ್ನು ಹಸ್ತಾಂತರಿಸಿದರು.

Advertisement

ಉಡುಪಿ: ಕೋವಿಡ್‌ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದ್ದರಿಂದ ವಿಜೃಂಭಣೆಯಿಂದ ನೆರವೇರಬೇಕಿದ್ದ ಪರ್ಯಾಯೋತ್ಸವ ಮೆರವಣಿಗೆ ಸಾಂಪ್ರದಾಯಿಕವಾಗಿ ನೆರವೇರಿತು. ಜನರು ಮೆರವಣಿಗೆ ಹಾದು ಹೋಗುವ ಇಕ್ಕೆಲಗಳಲ್ಲಿ ನಿಂತು ನೋಡಿ ಸಂಭ್ರಮಿಸಿದರು.

ವಿವಿಧ ಮಠಾಧೀಶರು ಮೇನೆಯಲ್ಲಿ ಜೋಡುಕಟ್ಟೆ ಮೂಲಕ ರಥಬೀದಿಗೆ ಆಗಮಿಸಿದರು. ಪೇಜಾವರ ಶ್ರೀಗಳು ಕುಳಿತ ಮೇನೆಯನ್ನು ಭತ್ತದ ತೆನೆಗಳಿಂದ, ಬೀಳಿನ ತಟ್ಟಿಯಿಂದ ಆಕರ್ಷಕವಾಗಿ ಅಲಂಕರಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಹಿಂದಿನ ‌ರ್ಯಾಯದಲ್ಲಿ ಶ್ರೀಗಳು ಮೇನೆಗೆ ಜಾನಪದ ಕಲೆಯ ಸ್ಪರ್ಶ ನೀಡಿದ್ದರು.

ಶ್ರೀಕೃಷ್ಣ ದೇವರ ಬೃಹತ್‌ ವಿಗ್ರಹ, ಯಕ್ಷಗಾನ, ಕಾಳಿಂಗಮರ್ದನ, ಶೇಷಶಯನ, ಗಜೇಂದ್ರ ಮೋಕ್ಷ, ಜಾಂಬವಂತ ಕೃಷ್ಣ, ಗೀತೋಪದೇಶ ಶ್ರೀಕೃಷ್ಣಾರ್ಜುನ, ವಾಸುದೇವ ಕೃಷ್ಣ, ಹರೇಕೃಷ್ಣ ಕುಣಿತ ಭಜನೆ, ಸ್ಕೌಟ್ಸ್‌ ಗೈಡ್ಸ್‌ ವಿದ್ಯಾರ್ಥಿಗಳು, ಅಯೋಧ್ಯೆ ರಾಮಮಂದಿರ, ಅರಣ್ಯ ಇಲಾಖೆಯ ಹಸುರು ಉಳಿಸಿ ಜಾಗೃತಿ ಟ್ಯಾಬ್ಲೋಗಳು, ಭಜನೆ ತಂಡಗಳು, ಪೂರ್ಣಕುಂಭ, ಬಿರುದಾವಳಿ, ಚೆಂಡೆ ಬಳಗ, ಪಂಚವಾದ್ಯ, ಕೊಂಬುವಾದ್ಯ, ನಾಗಸ್ವರ ತಂಡ, ಸ್ಯಾಕ್ಸೊಫೋನ್ ತಂಡ, ದೊಂದಿಬೆಳಕಿನ ದೀಪಗಳೂ ಪರ್ಯಾಯೋತ್ಸವದಲ್ಲಿ ಕಂಗೊಳಿಸಿದವು.

ಮಹಾ ಪೂಜೆ
ಶ್ರೀಕೃಷ್ಣಮಠದಲ್ಲಿ ಮಂಗಳವಾರ ಪರ್ಯಾಯ ಪೀಠಾರೋಹಣ ಮಾಡಿದ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಚತುರ್ಥ ಪರ್ಯಾಯದ ಮೊದಲ ದಿನದ ಮಹಾಪೂಜೆಯನ್ನು ನಡೆಸಿದರು.

Advertisement

ಪರ್ಯಾಯೋತ್ಸವಕ್ಕೆ ವಿತ್ತ ಸಚಿವೆ ಟ್ವೀಟ್‌
ಕೃಷ್ಣಾಪುರ ಶ್ರೀಗಳ ಪರ್ಯಾಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್‌ ಟ್ವೀಟ್‌ ಮಾಡಿ ದ್ದಾರೆ. ಉಡುಪಿ ಅಷ್ಟ ಮಠಗಳು ಕಳೆದ 500 ವರ್ಷಗಳಿಂದ ಶ್ರೀಕೃಷ್ಣನ ಸೇವೆ ಜತೆ ಸಾರ್ವಜನಿಕರ ಸೇವೆಯನ್ನು ಮುಂದು ವರಿಸಿಕೊಂಡು ಬಂದಿವೆ. ಪ್ರಸ್ತುತ ಉಡುಪಿ ಕೃಷ್ಣ ಮಠದಲ್ಲಿ ಪರ್ಯಾ ಯೋತ್ಸವ ಸಂಪನ್ನಗೊಂಡಿದ್ದು, ಕಳೆದ ಪರ್ಯಾಯ ಕಾರ್ಯಕ್ರಮದಲ್ಲಿ ನಾನು ಭಾಗಿ ಯಾಗಿದ್ದೆ ಎಂದು ಟ್ವೀಟರ್‌ನಲ್ಲಿ ಸ್ಮರಿಸಿದ್ದಾರೆ.

ಮೇನೆಯಲ್ಲಿ ಆಗಮಿಸಿದ ಮಠಾಧೀಶರು
ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರು, ಪಲಿಮಾರು ಶ್ರೀಗಳು, ಪೇಜಾವರ ಶ್ರೀಗಳು, ಕಾಣಿಯೂರು ಶ್ರೀಗಳು, ಸೋದೆ ಶ್ರೀಗಳು, ಪಲಿಮಾರು ಕಿರಿಯ ಶ್ರೀಗಳು, ಶಿರೂರು ಶ್ರೀಗಳು ಅಲಂಕೃತ ಮೇನೆಯಲ್ಲಿ ಆಗಮಿಸಿದರು.

ಬಿಗು ಬಂದೋಬಸ್ತ್
ಪರ್ಯಾಯೋತ್ಸವ ಹಾದು ಹೋಗುವ ಭಾಗಗಳು ಸಹಿತ ರಥಬೀದಿಯಲ್ಲಿ ಬಿಗುಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡ್ರೋನ್‌ ಕೆಮರಾದ ಮೂಲಕ ಸಂಪೂರ್ಣ ದೃಶ್ಯಾವಳಿಗಳನ್ನು ದಾಖಲಿಸಲಾಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರು. ಅನುಮಾನಾಸ್ಪದ ವ್ಯಕ್ತಿಗಳಿಗೆ ಎಚ್ಚರಿಕೆ ನೀಡುತ್ತಿದ್ದರು. ಅಗ್ನಿಶಾಮಕ ದಳ, ನಗರಸಭೆ, ಮೆಸ್ಕಾಂ ಇಲಾಖೆ, ಆರೋಗ್ಯ ಇಲಾಖೆ ಸಹಿತ ವಿವಿಧ ಇಲಾಖೆಗಳ ಸಿಬಂದಿ ಕರ್ತವ್ಯ ನಿರ್ವಹಿಸಿದರು.

ನಿರಂತರ ಭಜನೆ
ಕೃಷ್ಣಾಪುರ ಮಠದ ಪರ್ಯಾಯದಲ್ಲಿ ಪ್ರತಿನಿತ್ಯ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ನಿರಂತರ ಭಜನೆ ನಡೆ ಯಲಿದೆ. ನಿರಂತರ ಭಜನೆ ಕಾರ್ಯಕ್ರಮವನ್ನು ಮಂಗಳವಾರ ಬೆಳಗ್ಗೆ ಪರ್ಯಾಯ ಮೆರವಣಿಗೆ ರಥಬೀದಿಗೆ ಆಗಮಿಸಿ ಕನಕನ ಕಿಂಡಿಯಲ್ಲಿ ದೇವರ ದರ್ಶನ ಮಾಡಿದ ಬಳಿಕ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟಿಸಿದರು. ಇತರ ಮಠಾಧೀಶರು ಉಪಸ್ಥಿತರಿದ್ದರು. ಇನ್ನೆರಡು ವರ್ಷ ಭಜನೆ ಕನಕನ ಕಿಂಡಿ ಬಳಿ ನಡೆಯಲಿದೆ.

ನಿರಂತರ ಪ್ರವಚನ ಆರಂಭ
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಿರಂತರ ಪ್ರವಚನ ಕಾರ್ಯಕ್ರಮವನ್ನು ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮತ್ತು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮಂಗಳವಾರ ಉದ್ಘಾಟಿಸಿದರು. ಕಾಣಿಯೂರು ಮಠಾಧೀಶರು ಮೊದಲ ದಿನದ ಉಪನ್ಯಾಸ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next