Advertisement

ಬೀಳುವ ಸ್ಥಿತಿಯಲ್ಲಿ ಕೃಷ್ಣಾಪುರ ಸರಕಾರಿ ಶಾಲೆ

12:36 PM May 25, 2022 | Team Udayavani |

ಸುರತ್ಕಲ್: ಎನ್‌ಎಂಪಿಟಿ ನಿರ್ವಸಿತ ಪ್ರದೇಶದಲ್ಲಿರುವ ಕಾಟಿಪಳ್ಳ ಕೃಷ್ಣಾಪುರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ ಕಟ್ಟಡ ದುಃಸ್ಥಿತಿ ಯಲ್ಲಿದ್ದು, ಮೇಲ್ಛಾವಣಿಯ ಪಕ್ಕಾಸು ತುಂಡಾಗಿ ಹೆಂಚುಗಳು ಆಗಲೋ ಈಗಲೋ ಬೀಳುವಂತಿದೆ.ಮಕ್ಕಳು ಶಾಲೆಗೆ ಆತಂಕದಲ್ಲೇ ಬಂದು ತರಗತಿಗೆ ಹಾಜರಾಗುತ್ತಿದ್ದಾರೆ.

Advertisement

ಶಾಲಾ ಆವರಣಗೋಡೆಯ ಕಲ್ಲುಗಳು ಎದ್ದು ಹೋಗಿ ಸ್ಥಳೀಯ ಕಸ ಶಾಲೆಯ ಆವರಣದೊಳಗೆ ರಾಶಿ ಬೀಳುತ್ತಿವೆ. ಸುತ್ತಮುತ್ತಲಿನ ಗೂಡಂಗಡಿಗಳ ಕಸಗಳು ಇಲ್ಲಿಯೇ ಬೀಳುತ್ತಿದ್ದು ಸೂಕ್ತ ಭದ್ರತೆ ಇಲ್ಲಿಲ್ಲ. ಶಾಲೆಗೆ ಗೇಟು ಅಳವಡಿಸಿದ್ದರೂ ಕಂಪೌಂಡು ಕಲ್ಲು ಕಳಪೆ ಕಾಮಗಾರಿಯಿಂದ ಜರಿದು ಬಿದ್ದು ಇಂದು ಕಲ್ಲೇ ಕಾಣುತ್ತಿಲ್ಲ. ಶಾಲೆಯ ಮೈದಾನದೊಳಗೆ ವಾಹನ ನಿಲ್ಲಿಸಿ ರಾತ್ರಿಯಾದೊಡನೆ ಹರಟೆ, ಮಾದಕ ವಸ್ತು ಸೇವನೆ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಇದುವರೆಗೆ ಸಾಧ್ಯವಾಗಿಲ್ಲ.

ಬೇಕಿದೆ ಸಮರ್ಪಕ ವ್ಯವಸ್ಥೆ

ಸರಕಾರಿ ಶಾಲೆಗೆ ವಿದ್ಯಾರ್ಥಿಗಳ ಸೇರ್ಪಡೆ ಕಡಿಮೆಯಾಗುತ್ತಿದ್ದು, ಈ ಶಾಲೆಯಲ್ಲಿ 8ನೇ ತರಗತಿಯಿಂದ 10ನೇ ತರಗತಿ ವರೆಗೆ 90ಕ್ಕೂ ಮಿಕ್ಕಿ ಮಕ್ಕಳು ಕಲಿಯುತ್ತಿದ್ದಾರೆ. ಹೊರ ಜಿಲ್ಲೆಗಳ ವಿದ್ಯಾರ್ಥಿಗಳ ಸಹಿತ ಸ್ಥಳೀಯರ ಮಕ್ಕಳೂ ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸಾಮಾನ್ಯ ಮೂಲಸೌಕರ್ಯವಿದ್ದರೂ ಮಾದರಿ ಶಾಲೆಯಾಗಿ ಇರಬೇಕಾದ ಸವಲತ್ತು ಇನ್ನೂ ದೊರಕಿಲ್ಲ. ಪ್ರತೀ ವರ್ಷ ಸುಣ್ಣ ಬಣ್ಣ,ಕಳೆ ತೆಗೆಯಬೇಕು. ಕಿಟಿಕಿ ಬಾಗಿಲು ನಿರ್ವಹಣೆ ಎಲ್ಲವೂ ತ್ರಾಸದಾಯಕವಾಗಿಯೇ ನಡೆಯುತ್ತದೆ.

ಎಸ್‌ಡಿಎಂಸಿ ಈಗಾಗಲೇ ಸಂಬಂಧ ಪಟ್ಟವರಿಗೆ ಮನವಿ ಮಾಡಿದೆ. ಇಲ್ಲಿ ಖಾಸಗಿ ಶಿಕ್ಷಕರನ್ನು ನೇಮಿಸಿ ಎಸ್‌ ಡಿಎಂಸಿ, ದಾನಿಗಳು, ಪ್ರಾಂಶುಪಾಲರು ಹೀಗೆ ಎಲ್ಲರೂ ಅವರಿಗೆ ವೇತನ ನೀಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇಷ್ಟಾದರೂ ಮೂಲ ಸೌಕರ್ಯ ನೀಡಲು ಇದುವರೆಗೆ ಯಾರೂ ಮುಂದಾಗಿಲ್ಲ. ನಾವು ಮನವಿ ನೀಡಿದ್ದರೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಮಕ್ಕಳ ಸುರಕ್ಷತೆಗಾಗಿಯಾದರೂ ಮಳೆಗಾಲದಲ್ಲಿ ಇದು ತುರ್ತಾಗಿ ಆಗಬೇಕಿದೆ ಎನ್ನುತ್ತಾರೆ ಎಸ್‌ ಡಿಎಂಸಿ ಅಧ್ಯಕ್ಷ ಶಿವಪ್ರಸಾದ್‌ ಕೃಷ್ಣಾಪುರ.

Advertisement

ಗಮನಕ್ಕೆ ಬಂದಿದೆ

ಇಲ್ಲಿನ ಪ್ರೌಢಶಾಲೆಯ ನಿರ್ವಹಣೆ ಕುರಿತಂತೆ ನಿಮ್ಮ ಮೂಲಕ ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಡಲೇ ಮಾಹಿತಿ ಪಡೆದು ಕೊಂಡು ಬೇಕಾದ ಕ್ರಮ ಕೈಗೊ ಳ್ಳುತ್ತೇವೆ. -ಸುಧಾಕರ್‌, ಡಿಡಿಪಿಐ

Advertisement

Udayavani is now on Telegram. Click here to join our channel and stay updated with the latest news.

Next