ಕೃಷ್ಣಾಪುರ : ಮಂಗಳೂರು ವಿಮಾನ ನಿಲ್ದಾಣ ರಸ್ತೆಯನ್ನು ಎಂಟು ಪಥವನ್ನಾಗಿ ಮಾರ್ಪಡಿಸುವ ಯೋಜನೆ ಹೊಂದಿದ್ದು, ಮನಪಾ ಹಾಗೂ ಜಿಲ್ಲಾಡಳಿತ ಪೂರಕ ಕ್ರಮಗಳನ್ನು ಕೈಗೊಂಡು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಹೇಳಿದರು. ಕೃಷ್ಣಾಪುರ ಆಲ್ ಬದ್ರಿಯಾ ಕಾಂಪೊಸಿಟ್ ಪಿಯು ಕಾಲೇಜ್ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಆಯೋಜಿಸಲಾದ ಸಮ್ಮಾನ ಕಾರ್ಯಕ್ರಮದಲ್ಲಿ ಹುಟ್ಟೂರ ಗೌರವ ಸ್ವೀಕರಿಸಿ ಮಾತನಾಡಿದರು.
ಎಂಟು ಪಥ ರಸ್ತೆ ಕುರಿತಂತೆ ಸರಕಾರದ ಜತೆ ಮಾತುಕತೆ ನಡೆಸಿ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನ ನಡೆಸಲಾಗುವುದು. ಈಗಿರುವ ರಸ್ತೆ ಅಗಲ ಕಿರಿದಾಗಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಕ್ಕಂತೆ ರಸ್ತೆ ಇರಬೇಕಾಗಿದೆ ಎಂದರು. ಮೇಯರ್ ಭಾಸ್ಕರ ಕೆ. ಅವರನ್ನು ಸಮ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಆಲ್ ಬದ್ರಿಯಾ ಶಾಲೆ ಹೆತ್ತವರು, ಶಿಕ್ಷಕರು, ಆಡಳಿತ ಮಂಡಳಿ ಅಭಿವೃದ್ಧಿಗೆ ಜತೆಗೂಡಿದ್ದರಿಂದ ಪ್ರಸಿದ್ಧಿಯಾಗಿದೆ ಎಂದರು.
ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎಂ. ಮಮ್ತಾಜ್ ಆಲಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ. ಎ. ನಝೀರ್, ಸಂಚಾಲಕ ಅಬ್ದುಲ್ ಹಮೀದ್, ಅಬ್ದುಲ್ ಹಕೀಮ್ ಫಾಲ್ಕಾನ್, ಗುಣಶೇಖರ ಶೆಟ್ಟಿ, ಅಬ್ದುಲ್ ಸತ್ತಾರ್, ಕೌನ್ಸೆಲರ್ ಮನಿಷಾ ಸುವರ್ಣ, ಉದ್ಯಮಿ ಮಹಮದ್ ಮುಬೀನ್, ಗುಲ್ಜಾರ್ ಬಾನು, ಪಿಟಿಎ ಅಧ್ಯಕ್ಷ ಅಬ್ದುಲ್ ಲತೀಫ್, ಫಿರೋಜ್, ಅಬ್ದುಲ್ ಹಮೀದ್, ಬಿ.ಎಂ. ಹುಸೈನ್, ಪ್ರಾಂಶುಪಾಲೆ ವಿಲ್ಮಾ, ಮುಖ್ಯೋಪಾಧ್ಯಾಯ ಸತೀಶ್ ಎನ್. ಮೊದಲಾದವರು ಉಪಸ್ಥಿತರಿದ್ದರು.
ಸೌಹಾರ್ದದ ಬೀಡು ಆಗಲು ಶ್ರಮಿಸುವೆ
ವಿಧಾನ ಪರಿಷತ್ ಸದಸ್ಯನಾಗಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ, ಕೋಮು ಸಾಮರಸ್ಯದ ಕೇಂದ್ರವನ್ನಾಗಿ ಮಾಡಬೇಕೆಂಬ ನಿಟ್ಟಿನಲ್ಲಿ ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಪ್ರಥಮ ವಿಧಾನ ಪರಿಷತ್ ಅನುದಾನವನ್ನು ಆಲ್ ಬದ್ರಿಯಾ ಶಾಲೆಗೆ ನೀಡಲು ನಿರ್ಧರಿಸಿದ್ದೇನೆ. ಆಡಳಿತ ಮಂಡಳಿ ಇದಕ್ಕೆ ಬೇಕಾದ ಮನವಿ ಸಲ್ಲಿಸುವಂತೆ ಸೂಚಿಸಿದರು. ಕೋಮು ಸೌಹಾರ್ದದ ಬೀಡು ಆಗಲು ಒಂದಾಗಬೇಕು ಎಂದು ಫಾರೂಕ್ ಅಭಿಪ್ರಾಯಪಟ್ಟರು.