Advertisement
ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಸೇರದಂತೆ ಉತ್ತರ ಕರ್ನಾಟಕಕ್ಕೆ ಕೃಷ್ಣೆ ಜೀವ ನದಿ ಎನಿಸಿದೆ. ಕೃಷ್ಣಾ ಕೊಳ್ಳದಲ್ಲಿ ರಾಜ್ಯದ ಪಾಲಿನ 130 ಟಿಎಂಸಿ ನೀರು ಬಳಸಿಕೊಂಡು ನೀರಾವರಿ ಮಾಡಿಕೊಳ್ಳಲು ಯಾವುದೇ ತಕರಾರುಗಳಿಲ್ಲ. ಆದರೆ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ತುರ್ತಾಗಿ ಆಗಬೇಕಿರುವುದು ಆಲಮಟ್ಟಿ ಬಳಿ ನಿರ್ಮಿಸಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ಗೇಟ್‌ಗಳನ್ನು 519 ಮೀ.ನಿಂದ 524 ಮೀ.ವರೆಗೆ ಎತ್ತರಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಇದಾಗದ ಹೊರತು ನೀರಾವರಿ ಕೇವಲ ಭಾಷಣದಲ್ಲಿ ಸಾಧನೆ ಅಗಲಿದೆ. ರಾಜ್ಯದ ಪಾಲಿನ ನೀರು ಮಾತ್ರ ಆಂಧ್ರಕ್ಕೆ ಹರಿಯುತ್ತಿದೆ.
Related Articles
Advertisement
ಇತ್ತ ಜಲಾಶಯದ ಗೇಟ್ ಎತ್ತರದಿಂದ 20 ಹಳ್ಳಿಗಳು ಮತ್ತೆ ಮುಳುಗಲಿವೆ. ಮುಳಗಡೆಯಾಗಲಿರುವ ಈ ಹಳ್ಳಿಗಳ ಸಂತ್ರಸ್ತರಿಗೆ ಪುನರ್ವಸತಿ-ಪುನರ್ ನಿರ್ಮಾಣ ಕಾರ್ಯ ಆಗಬೇಕು. ಇದಾದ ಬಳಿಕ ಗೇಟ್ ಅಳವಡಿಸಲು ಸಾಧ್ಯವಿದೆ. ಗೇಟ್ ಅಳವಡಿಸಿದರೆ ಮಾತ್ರವೇ ವಿಜಯಪುರ ಜಿಲ್ಲೆ ಪ್ರಮುಖ 9 ಏತ ನೀರಾವರಿ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳಲ್ಲಿ ನಿರ್ಮಾಣಗೊಂಡಿರುವ ಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ, ಪರಿಹಾರ, ಕಾಲುವೆ ನಿರ್ಮಾಣ ಸೇರಿದಂತೆ ಒಟ್ಟು ಯೋಜನೆ ಪೂರ್ಣಗೊಳ್ಳಲು 1 ಲಕ್ಷ ಕೋಟಿ ರೂ. ಹಣಬೇಕು. ಕನಿಷ್ಠ ಪ್ರಸಕ್ತ ವರ್ಷ ಸುಮಾರು 35 ಸಾವಿರ ಕೋಟಿ ರೂ. ನೀಡಿದ್ದರೆ ಭೂಸ್ವಾಧೀನ-ಪುನರ್ವಸತಿ ಕಾರ್ಯಕ್ಕೆ ಚಾಲನೆ ನೀಡಲು ಸಾಧ್ಯವಿತ್ತು. ಆದರೆ ರಾಜ್ಯದ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ 17 ಸಾವಿರ ಕೋಟಿ ರೂ. ಮೀಸಲಿರಿಸಿದೆ. ಇದರಲ್ಲೇ ಕಾವೇರಿ ಕೊಳ್ಳದ ಯೋಜನೆಗಳನ್ನು ಘೋಷಿಸಿಕೊಂಡಿದೆ. ವಿಜಯಪುರ ಜಿಲ್ಲೆಯ ಪ್ರಮುಖ ಯೋಜನೆಗಳೇ ಅರ್ಧಕ್ಕೆ ನಿಂತರುವಾಗ ಕುಮಾರಸ್ವಾಮಿ ಅವರು ರೇವಣಸಿದ್ದೇಶ್ವರ ಏತ ನೀರಾವರಿ ಹೆಸರಿನಲ್ಲಿ ಮತ್ತೂಂದು ಯೋಜನೆ ಘೋಷಿಸಿರುವುದು ರೈತರನ್ನು ನಗುವಂತೆ ಮಾಡಿದೆ.
ಜಿಲ್ಲೆಯ ಹೆಸರು ಉಲ್ಲೇಖಕ್ಕೆ ಎಂಬಂತೆ ಜಿಲ್ಲೆಗೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದರೂ, ಕಳೆದ ಬಜೆಟ್‌ನಲ್ಲಿ ತಾವೇ ಘೋಷಿಸಿದ್ದ ಬಹುತೇಕ ಯೋಜನೆಗಳಿಗೆ ಕುಮಾರಸ್ವಾಮಿ ಅನುದಾನದ ನೀಡಿಲ್ಲ. ಈಗ ಘೋಷಿತ ಯೋಜನೆಗಳಿಗೆ ನೀಡುವ ನಿರೀಕ್ಷೆ ಮಾತ್ರ ಮಾಡಬದುದು, ಖಚಿತವಾಗಿಲ್ಲ. ಇಂಥ ಸ್ಥಿತಿಯಲ್ಲಿ ನಿರ್ದಿಷ್ಟ ಅನುದಾನವಿಲ್ಲದೇ ಕೃಷ್ಣೆಯ ಮಕ್ಕಳು ಮತ್ತೂಮ್ಮೆ ಕಣ್ಣೀರು ಹಾಕುವಂತಾಗಿದೆ. ಪರಿಣಾಮ ಜಿಲ್ಲೆಯನ್ನು ಸಮಗ್ರ ನೀರಾವರಿ ಮಾಡುವ ವಿಧಾನ ಹೇಗೆ ಎಂಬುದನ್ನು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರು ಹಾಗೂ ಜಿಲ್ಲೆಯ ಆಡಳಿತ ಪಕ್ಷದ ಮೂವರು ಸಚಿವರು, ಇಬ್ಬರು ಶಾಸಕರು ಉತ್ತರಿಸಬೇಕಿದೆ.
ಜಿ.ಎಸ್. ಕಮತರ