Advertisement

ಕೃಷ್ಣನ ಕೊಳಲಿಗೂ, ರಾಯಣ್ಣನ ಬ್ರಿಗೇಡಿಗೂ ಬ್ಯಾಸಿಗ್ಯಾಗೂ ನಡಗುವಂಗಾತು 

10:15 PM Feb 11, 2017 | |

ಜೀವ ಎಲ್ಲಾದಕ್ಕೂ ಸಮಾನತೆ ಬಗ್ಗೆ ಮಾತಾಡೊ ನಾವು ಮನ್ಯಾಗ ಹೆಂಡ್ತಿ ಎದುರು ನಿಂತು ಮಾತಾಡಿದ್ರ ಸಿಟ್ಟು ಬರತೈತಿ. ಯಾಕಂದ್ರ ನಮ್ಮ ಮೈಯಾಗ ಪುರುಷ ಅನ್ನೊ ಅಹಂಕಾರ ಇನ್ನೋ ಜೀವಂತ ಐತಿ. ಹಂಗಾಗೇ ರಾಯಣ್ಣ ಅಂದ್ರ ಬಸವಣ್ಣನ ಹೆಸರು ಹೇಳಾರಿಗೆ ಸಿಟ್ಟು ಬರತೈತಿ. ಆದ್ರೂ, ಶ್ರೀಮತಿ ಭವಿಷ್ಯದಲ್ಲಿ ನನ್ನ ಆರೋಗ್ಯದ ಕಾಳಜಿ ಮಾಡಿದ್ದು ನೋಡಿ, ಕೊಟ್ಟಷ್ಟು ಚಾ ಕುಡುದು ಸುಮ್ಮನಿರತೀನಿ. ಯಾಕಂದ್ರ ಅವರೂ ಮನ್ಯಾಗ ಕುಂತು ಚೆನ್ನಮ್ಮನ ಪಡೆ ಕಟ್ಟಿದ್ರ ಏನ್‌ ಮಾಡೋದು? ನಮಗ ಸಿಗು ಅರ್ಧಾ ಚಾನೂ ಸಿಗಾಕಿಲ್ಲ ಅಂತ.  

Advertisement

ಮುಂಜಾನೆದ್ದು ಶ್ರೀಮತಿ ಚಾ ಮಾಡಿಕೊಡ ಅಂತ ಹೇಳಿದ ಅರ್ಧಾ ತಾಸಿಗೆ ಚಾ ತಂದು ಕೊಟ್ಲು. ಅದೂ ಅರ್ಧಾ ಕಪ್‌ ಚಾ. ಅದನ್ನ ನೋಡಿ, ಯಾಕ ಅರ್ಧಾ ಕಪ್ಪು ಚಾ ಕೊಟ್ಟಿಯಲ್ಲಾ ಅಂದೆ. ವಯಸ್ಸಾತಲ್ಲ ಇನ್ನ ಮ್ಯಾಲ ಚಾ ಕಡಿಮಿ ಕುಡಿಬೇಕು ಅಂದು. ಈಗ ಹಿಂಗ್‌ ಆದ್ರ ಮುಂದ ಅಜ್ಜಾ ಆದ ಮ್ಯಾಲ ಏನ್‌ ನಮ್ಮ ಕತಿ ಅಂತ ಮನಸಿನ್ಯಾಗ ಯೋಚನೆ ಮಾಡಿದೆ. ಮನ್ಯಾಗ ಅಜ್ಜಾಗೋಳ ಕತಿ ಹೆಂಗಿರತೈತಿ ಅಂದ್ರ, ಏನಾದ್ರೂ ಬೇಕಂದ್ರ ಹತ್ತು ಸಾರಿ ಕೇಳಿದಾಗ ಯಾರರ ಒಬ್ರು ಒಂದು ಸರಿ ಹೊಳ್ಳಿ ನೋಡ್ತಾರು.  

ನಮ್ಮನ್ಯಾಗ ನಮ್ಮ ಅಜ್ಜಾನೂ ಹಂಗ. ಅವಂಗ ಡಾಕ್ಟರು ಚಾ ಕುಡಿಬ್ಯಾಡ, ಎಲಿ ಅಡಿಕಿ ತಿನ್ನಬ್ಯಾಡ ಅಂತ ಹೇಳಾರು, ಆದ್ರ, ಅವಂಗ ಅವ್ಯಾಡು ಇಡೀ ಬಿಟ್ಟು ಬ್ಯಾರೇ ಮಾಡುವಂತಾದ್ದೇನೈತಿ ನಂದು ಅಂತ ಅವನ ವಾದ.  ಮನಿಗೆ ಬೀಗರು ಜಾಸ್ತಿ ಬಂದಷ್ಟು ಚೊಲೊ ಅಂತಾನವ. ಯಾಕಂದ್ರ, ಅವರು ಬಂದಾಗ ಅವರಿಗೆ ಚಾ ಮಾಡಿಕೊಟ್ಟರ ಅವರ ನೆವದಾಗಾದ್ರೂ ಅರ್ಧ ಕಪ್‌ ಚಾ ನಂಗೂ ಸಿಗತೈತೆಲ್ಲಾ ಅಂತ ಅವನ ಲೆಕ್ಕಾ. ಹಿಂಗಾಗೆ ಯಾವಾಗರ ನನ್ನ ಗೆಳಾರು ಊರಿಗೆ ಬಂದ್ರಂದ್ರ ಅವರಿಗೆ ಅದ್ನ ಹೇಳತಾನು. ಅವಾಗವಾಗ ಬರಕೋಂತ ಇರೊ, ನಿಮ್ಮ ನೆವದಾಗಾದ್ರೂ ನಮಗೂ ಇಂದೀಟು ಚಾ ಸಿಗತೈತಿ ಅಂತ.  

ನಮ್ಮನಿಹಂಗ ಕಾಂಗ್ರೆಸ್ಸಿನ್ಯಾಗೂ ಮುದುಕರ ಕತಿ ಆಗೇತಿ. ಸರ್ಕಾರ  ಬಂದು ಮೂರು ವರ್ಷ ಆತು. ತಮ್ಮನೂ ಅವಾಗಾವಾಗ ಅಧಿಕಾರ ಇರಾರು ಯಾರಾದ್ರೂ ಬಂದು ಮಾತಾಡ್ತಾರನ ಅಂತ ಕಾದು ಕಾದು ಸುಸ್ತಾಗಿ ಹೋಗ್ಯಾರು. ಐವತ್ತು ವರ್ಷ ರಾಜಕಾರಣ ಮಾಡಿದ್ರೂ ಎಂದೂ ಡೊಳ್ಳ ಬಾರಿಸಿ ಸಪ್ಪಾಳ ಮಾಡದಿರೋ ಕೃಷ್ಣ , ಕೊಳಲು ಊದೇ ಅಧಿಕಾರ ನಡಿಸ್ಯಾರು. 

ಈಗ ಏಕಾ ಏಕಿ ಯಾರಿಗೂ ಗೊತ್ತಾಗದಂಗ ದಿಕ್ಕು ಬದಲಿಸಿ, ಎಲ್ಲಾರಿಗೂ ನಿದ್ದಿ ಕೆಡಿಸಿ ಬಿಟ್ಟಾರು. ಇಷ್ಟು ವರ್ಷ ಕೃಷ್ಣನ ಕೊಳಲಿನ ನಾದಾ ಕೇಳಿಕೊಂಡು ಎಲ್ಲಾರೂ ತಲಿದೂಗುತ್ತಿದ್ದರು. ಈಗ  ಎಲ್ಲಾರೂ ಬೇಂಡ ಬಾಜಾ ಹಚೊRಂಡು ಮೆರವಣಿಗೆ ಹೊಂಟಾಗ ಕೃಷ್ಣನ ಕೊಳಲಿನ ಸೌಂಡ್‌ ಎಲ್ಲಿ ಕೇಳಬೇಕು? ಹಿಂಗಾಗಿ ರೊಚ್ಚಿಗೆದ್ದು, ಬೇಂಡ್‌ ಬಾರಸಾರು, ಚಾ ಕುಡ್ಯಾಕ ಕುಂತಾಗ ಹಂಸರಾಗದಾಗ ಕೊಳಲು ಊದಿ, ಇದ್ದ ಮನಿ ಬಿಟ್ಟು ಹೊಕ್ಕೇನಿ ಅಂತ ಹೇಳಾರು.  

Advertisement

ಕೃಷ್ಣಗ ಇಂತಾ ಇಳಿ ವಯಸ್ಸಿನ್ಯಾಗ ಇನ್ನೂ ಏನ್‌ ಬೇಕಾಗೇತಿ ಅನ್ನೋದು ಆಳಾರ ಪ್ರಶ್ನೆ ? ಆದ್ರ ಮನ್ಯಾಗ ಹಿರೆ ಮನಿಷ್ಯಾಗ ಅವಂಗೇನು ಬೇಕಾಗಿರುದಿಲ್ಲ. ಆದ್ರ, ಮನ್ಯಾಗ ಹಿರೆತನಾ ನಡಸಾರು  ಸರಿಯಾಗಿ ನಡಸಾಕತ್ತಿಲ್ಲಾ ಅಂದಾಗ ಅದನ್ನ ನೋಡಿಕೊಂಡು ಹಿರ್ಯಾರು ಸುಮ್ಮನಿರಂಗಿಲ್ಲಾ. ಏನರ ವಟಾ ವಟಾ ಅಂತ ಶುರು ಹಚೊRಂಡಿರ್ತಾರು. ನಮ್ಮ ಮಂಗಳೂರಿನ ಪೂಜಾರಿ, ಜಾಫ‌ರ ಷರೀಪ್‌ನಂಗ.  

ಮನ್ಯಾಗ ಮೊಮ್ಮಕ್ಕಳಿಗೆ ಮುದುಕರ ಮಾತು ಕೇಳು ವ್ಯವಧಾನ ಕಡಿಮಿ, ಹಿಂಗಾಗೇ ಕಾಂಗ್ರೆಸ್‌ ಮಂದಿ ಅವರ ಬಾಯಿ ಮುಚ್ಚಸರಿ, ಇಲ್ಲಾಂದ್ರ ಇಡೀ ಪಕ್ಷದ ಮಾನಾ ಮರ್ಯಾದೆ ಹರಾಜ್‌ ಹಾಕ್ತಾರು ಅಂತಾರು. ಆದ್ರ, ಹಿರೇತನಾ ಮಾಡಾರು, ಭವಿಷ್ಯದ ದೃಷ್ಠಿಂದ ಮನ್ಯಾಗ ಮಕ್ಕಳ್ನೂ ನೋಡಕೋಬೇಕು. ವಯಸಾದ ಮುದುಕರೂ° ನೋಡಕೊಬೇಕು.  

ಕಾಂಗ್ರೆಸ್ಸಿನಂತಾ 130 ವರ್ಷ ಇತಿಹಾಸ ಇರೋ ಪಾರ್ಟಿಗೆ ಮೂವತ್ತು ಮಂದಿ ಮುದುಕರ ಭಾಳ? ಹಿರ್ಯಾರಿಗೆ ಸಂಕ್ರಾಂತಿಗೋ, ಹಟ್ಟೆಬ್ಬಕ್ಕೋ ಹೋಗಿ ಮಾತ್ಯಾಡಿÕ ಬಂದ್ರ ಅಷ್ಟ ಸಾಕು. ಸಂಕ್ರಮಣಕ್ಕ ಹಿರ್ಯಾರಿಗೆ ಎಳ್ಳು ಕೊಟ್ಟು ಎಳ್ಳಿನಂಗ ಇರೂನು, ಮಾನಮ್ಮಿಗೆ ಬಂಗಾರ ಕೊಟ್ಟು ಬಂಗಾರದಂಗ ಇರೂನು ಅಂದ್ರ ಸಾಕು. ಇನ್ನೂ ನೂರು ವರ್ಷ ಸುಖವಾಗಿರು ಅಂತ ಮನಸ್‌ ಪೂರ್ತಿ ಆಶೀರ್ವಾದಾ ಮಾಡ್ತಾರು.  ಕಾಂಗ್ರೆಸ್‌ನ್ಯಾಗ ಸಿದ್ದರಾಮಯ್ಯ ದತ್ತು ಪುತ್ರ ಇದ್ದಂಗ ಆಗೇತಿ, ಕೃಷ್ಣ, ಪೂಜಾರಿ, ಜಾಫ‌ರ ಷರೀಪ್‌ ಅಂತಾ ಹಿರ್ಯಾರ್ನ ನೋಡಬೇಕು ಅಂತೇನಿಲ್ಲಾ ಅನ್ನೋ ಭಾವನೆ ಬಂದಿರಬೇಕು ಅನಸೆôತಿ. ಹಿಂಗಾಗೇ ಕಾಂಗ್ರೆಸ್‌ ಕುಟುಂಬದ ಮೂಲ ಪುರುಷರು, ಇಷ್ಟೊಂದು ರೊಚ್ಚಿಗೆದ್ದಾರು ಅಂತ ಕಾಣತೈತಿ. 

 ಸಿದ್ರಾಮಯ್ಯ ಈಗ ಪಕ್ಷಾಗಿನ ಹಿರ್ಯಾರ್ನ ಕೇರ್‌ ಮಾಡದಂಗ ತಿರುಗ್ಯಾಡುದು ನೋಡಿ, ಜಾಫ‌ರ್‌ ಷರೀಫ್ ಒಬ್ರ ಮನ್ಯಾಗ ಕುಂತ ನಗತೀರಬೇಕ್‌ ಅನಸೆôತಿ. ಯಾಕಂದ್ರ ಅವರು 10 ವರ್ಷ ಕೇಂದ್ರದಾಗ ರೈಲ್ವೆ ಮಂತ್ರಿ ಆಗಿದ್ದಾರು. ಅವಾಗ ಅವರ ಮುಂದ ಎಲ್ಲಾ ರಾಜ್ಯದ ಸಿಎಂಗೋಳು ಬಂದು ಕೈ ಕಟಗೊಂಡು ನಿಲ್ಲತಿದ್ರಂತ. ಈಗ ಬ್ಯಾರೇ ಸಿಎಂಗೋಳು ಹೋಗ್ಲಿ ನಮ್ಮ ರಾಜ್ಯದ ಸಿಎಂ ನೋಡಾಕ ಬರಾವಲು ಅಂದ್ರ, ನನ್ನಂಗ ವಯಸ್ಸಾದ ಮ್ಯಾಲ ಸಿದ್ದರಾಮಯ್ಯಂದೂ ಸ್ಥಿತಿ ಹೆಂಗಿರತೈತಿ ಅಂತ ನೆನಸಿಕೊಂಡು ನಗತಿರಬೇಕು ಅನಸೆôತಿ.  

ಜಾಫ‌ರ್‌ ಷರೀಫ್, ಕೃಷ್ಣಾ, ಪೂಜಾರಿ ಎಲ್ಲಾರೂ ಕಾಂಗ್ರೆಸ್‌ ಮನಿ ಮಕ್ಕಳು, ಒಬ್ಬರಿಲ್ಲಾ ಒಬ್ಬರು ಮಕ್ಕಳ್ಳೋ, ಮೊಮ್ಮಕ್ಕಳ್ಳೋ ಅವರ ಬಗ್ಗೆ ಪ್ರೀತಿ ವಿಶ್ವಾಸ ಇಟಗೊಂಡು, ಆವಾಗವಾಗ ಬೊಕ್ಕೆ ಕೊಟ್ಟು ಮಾತಾಡಿÕ ಬರ್ತಾರು. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ದತ್ತು ಪುತ್ರ, ಮೂಲ ಕಾಂಗ್ರೆಸ್ಸಿಗರೆಲ್ಲಾ ಅವರ ಅಧಿಕಾರ ಮುಗಿಯೂದ ಕಾಯಾಕತ್ತಾರು. ಒಂದ್‌ ಸಾರಿ ಎಲೆಕ್ಷನ್ಯಾಗ ಸೋತ್ರ, ಮಕ್ಕಳು ಬರಂಗಿಲ್ಲಾ,ಮೊಮ್ಮಕ್ಕಳು ನೋಡಂಗಿಲ್ಲಾ. ಸಿದ್ದರಾಮಯ್ಯ ಸ್ಥಿತಿ ಮುಂದನೂ ಹಿಂಗ ಇರತೈತಿ ಅಂತ ಹೇಳಾಕಾಗೂದಿಲ್ಲ. ಯಾಕಂದ್ರ ಎಲ್ಲಾರೂ ದೇವೇಗೌಡರು ಆಗಾಕ್‌ ಆಗುದಿಲ್ಲ. 

 ಕೃಷ್ಣಾನೂ ದತ್ತು ಪುತ್ರಾನೇ ಅಂತಾರು, ಯಂಗ್‌ ಇದ್ದಾಗ, ಪ್ರಧಾನಿ ನೆಹರೂನೇ ಬಂದು ಪ್ರಚಾರ ಮಾಡಿದ್ರೂ, ಕಾಂಗ್ರೆಸ್‌ ವಿರುದ್ಧ ಗೆದ್ದು ಬಂದಿದ್ದೆ ಅಂತ ತಮ್ಮ ಯೌವ್ವನದ ಸಾಮರ್ಥ್ಯನಾ ಹೇಳಿಕೊಂಡಾರು. ಆದರ, ನೆಹರೂ ಬಂದರೂ ಕೃಷ್ಣ ಗೆಲ್ಲಾಕ ಅವಾಗ ಸ್ಯಾಂಡಲ್‌ವುಡ್‌ನಾಗ ಪೇಮಸ್‌ ಆಗಿದ್ದ ಸಿನೆಮಾ ಹಿರೋಯಿನ್‌ ಕಾರಣ ಅಂತ ಕೃಷ್ಣಾ ವಿರೋಧಿಗೋಳು ಹೇಳತಾರು. ಆದ್ರ, ಕೃಷ್ಣಗ ಯಾರ ನಿಂತು ಗೆಲ್ಲಿಸಿದ್ರೋ ಗೊತ್ತಿಲ್ಲಾ, ಇಷ್ಟೆತ್ತರಕ ಬೆಳಾಕ ಕಾಂಗ್ರೆಸ್‌ ಎಲ್ಲಾ ಕೊಟ್ಟೇತಿ, ಅಷ್ಟೆಲ್ಲಾ ಕೊಟ್ಟ ಮ್ಯಾಲ ಮನಿ ಬಿಟ್ಟು ಹೊಕ್ಕೇನಿ ಅಂದ್ರ ಹೆಂಗ ಅನ್ನುವಂತ ಪ್ರಶ್ನೆ ಮೂಡತೈತಿ.  

ಮನಿ ಹಿರ್ಯಾ ಮನಿ ಬಿಟ್ಟು ಹೊಂಟಾನು ಅಂದ್ರ ಜನಾ ಅವರ ಮಕ್ಕಳ ಬಗ್ಗೆ ಆಡಿಕೊಳ್ತಾರು, ಇಲ್ಲಾಂದ್ರ, ಆ ಮನಿಷ್ಯಾನ ಮನಸ್ಥಿತಿ ಸರಿ ಇಲ್ಲಾ ಅಂದೊತಾರು. ಕೃಷ್ಣ ಇಳಿ ವಯಸಿನ್ಯಾಗ ಮನಿ ಬಿಟ್ಟು ಯಾವುದರ ಆಶ್ರಮ ಸೇರಿದ್ರ ಯಾರೂ ಏನೂ ಅಂದೊRದಿಲ್ಲ ಅನಸೆôತಿ. ಆದ್ರ ಎದರಗಡೆ ವೈರಿ ಮನಿ ಸೇರತಾರು ಅಂದ್ರ ಹಿರೆತನಾ ಮಾಡಾರಿಗೆ ಒಂದ್‌ ರೀತಿ ಅವಮಾನ ಮಾಡಿದಂಗ ಅದು. 

 ಕೃಷ್ಣ  ಅವರ  ಮನಿ ಬಿಡ್ತಾನು ಅಂದ ಕೂಡ್ಲೆ ಯಡಿಯೂರಪ್ಪನೋರು ತಮ್ಮನಿ ಬಾಗಲಾ ಕಸಾ ಹೊಡದು ತೋರಣ ಕಟಕೊಂಡ ನಿಂತು ಬಿಟ್ಟರು. ಮನಿ ಬಿಟ್ಟ ಕೃಷ್ಣ ಮಠಕ್ಕ ಹೊಕ್ಕಾರ, ಆಶ್ರಮಕ್ಕ ಹೊಕ್ಕಾರ ಅನ್ನೋದೂ° ಕೇಳದನ ನಮ್ಮನಿಗೆ ಬರಾತಾರು ಅಂತೇಳಿ, ಮಗನ ಮದುವಿ ಸಲುವಾಗಿ ಮನಿನೋಡಾಕ ಬೀಗರು ಬರ್ತಾರು ಅನ್ನೊವಂಗ ಮಾಡಿದ್ರು. ಅವರ ಮನ್ಯಾಗ ಚಿಗದೊಡಪ್ಪನ ಮಕ್ಕಳ ಜಗಳ ದಿನಾ ಬೆಳಗಾದ್ರ ನಡ್ಯಾಕತ್ತೇತಿ. 

 ಈಶ್ವರಪ್ಪ ಇಷ್ಟು ವರ್ಷ ಪಕ್ಷದಾಗ ಇದೊಡು ಯಡಿಯೂರಪ್ಪನ ಯಾ ಬಾಣಾ ಬಿಟ್ರೂ ಗುರಿ ಇಟ್ಟು ಹೊಡ್ಯಾಕ ಆಗಿರಲಿಲ್ಲ. ಈಗ ರಾಯಣ್ಣ ಅನ್ನೋ ಇತಿಹಾಸದ ಶೂರನ ಅಸ್ತ್ರ ಇಟಗೊಂಡು ಬಾಣಾ ಬಿಟ್ಟು ಯಡಿಯೂರಪ್ಪನ ಅಷ್ಟ ಅಲ್ಲಾ, ಆಳ್ಳೋ ಸಿದ್ದರಾಮಯ್ಯನ ನಿದ್ದಿನೂ ಕೆಡಿಸೇತಿ, ಅದ್ಕ  ಇಷ್ಟು ವರ್ಷ ನೆನಪಾಗದಿರೋ ರಾಯಣ್ಣ  ಸತ್ತ ದಿನಾ ಈ ವರ್ಷ ಏಕಾ ಏಕಿ ನೆನಪಾಗಿ, ಅವನ ನಮ್ಮನಿ ಮೂಲ ಪುರುಷ ಅನ್ನೋವಂಗ ಮಾತ್ಯಾಡಿದ್ರು. ರಾಯಣ್ಣ ಬ್ರಿಟೀಷರಿಗೆ ಎಷ್ಟರ ಮಟ್ಟಿಗೆ ನಿದ್ದಿ ಕೆಡಿಸಿದೊ° ಗೊತ್ತಿಲ್ಲ. ಈಗ ಇರೋ ಬರೋರೆ°ಲ್ಲಾ ನಿದ್ದಿಗೆಡಿಸಿ ಬಿಟ್ಟಾನು.  

ಯಡಿಯೂರಪ್ಪ ಈಶ್ವರಪ್ಪಗ ಹೆದರಿದ್ದೂ ಅವನ ಶಕ್ತಿ ನೋಡಿ ಅಲ್ಲ. ಆಂವ  ಇಟಗೊಂಡಿರೋ ರಾಯಣ್ಣ ಅನ್ನೋ ಹೆಸರಿಗೆ ಇರೋ ಶಕ್ತಿ ಐತೆಲ್ಲಾ ಅದಕ್ಕ ! ಅಷ್ಟು ಹೆದರಿಕಿ ಅವರಿಗೆ. ಯಾಕಂದ್ರ ರಾಯಣ್ಣ ಸಣ್ಣ ಪಡೆ ಕಟಗೊಂಡು ಜಗತ್ತ ಆಳಿದ ಬ್ರಿಟೀಷರಿಗೆ ಸೊಡ್ಡಾ ಹೊಡದಾಂವ ಆಂವ. ಅಲ್ಲದ ರಾಯಣ್ಣ ಹೋರಾಡಿದ್ದು, ಚೆನ್ನಮ್ಮನ ಸಾಮ್ರಾಜ್ಯಾ ಉಳಸಾಕ ಅನ್ನೋದು ಭಾಳ ಇಂಪಾರ್ಟಂಟ್‌ ಅನಸೆôತಿ. ಯಾಕಂದ್ರ ಚೆನ್ನಮ್ಮನ ಸಾಮ್ರಾಜ್ಯಾ ನಾಶ ಮಾಡಿದ್ದು, ಮಲ್ಲಪ್ಪ ಶೆಟ್ಟಿ ಅನ್ನೋದು, ವೀರ ರಾಣಿಯ ಕುಲದಾರಿಗೆ ಗೊತ್ತೈತಿ. ಅವರಿಗೇನಾದ್ರೂ ಇತಿಹಾಸ ನೆನಪಾಗಿ, ಚೆನ್ನಮ್ಮಳಿಗಾಗಿ ಹೋರಾಡಿದ ರಾಯಣ್ಣಗೆ ಜೈ ಅಂದ್‌ ಬಿಟ್ರ, ಯಡಿಯೂರಪ್ಪನವರ ಅನುಭವ ಮಂಟಪ ಮುರಿದು ಬೀಳತೈತಿ. 

 ರಾಯಣ್ಣ ಬ್ರಿಗೇಡ್‌ನಾರಿಗೆ ಯಡಿಯೂರಪ್ಪ ಅನುಭವ ಮಂಟಪ ಕಟ್ಟಿ ಎಲ್ಲಾರಿಗೂ ಆಶ್ರಯ ನೀಡಿದರ ಏನೂ ಸಮಸ್ಯೆ ಇಲ್ಲಾ ಅನಸೆôತಿ. ಆದ್ರ ಅವರಿಗೆ ಆಗೋ ಲಕ್ಷಣ ಕಾಣಾಕತ್ತಿಲ್ಲ. ಇವರು ಕಟ್ಟಿದ ಅನುಭವ ಮಂಟಪದಾಗ ತಮಿಳು ನಾಡಿನ ಚಿನ್ನಮ್ಮನಂಗ ಇನ್ಯಾರೋ ಬಂದು ಅಧಿಕಾರ ಅನುಭವಿಸ್ತಾರು ಅನ್ನೋದು ಇವರ ಲೆಕ್ಕಾಚಾರ. ಹಿಂಗಾಗೇ ಬಿಜೆಪ್ಯಾಗ ರಾಯಣ್ಣ ಜೀವಂತ ಇರಬೇಕು ಅಂತ ಹೈಕಮಾಂಡೂ ಈಶ್ವರಪ್ಪನ ಬೆನ್ನಮ್ಯಾಲ ಬಂದೂಕು ಇಟಕೊಂಡು ನಿಂತಂಗ ಕಾಣತೈತಿ. 

 ಮನಿ ಕೆಲಸಕ್ಕ ಬಂದ ಚಿನ್ನಮ್ಮ ನಾನ ಮನಿಯೊಡತಿ ಅಂದ್ರ ಮೂವತ್ತು ವರ್ಷದಿಂದ ಪಕ್ಷ ಕಟ್ಟಿ ಹೋರಾಡಿದಾರಿಗೆ ಹೆಂಗ್‌ ಅನಸೆôತಿ. ಅಮ್ಮ ಹೇಳಿದ್ನ ಎಲ್ಲಾನೂ ಒಪ್ಪಕೊಂಡು ಬಂದಿರೋ ಪನ್ನೀರ ಸೆಲ್ವಂನ ಚಿನ್ನಮ್ಮನ ವಿರುದ್ಧ ತಿರುಗಿ ಬಿದ್ದಾರ, ಇನ್ನ ಯಡಿಯೂರಪ್ಪನ ಲೂನಾದಾಗ ಹತ್ತಿಸಿಕೊಂಡು ತಿರುಗಾಡಿ ಪಕ್ಷಾ ಕಟ್ಟಿದ ಈಶ್ವರಪ್ಪ  ಸುಮ್ಮನಿರ್ತಾನ ? 

 ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಅಂತ ಅಧಿಕಾರದಾಗ ಇದ್ದಾಗೆಲ್ಲಾ ಹೇಳಿಕೊಂತ ತಿರುಗಾಡಿದ್ದ ಯಡಿಯೂರಪ್ಪ, ರಾಯಣ್ಣ ಬ್ರಿಗೇಡ್‌ ಅಂದ್ರ ಯಾಕ್‌ ಇಷ್ಟು ತಲಿ ಕೆಡಿಸಕೊಂಡಾರೋ ಗೊತ್ತಿಲ್ಲಾ, ಬಸವಣ್ಣನ ಅನುಭವ ಮಂಟಪದಾಗ ಅಲ್ಲಮ ಪ್ರಭುಗಳು ಇದ್ರು, ಮಾದರ ಚೆನ್ನಯ್ಯನೂ ಇದ್ದಾ, ಮಡಿವಾಳರ ಮಾಚಿದೇವನೂ ಇದ್ದ, ಅವರ್ಯಾರೂ ನಮಗೂ ಅಧಿಕಾರ ಕೊಡ್ರಿ ಅಂತ ಕೇಳಿಲ್ಲ. ನಮ್ಮನ್ನೂ ನಿಮ್ಮ ಸಮಾನರಾಗಿ ಕಾಣರಿ ಅಂತಿದ್ರು. 

ಶಂಕರ ಪಾಗೋಜಿ   

Advertisement

Udayavani is now on Telegram. Click here to join our channel and stay updated with the latest news.

Next