Advertisement

ಕುಸಿವ ಹಂತದ ಮನೆಗಳಲ್ಲೇ ಬಡವರ ಬದುಕು

04:05 PM Aug 29, 2019 | Naveen |

ಎಚ್.ಬಿ.ಮಂಜುನಾಥ
ಕೆ.ಆರ್‌.ಪೇಟೆ:
ಗುಡಿಸಲು ಮುಕ್ತ ರಾಜ್ಯ ಮಾಡಲು ಸರ್ಕಾರ ವಿವಿಧ ಯೋಜನೆಗಳಡಿ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಮನೆಗಳ ನಿರ್ಮಾಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಆದರೆ, ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸ್ವಾರ್ಥದಿಂದ ಬಡವರಿಗೆ ದೊರೆಯಬೇಕಾದ ಮನೆಗಳು ಶ್ರೀಮಂತರ ಪಾಲಾಗುವುದಲ್ಲದೆ, ಬಡವರು ಬೀಳುವ ಹಂತದಲ್ಲಿರುವ ಹೆಂಚಿನ ಮನೆ, ಗುಡಿಸಲಲ್ಲೇ ಮಳೆ, ಗಾಳಿಗೆ ಆತಂಕದಲ್ಲೇ ಬದುಕಬೇಕಿದೆ.

Advertisement

ರಾಜ್ಯ ಸರ್ಕಾರ ಇಂದಿರಾ ಅವಾಸ್‌, ಬಸವ ವಸತಿ ಹೀಗೆ ವಿವಿಧ ಯೋಜನೆಗಳಡಿ ಮನೆಗಳು ನಿರ್ಮಿಸಿಕೊಡುತ್ತಿದೆ. ಬಡವರಿಗೆಂದು ರೂಪಿಸುವ ಸರ್ಕಾರಿ ಸೌಲಭ್ಯಗಳು, ಯೋಜನೆಗಳು ಶ್ರೀಮಂತರ ಪಾಲಾಗುತ್ತಿವೆ ಎನ್ನಲು ತಾಲೂಕಿನ ಗಂಜಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯೂ ಒಂದು ಪ್ರತ್ಯಕ್ಷ್ಯ ಸಾಕ್ಷಿ. ಸರ್ಕಾರಿ ಮನೆ ಪಡೆಯಬೇಕಾದ ಬಡ ಕುಟುಂಬಗಳಿಗೆ ಮನೆಗಳು ಸಿಗದೆ ಅರ್ಧ ಕುಸಿದು ಬಿದ್ದಿರುವ ನೂರಾರು ವರ್ಷಗಳ ಹಳೆಯ ಹಾಗೂ ಅಪಾಯಕಾರಿ ಮನೆಗಳಲ್ಲಿ ಜೀವನ ನಡೆಸುತ್ತಿರುವುದು ವಿಪರ್ಯಾಸ.

ಬೆಂಬಲಿಗರಿಗೇ ಸೌಲಭ್ಯ: ಪ್ರತಿವರ್ಷ ಸರ್ಕಾರ ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆಗಳ ಮೂಲಕ ಸಾಲ ಹಾಗೂ ಸಹಾಯಧನ ಬಿಡುಗೆಡೆ ಮಾಡಿ ವಸತಿ ರಹಿತರು, ಸ್ವಂತ ಸೂರು ನಿರ್ಮಿಸಿಕೊಳ್ಳಲು ಹಾಗೂ ಅಪಾಯಕಾರಿ ಮನೆಗಳನ್ನು ಕೆಡವಿ ಹೊಸದಾಗಿ ಮನೆ ನಿರ್ಮಿಸಿಕೊಳ್ಳಲು ಅನುದಾನ ನೀಡುತ್ತದೆ. ಸಾಮಾನ್ಯ ವರ್ಗದವರಿಗೆ ಒಂದು 1.20 ಲಕ್ಷ ಹಾಗೂ ಎಸ್‌ ಸಿ/ಎಸ್‌ಟಿ ಸಮುದಾಯದವರಿಗೆ 1.60 ಲಕ್ಷ ನೀಡುತ್ತಿದೆ. ಇದರಿಂದ ರಾಜ್ಯದಲ್ಲಿ ಸಹಸ್ರಾರು ಬಡ ಕುಟುಂಬಗಳು ಸ್ವಂತ ಸೂರು ನಿರ್ಮಿಸಿಕೊಳ್ಳಲಿ ಎಂಬ ಸದುದ್ದೇಶದಿಂದ ಸರ್ಕಾರ ನೀಡುತ್ತಿದೆ. ಆದರೆ ಕೆಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸ್ವಾರ್ಥಕ್ಕಾಗಿ ಅವರವರ ಬೆಂಬಲಿಗರು, ಬೇಕಾದವರಿಗೆ ಮನೆಗಳನ್ನು ಕೊಟ್ಟು ಬಡವರನ್ನು ಕೈಬಿಡುತ್ತಿದ್ದು, ಬಡವರು ಅಪಾಯಕಾರಿ ಮನೆ, ಗುಡಿಸಲುಗಳಲ್ಲಿಯೇ ವಾಸಿಸುವಂತಾಗಿದೆ.

ದಾಖಲೆಗಳ ಕೊರತೆ: ಗ್ರಾಮೀಣ ಭಾಗದಲ್ಲಿ ಅವಿದ್ಯಾವಂತರು, ಕೂಲಿ ಕಾರ್ಮಿಕರು, ಕೆಲಸದ ಒತ್ತಡ ಹೀಗೆ ವಿವಿಧ ಕಾರಣಗಳಿಂದ ಕೃಷಿ ಭೂಮಿ, ಮನೆಗಳನ್ನು ಪೂರ್ವಿಕರ ಹೆಸರಿನಿಂದ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿಲ್ಲ. ಕೆಲವರು ವರ್ಗಾವಣೆ ಮಾಡುವಂತೆ ಇಲಾಖೆಗಳಿಗೆ ಅರ್ಜಿ ಹಾಕಿ ಹತ್ತಾರು ಬಾರಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದರೂ ಪ್ರಯೋಜನವಾಗದೆ ಸುಮ್ಮನಾಗಿ ಬಿಟ್ಟಿದ್ದಾರೆ. ಹೀಗಾಗಿ ಮಳೆ ಬಂದು ಮನೆ ಕುಸಿದು ಬಿದ್ದರೆ, ಅಥವಾ ದುರಸ್ತಿ ಮಾಡಿಕೊಳ್ಳಲು ಸರ್ಕಾರದಿಂದ ಅನುದಾನ ಅಥವಾ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಲೇ ಗ್ರಾಮೀಣ ಅರ್ಹ ಫ‌ಲಾನುಭವಿಗಳು ಇಂದಿಗೂ ಸರ್ಕಾರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಶೌಚಾಲಯ ಸೌಲಭ್ಯವೂ ಸಿಕ್ಕಿಲ್ಲ: ದೇಶದಲ್ಲಿ ಬಯಲು ಶೌಚ ಮುಕ್ತ ಮಾಡಲು ಕೇಂದ್ರ ಸರ್ಕಾರ ಕೋಟ್ಯಂತರ ರೂ.ಗಳ ಅನುದಾನ ಬಿಡುಗಡೆ ಮಾಡಿದೆ. ಆದರೆ, ಕೆಲವು ಮಾಲೀಕರ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದ ಕಾರಣದಿಂದಾಗಿ ಇಂದಿಗೂ ಮಹಿಳೆಯರು, ಮಕ್ಕಳು ಬಯಲು ಶೌಚಾಲಯಕ್ಕೆ ಮೊರೆ ಹೋಗಿದ್ದಾರೆ. ಓರ್ವ ಮಹಿಳೆ ಶೌಚಾಲಯ ನಿರ್ಮಾಣ ಮಾಡಿಸಿಕೊಳ್ಳಲು ಗುಂಡಿ ತಗೆಸಿ, ಸಿಮೆಂಟ್ ರಿಂಗ್‌ಗಳನ್ನು ತರಿಸಿಕೊಂಡಿದ್ದರೂ ಅಧಿಕಾರಿಗಳು ಅನುದಾನ ನೀಡಲಾಗದೆ ಕಳೆದ ಮೂರು ವರ್ಷಗಳಿಂದ ಗುಂಡಿ ಹಾಗೆಯೇ ಉಳಿದಿದೆ. ಈಗಲಾದರೂ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಎಲ್ಲ ಮನೆಗಳಿಗೂ ಶೌಚಾಲಯ ನಿರ್ಮಾಣ ಮಾಡಿಸಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next