Advertisement

ಸೌಲಭ್ಯ ವಂಚಿತ ಕೆ.ಆರ್‌.ಪೇಟೆ ಬಸ್‌ ನಿಲ್ದಾಣ

04:09 PM Jun 26, 2019 | Team Udayavani |

ಕೆ.ಆರ್‌.ಪೇಟೆ: ಪ್ರತಿದಿನ ಕನಿಷ್ಠ ಎರಡು ಸಾವಿರ ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸುವ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕನಿಷ್ಠ ಮೂಲ ಸೌಲಭ್ಯಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.

Advertisement

ಪಟ್ಟಣದಿಂದ ರಾಜಧಾನಿ ಬೆಂಗಳೂರು, ಮೈಸೂರು, ಮತ್ತಿತರ ಜಿಲ್ಲಾ ಕೇಂದ್ರಗಳು, ತಾಲೂಕಿನ ವಿವಿಧ ಗ್ರಾಮಗಳಿಗೆ ಪ್ರತಿದಿನ ಪ್ರಯಾಣಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಓಡಾಡುತ್ತಾರೆ. ಆದರೆ, ನಮ್ಮ ತಾಲೂಕು ಕೇಂದ್ರದಲ್ಲಿರುವ ಬಸ್‌ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು ಸಿಗುವುದಿಲ್ಲ, ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಸಮರ್ಪಕ ಆಸನಗಳ ವ್ಯವಸ್ಥೆ ಮಾಡಿಲ್ಲ. ದ್ವಿಚಕ್ರ ವಾಹನ ನಿಲ್ದಾಣವೂ ಇಲ್ಲ, ಕೆಲಸ ಕಾರ್ಯಗಳ ನಿಮಿತ್ತ ಬಂದ ಪ್ರಯಾಣಿಕರು ಬಸ್‌ಗಳಿಗಾಗಿ ಕಾಯುವ ವೇಳೆ ಹಸಿದರೆ ಏನಾದರೂ ತಿನ್ನಲು ಕನಿಷ್ಠ ಒಂದು ಸಣ್ಣ ಹೋಟೆಲ್ ಕೂಡ ಇಲ್ಲ. ಇನ್ನು ಶೌಚಾಲಯ ವಿಷಯ ಕೇಳುವುದೇ ಬೇಡ. ಅಷ್ಟಲ್ಲದೆ ಎಲ್ಲಕ್ಕಿಂತ ಮುಖ್ಯವಾಗಿ ಸ್ವಚ್ಛತೆಯಂತೂ ಇಲ್ಲವೇ ಇಲ್ಲ.

ಚರಂಡಿ ದುರ್ವಾಸನೆ: ಇರಬೇಕಾದ ಯಾವ ಮೂಲ ಸೌಲಭ್ಯಗಳು ಇಲ್ಲದಿದ್ದರೂ ಪ್ರಯಾಣಿಕರಿಗೆ ಚರಂಡಿಯ ದುರ್ವಾಸನೆ, ಕೊಳಚೆ ಮಾತ್ರ ತುಂಬಿ ತುಳುಕುತ್ತಿದೆ. ನಿಲ್ದಾಣದಲ್ಲಿ ಮೊದಲು ಒಂದು ಹೋಟೆಲ್ ಇತ್ತು. ಆದರೆ, ಈ ಅನೈರ್ಮಲ್ಯದಲ್ಲಿ ಆ ಹೋಟೆಲ್ನಲ್ಲಿ ಊಟ, ತಿಂಡಿ ಮಾಡಲು ಪ್ರಯಾಣಿಕರು ಹಿಂಜರಿಯುತ್ತಿದ್ದ ಕಾರಣ, ಗುತ್ತಿಗೆ ಪಡೆದಿರುವವರು ನಷ್ಟ ಅನುಭವಿಸಿ ಮುಚ್ಚಿದರು. ಈಗಲೂ ಯಾರೇ ಹೋಟೆಲ್ ತೆರೆದರೂ ಕೆಲವೇ ತಿಂಗಳಲ್ಲಿ ಜಾಗ ಖಾಲಿ ಮಾಡುತ್ತಿದ್ದಾರೆ.

ಉದ್ಘಾಟನೆ ಭಾಗ್ಯ ಕಾಣದ ಶುದ್ಧ ನೀರಿನ ಘಟಕ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರದ ಅಂಗ ಸಂಸ್ಥೆ ಭಾರತ್‌ ಪೆಟ್ರೋಲಿಯಂ ವತಿಯಿಂದ ಬಸ್‌ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿರ್ಮಿಸಿದರು. ಆದರೆ ಸಾರಿಗೆ ಸಂಸ್ಥೆಯವರು ಆ ಘಟಕಕ್ಕೆ ವಿದ್ಯುತ್‌ ಸಂಪರ್ಕ ನೀಡಿ ಉದ್ಘಾಟನೆ ಮಾಡುವ ಕನಿಷ್ಠ ಶ್ರದ್ಧೆಯೂ ತೋರದೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದು ವ್ಯರ್ಥವಾಗಿ ನಿಂತಿದೆ.

ಸ್ವಚ್ಛತೆಯೇ ಕಾಣದ ನಿಲ್ದಾಣ: ದಶಕಗಳಿಂದಲೂ ಬಸ್‌ ನಿಲ್ದಾಣದ ಸ್ವಚ್ಛತೆಯ ಗುತ್ತಿಗೆಯನ್ನು ರಾಜಕಾರಣಿಗಳು ಅಥವಾ ಅವರ ಬೆಂಬಲಿಗರು ಪಡೆಯುತ್ತಾರೆ. ಆದರೆ, ಅವರ್ಯಾರು ಸ್ವಚ್ಛ ಮಾಡುವುದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರಿಗೆ ಗುತ್ತಿಗೆಯಷ್ಟೇ ಮುಖ್ಯ. ಸ್ವಚ್ಛತೆ ಮಾಡುವುದು ಬೇಕಿಲ್ಲ. ಬೇಕಾಬಿಟ್ಟಿ ನಿರ್ವಹಣೆ ಮಾಡುತ್ತಾರೆ. ಕಾಟಾಚಾರಕ್ಕೆ ಯಾವಾಗಲೋ ಒಮ್ಮೆ ನಿಲ್ದಾಣದಲ್ಲಿ ಪ್ರಯಾಣಿಕರು ನಿಲ್ಲುವ ಕೆಲ ಸ್ಥಳ ಮಾತ್ರ ಸ್ವಚ್ಛ ಮಾಡುತ್ತಾರೆ. ಇತರೆ ಭಾಗಗಳನ್ನು ಸ್ವಚ್ಛ ಮಾಡುವುದಿಲ್ಲ. ಜೊತೆಗೆ ನಿಲ್ದಾಣದಲ್ಲಿ ಸಂಗ್ರಹ ವಾಗುವ ಘನ ತ್ಯಾಜ್ಯ ಹೊರಭಾಗಕ್ಕೆ ಸಾಗಿಸುವ ಬದಲಿಗೆ ನಿಲ್ದಾಣದಲ್ಲಿಯೇ ಬೆಂಕಿ ಹಚ್ಚಿ ಸುಡುತ್ತಾರೆ.

Advertisement

ಕೊಳಚೆ ನೀರು ಸಂಗ್ರಹ: ನಿಲ್ದಾಣದಲ್ಲಿಯೇ ಕೊಳಚೆ ನೀರು ಸಂಗ್ರಹವಾಗುವುದರಿಂದ ಕೊಳಕು ನೀರನಲ್ಲಿ ಹುಳುಗಳು ಉತ್ಪತ್ತಿಯಾಗುತ್ತಿವೆ. ಜೊತೆಗೆ ಕೊಳಕು ನೀರಿನ ದುರ್ವಾಸನೆಯಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ನಿಲ್ದಾಣದಲ್ಲಿರುವ ಶೌಚಾಲಯದ ನೀರನ್ನೂ ನೇರವಾಗಿ ಚರಂಡಿಗೆ ಬಿಡುತ್ತಿರುವುದರಿಂದ ಆ ದುರ್ವಾಸನೆ, ಸೊಳ್ಳೆ, ಹುಳಗಳ ಉತ್ಪಾದನೆಯಿಂದ ನಿಲ್ದಾಣದ ಅಕ್ಕಪಕ್ಕದಲ್ಲಿರುವ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ.

 

•ಎಚ್.ಬಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next