Advertisement

ಗ್ರಾಮೀಣಾಭಿವೃದ್ಧಿ ಇಲಾಖೆ ಹುದ್ದೆ ಭರ್ತಿ ಹೊಣೆ KPSC ಹೆಗಲಿಗೆ

09:58 PM Jul 20, 2023 | Team Udayavani |

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿ ನೇರ ನೇಮಕಾತಿ ಕೋಟಾದಲ್ಲಿ ಖಾಲಿ ಇರುವ ಸುಮಾರು 700 ಹುದ್ದೆಗಳ ಭರ್ತಿ ಮಾಡುವುದು ಈಗ ಕರ್ನಾಟಕ ಲೋಕಸೇವಾ ಆಯೋಗದ ಹೆಗಲಿದೆ ಬಿದ್ದಿದೆ.

Advertisement

ಗ್ರಾಮ ಪಂಚಾಯತ್‌ಗಳಲ್ಲಿ ನೇರ ನೇಮಕಾತಿ ಕೋಟಾದಡಿ ಖಾಲಿ ಉಳಿದಿರುವ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್‌ ಕಾರ್ಯದರ್ಶಿ, ಗ್ರಾ.ಪಂ. ಸಹಾಯಕರು ಗ್ರೇಡ್‌ 1 ಮತ್ತು 2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆ ಸೇರಿ ಸುಮಾರು 700 ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕಾತಿ ಮಾಡಿಕೊಳ್ಳಲು ಸರಕಾರ ನಿರ್ಧರಿಸಿದೆ.

ಈಗಾಗಲೇ 700 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಒಪ್ಪಿಗೆ ಸಿಕ್ಕಿದ್ದು, ಮೀಸಲಾತಿಗೆ ಸಂಬಂಧಿಸಿ ಹಿಂದುಳಿದ ವರ್ಗಗಳ ಕಲ್ಯಾಣ, ವಿಕಲಚೇತನರ ಕಲ್ಯಾಣ, ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ಸೇರಿ ಮೀಸಲಾತಿ ವ್ಯಾಪ್ತಿಗೆ ಬರುವ ಇಲಾಖೆಗಳಿಗೆ ಕಡತವನ್ನು ಕಳಿಸಲಾಗಿದ್ದು, ಆ ಇಲಾಖೆಗಳಿಂದ ಉತ್ತರ ಬಂದ ತತ್‌ಕ್ಷಣ ನೇಮಕಾತಿ ಪ್ರಸ್ತಾವನೆಯನ್ನು ಕರ್ನಾಟಕ ಲೋಕಾಸೇವಾ ಆಯೋಗಕ್ಕೆ ರವಾನಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಲಾಖೆಯಲ್ಲಿ ಖಾಲಿ ಇದ್ದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ. ಕಾರ್ಯದರ್ಶಿ, ಗ್ರಾ.ಪಂ. ಸಹಾಯಕರು ಗ್ರೇಡ್‌ 1 ಮತ್ತು 2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕ ಮಾಡಿಕೊಳ್ಳಲು 2019ರಲ್ಲಿ ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸಿಕೊಳ್ಳಲಾಗಿತ್ತು. ಕೋವಿಡ್‌ ಕಾರಣಕ್ಕೆ ಎಲ್ಲ ನೇಮಕಾತಿಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಈ ನೇಮಕಾತಿಗಳು ನನೆಗುದಿಗೆ ಬಿದ್ದಿದ್ದವು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬದಲು ಕರ್ನಾಟಕ ಲೋಕಸೇವಾ ಆಯೋಗದ ಮೂಲಕವೇ ನೇಮಕಾತಿ ಮಾಡಿಕೊಳ್ಳಲು ಸರಕಾರದ ಮಟ್ಟದಲ್ಲಿ ತೀರ್ಮಾನ ಆಗಿರುವ ಹಿನ್ನೆಲೆಯಲ್ಲಿ 2019ರ ವಿಶೇಷ ನೇಮಕಾತಿ ನಿಯಮಗಳನ್ನು ಹಿಂಪಡೆದುಕೊಳ್ಳಲಾಗಿದ್ದು, ಲೋಕಸೇವಾ ಆಯೋಗದ ಮೂಲಕ ನೇಮಕಾತಿಗೆ ಆದೇಶಿಸಲಾಗಿದೆ.

ವಿಶೇಷ ನಿಯಮ ವಾಪಸ್‌
ಲೋಕಸೇವಾ ಆಯೋಗದ ಮೂಲಕ ನೇಮಕಾತಿ ಮಾಡಿಕೊಳ್ಳಬೇಕಾದರೆ ವಿಶೇಷ ನೇಮಕಾತಿ ಅಗತ್ಯ ಇಲ್ಲ. ಬೇರೆ ನೇಮಕಾತಿ ಪ್ರಾಧಿಕಾರ ಅಥವಾ ನೇಮಕಾತಿ ಸಂಸ್ಥೆಗಳ ಮೂಲಕ ನೇಮಕಾತಿಗಳನ್ನು ನಡೆಸಿದರೆ ಆಯಾ ನೇಮಕಾತಿಗಳಿಗೆ ಸೀಮಿತವಾಗಿ ವಿಶೇಷ ನಿಯಮಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. 2019ರಲ್ಲಿ ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸಲಾಗಿತ್ತು. ಕೋವಿಡ್‌ ಕಾರಣಕ್ಕೆ ನೇಮಕಾತಿ ನಡೆಯದ ಕಾರಣ ಆ ವಿಶೇಷ ನಿಯಮಗಳು ಕಾರ್ಯಗತಗೊಂಡಿಲ್ಲ. ಈ ಮಧ್ಯೆ ಲೋಕಸೇವಾ ಆಯೋಗದ ಮೂಲಕ ನೇಮಕಕ್ಕೆ ತೀರ್ಮಾನ ಮಾಡಿದ್ದರಿಂದ 2019ರ ವಿಶೇಷ ನೇಮಕಾತಿ ನಿಯಮಗಳನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Advertisement

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಸಹಾಯಕರು, ಲೆಕ್ಕ ಸಹಾಯಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿ ನೇಮಕಾತಿ ಪ್ರಸ್ತಾವನೆ ಇನ್ನಷ್ಟೇ ಸಂಬಂಧಪಟ್ಟ ಇಲಾಖೆಯಿಂದ ಆಯೋಗಕ್ಕೆ ಬರಬೇಕಿದೆ.
– ಸುರಳ್ಕರ್‌ ವಿಕಾಸ್‌ ಕಿಶೋರ್‌, ಕಾರ್ಯದರ್ಶಿ, ಕೆಪಿಎಸ್‌ಸಿ.

ಪರೀಕ್ಷಾ ಪ್ರಾಧಿಕಾರ, ಲೋಕಸೇವಾ ಆಯೋಗ ಯಾವುದಾದರೂ ಇರಲಿ. ಸರಕಾರದ ನಿರ್ಧಾರಕ್ಕೆ ಬದ್ಧ. ಆದರೆ ನೇಮಕಾತಿ ಕಾಲಮಿತಿಯೊಳಗೆ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂಬುದಷ್ಟೇ ನಮ್ಮ ಆಗ್ರಹ.
– ರಾಜು ಚ. ವಾರದ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘ.

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next