Advertisement

ಕೆಪಿಎಸ್‌ಸಿ: 3 ತಿಂಗಳಲ್ಲಿ ಪ್ರಾಸಿಕ್ಯೂಶನ್‌ ಮುಗಿಸಿ: ಹೈಕೋರ್ಟ್‌

03:45 AM Jul 06, 2017 | |

ಬೆಂಗಳೂರು: ಕೆಪಿಎಸ್‌ಸಿಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಕೆಲ ಸದಸ್ಯರ ವಿರುದ್ಧ ಪ್ರಾಸಿಕ್ಯೂಶನ್‌ಗೆ ರಾಷ್ಟ್ರಪತಿಗಳಿಂದ ಅನುಮತಿ ಪಡೆಯುವ ಪ್ರಕ್ರಿಯೆಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಕೆಪಿಎಸ್‌ಸಿ ಅಕ್ರಮ ನೇಮಕಾತಿಯಲ್ಲಿ ಭಾಗಿಯಾದ ಸದಸ್ಯರ ವಿರುದ್ಧ ಪ್ರಾಸಿಕ್ಯೂಶನ್‌ ನಡೆಸಲು ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ಇತ್ಯರ್ಥಗೊಳಿಸಿದ ನ್ಯಾಯಮೂರ್ತಿ ಹೆಚ್‌.ಜಿ ರಮೇಶ್‌ ಹಾಗೂ ಕೆ.ಎಸ್‌ ಮುದ್ಗಲ್‌ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಎ.ಎಸ್‌ ಪೊನ್ನಣ್ಣ , ಕೆಪಿಎಸ್‌ಸಿ ಅಕ್ರಮ ನೇಮಕಾತಿ ಹಗರಣದಲ್ಲಿ ಭಾಗಿಯಾದ ಸದಸ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಪ್ರಾಸಿಕ್ಯೂಶನ್‌ ಅನುಮತಿ ಕೋರಲು ಸಕ್ಷಮ ಪ್ರಾಧಿಕಾರವಾದ ರಾಷ್ಟ್ರಪತಿಗಳಿಂದ ಅನುಮತಿ ಪಡೆದುಕೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.

ಪಿಐಎಲ್‌ ಸಲ್ಲಿಸಿರುವ ಅರ್ಜಿದಾರರು ಕೆಲ ವೈಯಕ್ತಿಕ ಹಿತಾಸಕ್ತಿ  ಸಾಧಿಸುವ ನಿಟ್ಟಿನಲ್ಲಿ ಅರ್ಜಿಗಳನ್ನು ಹಾಕುತ್ತಾರೆ, ಆಕ್ಷೇಪಣೆ ಸಲ್ಲಿಸುತ್ತಾರೆ. ಇತ್ತೀಚೆಗೆ ಇದೇ ಅರ್ಜಿದಾರರು ಬೇರೊಂದು ಪ್ರಕರಣದಲ್ಲಿ ಸಲ್ಲಿಸಿರುವ ಪಿಐಎಲ್‌ನಲ್ಲಿ  ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್‌ 25.ಲಕ್ಷ  ರೂಪಾಯಿ ದಂಡ ವಿಧಿಸಿದೆ. ಹೀಗಾಗಿ ಈ ಅರ್ಜಿಗೂ ಅನಗತ್ಯ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಬಾರದು ಎಂದು ಕೋರಿದರು.

ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ಅಕ್ರಮದಲ್ಲಿ ಭಾಗಿಯಾದ ಕಳಂಕಿತ ಸದಸ್ಯರ ವಿರುದ್ಧ ರಾಷ್ಟ್ರಪತಿಗಳಿಂದ ಪ್ರಾಸಿಕ್ಯೂಶನ್‌ ಅನುಮತಿ ಪಡೆಯುವ ಪ್ರಕ್ರಿಯೆಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ರಾಜ್ಯಸರ್ಕಾರಕ್ಕೆ ನಿರ್ದೇಶಿಸಿ, ಪಿಐಎಲ್‌ ಇತ್ಯರ್ಥಗೊಳಿಸಿತು.

Advertisement

2011ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಅಂದಿನ ಅಧ್ಯಕ್ಷ ಗೋನಾಳ್‌ ಭೀಮಪ್ಪ, ಹಾಲಿ ಸದಸ್ಯೆ   ಮಂಗಳಾ  ಶ್ರೀಧರ್‌,ಸೇರಿದಂತೆ ಹಲವು ಸದಸ್ಯರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಸಂಬಂಧ ಗೋನಾಳ್‌ ಭೀಮಪ್ಪ  ಹಾಗೂ ಮಂಗಳಾ ಶ್ರೀಧರ್‌ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ವಿಚಾರಣೆಯೂ ನಡೆಯುತ್ತಿತ್ತು. ಆದರೆ ಇಬ್ಬರ ವಿರುದ್ಧವೂ ಪ್ರಾಸಿಕ್ಯೂಶನ್‌ ನಡೆಸಲು ಸಕ್ಷಮ ಪ್ರಾಧಿಕಾರವಾದ ರಾಷ್ಟ್ರಪತಿಗಳಿಂದ ಅನುಮತಿ ಪಡೆದುಕೊಳ್ಳದ  ಹಿನ್ನೆಲೆಯಲ್ಲಿ  ಇಬ್ಬರ ವಿರುದ್ಧದ ಪ್ರಕರಣಗಳನ್ನು ಹೈಕೋರ್ಟ್‌ ರದ್ದುಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next