Advertisement
ವಿಶೇಷವೆಂದರೆ, ಹಿಂದಿನ ಆವೃತ್ತಿಗಳಲ್ಲಿ ಗರಿಷ್ಠ ಮೊತ್ತ ಕಂಡಿದ್ದ ಮಾಯಾಂಕ್ ಅಗರ್ವಾಲ್, ಕೆ. ಗೌತಮ್ ಅವರನ್ನು ಈ ಬಾರಿ ಕೇಳುವವರೇ ಇರಲಿಲ್ಲ. ನಿಗದಿತ ಹರಾಜಿನ ವೇಳೆಯಲ್ಲಿ ಎರಡೆರಡು ಬಾರಿ ಹೆಸರು ಕರೆದರೂ ಈ ಇಬ್ಬರನ್ನು ಕೊಳ್ಳಲು ಹಿಂದೇಟು ಹಾಕಲಾಯಿತು. ಎರಡನೆ ಬಾರಿ ಕರೆದಾಗ ಹುಬ್ಬಳ್ಳಿ ಟೈಗರ್ಸ್ 25,000 ರೂ. ನೀಡಿ ಮಾಯಾಂಕ್ ಅವರನ್ನು ಖರೀದಿಸಿತು. ಗೌತಮ್ ಅವರನ್ನು ಹರಾಜು ಮುಗಿದ ಅನಂತರ 25,000 ರೂ. ನೀಡಿ ಮೈಸೂರು ವಾರಿಯರ್ಸ್ ಖರೀದಿಸಿತು. ಇದಕ್ಕೂ ಕಾರಣ, ಈ ಇಬ್ಬರು ಆಟಗಾರರು ಭಾರತ ಎ ತಂಡ ಅಥವಾ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿರುವುದು. ಒಂದು ವೇಳೆ ಈ ಇಬ್ಬರೂ ಆಯ್ಕೆಯಾದರೂ ತಮ್ಮ ಹಣ ನಷ್ಟವಾಗುವುದಿಲ್ಲ ಎಂಬ ಭರವಸೆಯೊಂದಿಗೆ ಕನಿಷ್ಠ ಬೆಲೆಗೆ ಫ್ರಾಂಚೈಸಿಗಳು ಖರೀದಿಸಿದವು.ಫ್ರಾಂಚೈಸಿಗಳು, ಕೆಪಿಎಲ್‌ನಲ್ಲಿ ಪೂರ್ಣಾವಧಿಯಲ್ಲಿ ಆಡುವ ಆಟಗಾರರಿಗೆ ಹೆಚ್ಚಿ ಆದ್ಯತೆ ನೀಡಿದ್ದು ಈ ಬಾರಿಯ ಹರಾಜಿನ ವಿಶೇಷ. ದೊಡ್ಡ ಮೊತ್ತಕ್ಕೆ ಖರೀದಿಸಿ, ಅವರು ಅರ್ಧದಲ್ಲೇ ಬಿಟ್ಟುಹೋಗುವುದರಿಂದ ನಷ್ಟ ಖಚಿತ ಎಂಬ ಲೆಕ್ಕಾಚಾರ ಇಲ್ಲಿ ಕೆಲಸ ಮಾಡಿತ್ತು!
ಅನುಭವ, ಸಾಮರ್ಥ್ಯ ಎಲ್ಲವನ್ನೂ ಆಧಾರವಾಗಿಟ್ಟುಕೊಂಡು ಎರಡು ಗುಂಪುಗಳಲ್ಲಿ ಆಟಗಾರರನ್ನು ವಿಂಗಡಿಸಿ ಹರಾಜು ನಡೆಸಲಾಗಿತ್ತು. ಅನುಭವ, ದಾಖಲೆ, ಫಾರ್ಮ್ನಲ್ಲಿ ಸ್ವಲ್ಪ ಹಿಂದಿದ್ದವರು ಪೂಲ್ ಬಿಯಲ್ಲಿ ಸ್ಥಾನ ಪಡೆದಿದ್ದರು. ಇಲ್ಲಿ 20 ಸಾವಿರ ರೂ. ಮೂಲ ಬೆಲೆ ಇರುತ್ತದೆ. ಈ ಗುಂಪಿನಲ್ಲಿ ಸ್ಥಾನ ಪಡೆದರೂ ಮೋಹನ್‌ರಾಮ್ ನಿದೀಶ್ ಮತ್ತು ಆರ್. ಜೊನಾಥನ್ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿದ್ದಾರೆ. ನಿದೀಶ್ 5.85 ಲಕ್ಷ ರೂ. ಪಡೆದರೆ, ಜೊನಾಥನ್ 5.45 ಲಕ್ಷ ರೂ.ಗೆ ಬಿಕರಿಯಾದರೂ ಬಿ ವಿಭಾಗದ ಆಟಗಾರರ ಪೈಕಿ ಇದು ದಾಖಲೆಯಾಗಿದೆ. ಶನಿವಾರದ ಹರಾಜಿನಲ್ಲಿ ಅಭಿಮನ್ಯು ಮಿಥುನ್ ಕೆಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ (8.30 ಲಕ್ಷ ರೂ.) ಮಾರಾಟವಾಗಿ ದಾಖಲೆ ನಿರ್ಮಿಸಿದ್ದರು.