Advertisement

ಸರ್ಕಾರಿ ಗೌರವಗಳೊಡನೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅಂತ್ಯಕ್ರಿಯೆ

06:14 PM Mar 12, 2023 | Team Udayavani |

ಚಾಮರಾಜನಗರ: ಶನಿವಾರ ಅಕಾಲಿಕವಾಗಿ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಅವರ ಸ್ವಗ್ರಾಮ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಭಾನುವಾರ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.

Advertisement

ಮಧ್ಯಾಹ್ನ 1.30ರ ವೇಳೆಗೆ ಅವರ ಜಮೀನಿನಲ್ಲಿರುವ ಅವರ ತಂದೆ ತಾಯಿ ಸಮಾಧಿಯ ಬಳಿ ಇರುವ ಜಾಗಕ್ಕೆ ಮೆರವಣಿಗೆಯಲ್ಲಿ ಪಾರ್ಥಿವ ಶರೀರವನ್ನು ತರಲಾಯಿತು. ನಂತರ ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ಮೊಳಗಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಜಿಲ್ಲಾಡಳಿತದ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಯಿತು.

ಬಳಿಕ ಧ್ರುವನಾರಾಯಣ ಅವರ ಹಿರಿಯ ಪುತ್ರ ದರ್ಶನ್, ಕಿರಿಯ ಪುತ್ರ ಧೀರೇನ್ ಸಂಬಂಧಿಕರು ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದರು. ನಂತರ ಪಾರ್ಥಿವ ಶರೀರವನ್ನು ಸಮಾಧಿಯೊಳಕ್ಕೆ ಇಳಿಸಿ ಮಣ್ಣು ಮಾಡಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹಮ್ಮದ್, ಸಂಸದ ಡಿ.ಕೆ.ಸುರೇಶ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಕೆ.ಹೆಚ್. ಮುನಿಯಪ್ಪ, ಹೆಚ್. ವಿಶ್ವನಾಥ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು, ಭಾನುವಾರ ಬೆಳಗಿನ ಜಾವದ ವೇಳೆಗೆ ಮೈಸೂರು, ನಂಜನಗೂಡು ಮಾರ್ಗ ಚಾಮರಾಜನಗರದಿಂದ ಹೆಗ್ಗವಾಡಿಗೆ ಆರ್.ಧ್ರುವನಾರಾಯಣ ಅವರ ಪಾರ್ಥಿವ ಶರೀರವನ್ನು ತಂದು ಗ್ರಾಮದಲ್ಲಿರುವ ಧ್ರುವನಾರಾಯಣ ಅವರ ಮನೆಯ ಬಳಿ ಪಾರ್ಥಿವ ಶರೀರವನ್ನು ಇಡಲಾಗಿತ್ತು. ರಾತ್ರಿಯಿಡೀ ಭಜನೆ ನಡೆಸಲಾಯಿತು.

Advertisement

ಹೆಗ್ಗವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಶನಿವಾರ ತಡರಾತ್ರಿಯಿಂದಲೂ ಧ್ರುವನಾರಾಯಣ ಅವರ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಮಹಿಳೆಯರು, ಮಕ್ಕಳು, ವಯೋವೃದ್ಧರು ಅಂತಿಮ ದರ್ಶನ ಪಡೆದರು.

ಭಾನುವಾರ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಧ್ರುವನಾರಾಯಣ ಅವರ ಅಂತಿಮ ದರ್ಶನ ಪಡೆದರು. ಮಧ್ಯಾಹ್ನದ ತನಕ ಅಂತಿಮ ದರ್ಶನಕ್ಕೆ ಬರುವವರ ಸಂಖ್ಯೆ ಏರಿಕೆಯಾಗುತ್ತಲೇ ಹೋಯಿತು. ತಂಡೋಪತಂಡವಾಗಿ ಆಗಮಿಸಿದ್ದ ಜನಸಾಗರ ಸರತಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದು ನೆಚ್ಚಿನ ನಾಯಕನಿಗೆ ಅಂತಿಮ ವಿದಾಯ ಹೇಳಿದರು.

ಧ್ರುವನಾರಾಯಣ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಧ್ರುವ ಬಾಸ್, ಧ್ರುವ ಬಾಸ್ ಎಂಬ ಘೋಷಣೆಗಳನ್ನು ಕೂಗಿದರು. ಧ್ರುವನಾರಾಯಣ ಅವರ ಪಾರ್ಥಿವ ಶರೀರ ಹಾಗೂ ಕುಟುಂಬಸ್ಥರನ್ನು ಕಂಡು ಭಾವುಕರಾದರು. ಪಾರ್ಥಿವ ಶರೀರದ ಬಳಿ ಆರ್.ಧ್ರುವನಾರಾಯಣ ಅವರ ಪತ್ನಿ ವೀಣಾ, ಪುತ್ರರಾದ ದರ್ಶನ್, ಧೀರನ್ ಸೇರಿದಂತೆ ಬಂಧುಗಳು ಇದ್ದರು. ಅನೇಕ ಕಾರ್ಯಕರ್ತರು ಧ್ರುವ ಅವರ ಪಾರ್ಥಿವ ಶರೀರ ನೋಡುತ್ತಿದ್ದಂತೆ ದುಃಖಿತರಾಗುತ್ತಿದ್ದರು.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕರು
ಆರ್.ಧ್ರುವನಾರಾಯಣ ಅವರ ಅಂತ್ಯಕ್ರಿಯೆಯಲ್ಲಿ ರಾಜ್ಯ ಕಾಂಗ್ರೆಸ್‌ನ ಹಲವು ನಾಯಕರು ಪಾಲ್ಗೊಂಡರು. ಭಾನುವಾರ ಬೆಳಗ್ಗೆಯೇ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮಕ್ಕೆ ಆಗಮಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಎಐಸಿಸಿ ಕಾರ್ಯದರ್ಶಿ ಕೇರಳ ಶಾಸಕ ರೋಜಿ ಎಂ. ಜಾನ್‌, ಸಲೀಂ ಅಹಮ್ಮದ್, ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಶಾಸಕರಾದ ದಿನೇಶ್ ಗುಂಡೂರಾವ್, ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಅನಿಲ್ ಚಿಕ್ಕಮಾದು, ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಂಸದ ಎಂ.ಶಿವಣ್ಣ, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜ್, ಮುಖಂಡ ಗಣೇಶ್ ಪ್ರಸಾದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಸೇರಿದಂತೆ ಇತರರು ಸ್ಥಳದಲ್ಲಿಯೇ ಇದ್ದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ
ಆರ್.ಧ್ರುವನಾರಾಯಣ ನಿಧನ ಸುದ್ದಿ ಕೇಳಿ ಶನಿವಾರ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಧ್ರುವನಾರಾಯಣ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಭಾನುವಾರ ಹೆಗ್ಗವಾಡಿ ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಗೂ ಮುನ್ನ ಆಗಮಿಸಿದ್ದ ಡಿ.ಕೆ.ಶಿವಕುಮಾರ್ ಧ್ರುವನಾರಾಯಣ ಅವರ ಪಾರ್ಥೀವ ಶರೀರದ ಮೇಲೆ ಕಾಂಗ್ರೆಸ್ ಧ್ವಜ ಇರಿಸಿ ದುಃಖಿತರಾದರು. ಪಾರ್ಥೀವ ಶರೀರದ ಮುಂದೆ ಕೆಲವೊತ್ತು ನಿಂತು ದುಃಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತರು.

Advertisement

Udayavani is now on Telegram. Click here to join our channel and stay updated with the latest news.

Next