ಬೆಂಗಳೂರು: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಸರಕಾರದ ವಿರುದ್ಧ ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ಗುರುವಾರ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆಯಿತು.
“ಬೆಲೆಯೇರಿಕೆ ಮುಕ್ತ ಭಾರತ ಅಭಿಯಾನ” ಹೆಸರಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಧ್ರುವನಾರಾಯಣ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ : ಪರಿಷತ್ ಸ್ಥಾನಕ್ಕೆ ಸಿ.ಎಂ ಇಬ್ರಾಹಿಂ ರಾಜೀನಾಮೆ: ಅಂಗೀಕರಿಸಿದ ಸಭಾಪತಿ
ಗ್ಯಾಸ್ ಸಿಲಿಂಡರ್ ಗಳನ್ನು ಸಾಲಾಗಿ ಇರಿಸಿ ಹೂವಿನ ಹಾರಗಳನ್ನು ಹಾಕಲಾಗಿತ್ತು. ಡಿ.ಕೆ.ಶಿವಕುಮಾರ್ ಅವರು ಕೈಯಲ್ಲಿ ಘಂಟಾಮಣಿ ಹಿಡಿದು , ತಲೆಯ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು ಗಮನ ಸೆಳೆದರು.
ಶಿವಕುಮಾರ್ ಅವರು ಬೆಳಗ್ಗೆ ತಮ್ಮ ಸದಾಶಿವನಗರದ ನಿವಾಸದ ಬಳಿ ಅಡುಗೆ ಅನಿಲದ ಸಿಲಿಂಡರ್ ಗೆ ಹೂಹಾರ ಹಾಕಿ, ಚಪ್ಪಾಳೆ ತಟ್ಟುವ ಮೂಲಕ ಪ್ರತಿಭಟನೆ ಮಾಡಿದರು.
ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್ , ‘ಇಂದು ಮಾರ್ಚ್ 31 ಆರ್ಥಿಕ ವರ್ಷ ಮುಕ್ತಾಯದ ದಿನ. ಹೀಗಾಗಿ ಇಂದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಕಳೆದ 11 ದಿನಗಳಲ್ಲಿ ಕೇಂದ್ರ ಸರ್ಕಾರ 10 ಬಾರಿ ಇಂಧನ ಬೆಲೆ ಏರಿಕೆ ಮಾಡಿದೆ. ದಿನನಿತ್ಯ ಜನರ ಜೇಬು ಪಿಕ್ ಪಾಕೇಟ್ ಆಗುತ್ತಿದೆ ಎಂದರು.
ಎಲ್ಲರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದ ಬಿಜೆಪಿ ಸರ್ಕಾರ, ಬೆಲೆ ಗಗನಕ್ಕೇರಿದೆ. ಆದಾಯ ಪಾತಳಕ್ಕೆ ಹೋಗಿದೆ. ಹೀಗಾಗಿ ನಾವು ಈ ಪ್ರತಿಭಟನೆ ಮಾಡುತ್ತಿದ್ದೇವೆ. ವಾಹನ ಸವಾರರಿಂದ ಹಿಡಿದು, ಗೃಹಿಣಿಯವರೆಗೂ ಎಲ್ಲರೂ ದಿನನಿತ್ಯ ನೋವು ಅನುಭಿಸುತ್ತಿದ್ದಾರೆ. ಈಗಾಗಲೇ ಪೆಟ್ರೋಲ್ ಬೆಲೆ 111 ರೂ. ಮುಟ್ಟಿದೆ. ಇದರ ವಿರುದ್ಧ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದ್ದು, ನಮ್ಮ ಮನೆಗಳ ಮುಂದೆ ಅಡುಗೆ ಅನಿಲ ಸಿಲಿಂಡರ್, ವಾಹನಗಳಿಗೆ ಹೂವಿನ ಹಾರ ಹಾಕಿ ಪೂಜೆ ಮಾಡಿದ್ದೇವೆ ಎಂದರು.
ರಾಜ್ಯದ ಜನ ದಡ್ಡರಲ್ಲ. ಅವರು ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಅವಕಾಶ ಸಿಕ್ಕಾಗ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ಮೂಲಕ ಅವರ ದಿನನಿತ್ಯದ ನೋವನ್ನು ಹೊರಹಾಕಲಿದ್ದಾರೆ ಎಂಬ ನಂಬಿಕೆ ಇದೆ. ನಾವು ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಪಂಚರಾಜ್ಯ ಚುನಾವಣೆ ನಡೆಯುವಾಗ ತಡೆಯಲಾಗಿದ್ದ ಬೆಲೆ ಏರಿಕೆ, ಫಲಿತಾಂಶ ಬಂದ ನಂತರ ಮತ್ತೆ ಆರಂಭವಾಗಿದೆಯೇ ಎಂಬ ಪ್ರಶ್ನೆಗೆ, ‘ಅವರು ತಡೆ ಹಿಡಿದಿದ್ದರೋ ಇಲ್ಲವೋ, ಜನರಿಗಂತೂ ಪ್ರಾಣ ಹಿಂಡುತ್ತಿದ್ದಾರೆ. ನಮ್ಮ ಹಳ್ಳಿಕಡೆ ಒಂದು ಮಾತಿದೆ. 100 ಚಪ್ಪಲಿ ಏಟು ತಿನ್ನಬಹುದು, ಆದರೆ ದುಡ್ಡಿನ ಏಟು ಮಾತ್ರ ತಡೆಯಲು ಆಗುವುದಿಲ್ಲ. ಅದೇ ರೀತಿ ಈ ಸರ್ಕಾರ ದಿನನಿತ್ಯ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ’ ಎಂದರು.
ಜನರ ಸಮಸ್ಯೆಗಳ ಬದಲು ಭಾವನಾತ್ಮಕ ವಿಚಾರ ಚುನಾವಣೆ ಅಜೆಂಡಾ ಆಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಅವರು ಸಮಾಜ ಒಡೆಯುವವರಾದರೆ, ನಾವು ಸಮಾಜವನ್ನು ಒಂದು ಮಾಡುತ್ತೇವೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ’ ಎಂದರು.