Advertisement

ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಂಗಡಿಯಲ್ಲಿ ಸಿಗುವ ವಸ್ತುವಲ್ಲ: ಡಿಕೆಶಿ

10:18 AM Jan 10, 2020 | sudhir |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನವಾಗಲಿ, ವಿರೋಧ ಪಕ್ಷದ ನಾಯಕ ಸ್ಥಾನ ಆಗಲಿ ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

Advertisement

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ. ವಿರೋಧ ಪಕ್ಷದ ನಾಯಕ ಸ್ಥಾನ ಸೇರಿದಂತೆ ಇತರೆ ಹುದ್ದೆಗಳಿಗೆ ಅದರದೇ ಆದ ಗೌರವವಿದೆ. ಆ ಸ್ಥಾನದಲ್ಲಿ ಯಾರು ಕೂರಬೇಕು? ಎಂದು ಲೆಕ್ಕಾಚಾರ ಮಾಡಿ ಆಯ್ಕೆ ಮಾಡಲಾಗುತ್ತದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾಧ್ಯಮಗಳಲ್ಲಿ ನನ್ನ ಹೆಸರು ಬರುತ್ತಿದೆ. ಇನ್ನು ಮುಂದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಪ್ರಶ್ನೆ ಕೇಳಬೇಡಿ. ಪರಮೇಶ್ವರ್‌ ಅವರ ಮನೆಯಲ್ಲಿ ನಡೆದ ಸಭೆ ಕುರಿತು ಅವರನ್ನೇ ಕೇಳಿ. ನನಗೆ ಏನೂ ಗೊತ್ತಿಲ್ಲ ಎಂದು ಸಿಡಿಮಿಡಿಗೊಂಡರು.

ನಾನು ಪ್ರತಿ ದಿನ ಯಾರನ್ನು ಭೇಟಿ ಮಾಡುತ್ತೇನೆ ಎನ್ನುವುದು ನನಗೆ ಬಿಟ್ಟದ್ದು. ಸಿದ್ದರಾಮಯ್ಯ ಮಾತ್ರ ಅಲ್ಲ, ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್‌ ಅವರನ್ನು ಭೇಟಿ ಮಾಡುತ್ತೇನೆ. ನಮ್ಮಲ್ಲಿರುವ ಎಲ್ಲ ನಾಯಕರೂ ಪಕ್ಷಕ್ಕೆ ನಿಷ್ಠಾವಂತರು ಎಂದರು.

ಇನ್ನು ಜಾರಿ ನಿರ್ದೇಶನಾಲಯದ ನೋಟಿಸ್‌ ವಿಚಾರವಾಗಿ ಮಾಧ್ಯಮಗಳು ಸುಳ್ಳು ವರದಿ ಪ್ರಕಟಿಸಿವೆ. ಈಗಾಗಲೇ ಎಲ್ಲ ಸಂಕಟ ಅನುಭವಿಸಿ ಆಗಿದೆ. ಇನ್ನು ನೂರು ಸಂಕಟ ಬಂದರೂ ಎದುರಿಸಲು ಸಿದ್ಧನಾಗಿದ್ದೇನೆ.

Advertisement

ಯಡಿಯೂರಪ್ಪನವರು ಸಿಬಿಐಗೆ ನೀಡಿದ್ದಾರೆ. ಇಲ್ಲಿ ಎಸಿಬಿ, ಲೋಕಾಯುಕ್ತ ಸಂಸ್ಥೆ ಇದ್ದರೂ ಅಲ್ಲಿಗೆ ಕಳುಹಿಸಿದ್ದಾರೆ. ಅವರ ಕರ್ತವ್ಯ ಅವರು ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಡಿನೋಟಿಫಿಕೇಷನ್‌ ಪ್ರಕರಣ ವಜಾ ಆಗಿದೆ. ಅದರಲ್ಲಿ ನನಗೆ ಯಾವ ಸಂಕಟ ಇದೆ ಎಂದು ಪ್ರಶ್ನಿಸಿದರು.

ನಾನು ಸರ್ಕಾರ ಬಿಟ್ಟ ಜಮೀನು ತೆಗೆದುಕೊಂಡಿದ್ದೇನೆ. ಬೇರೆಯವರು ಡಿನೋಟಿಫಿಕೇಷನ್‌ ಮಾಡಿದ್ದಾರೆ, ಈ ಬಗ್ಗೆ ಸಮಯ ಬಂದಾಗ ಎಲ್ಲವನ್ನು ಬಹಿರಂಗಗೊಳಿಸುತ್ತೇನೆ. ಅಧಿವೇಶನದಲ್ಲಿ ಎಲ್ಲವನ್ನೂ ಮಾತನಾಡುತ್ತೇನೆ ಎಂದರು.

ರೇಷ್ಮೆ ಬೆಳೆದು ಬಾಳುವೆ: ತಾವು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯ ನಾನು ಕನಕಪುರದಲ್ಲಿ ಕಲ್ಲು ಒಡೆದುಕೊಂಡು, ರೇಷ್ಮೆ, ಕಡಲೆಕಾಯಿ ಬೆಳೆದುಕೊಂಡು ಇರುತ್ತೇನೆ ಎಂದು ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next