Advertisement

ಕೆಪಿಸಿಸಿ ಅಧ್ಯಕ್ಷ ಗಾದಿಗೆ ಪರಂ ಫಿಕ್ಸ್, ಸಚಿವ ಸ್ಥಾನಕ್ಕೆ ರಾಜೀನಾಮೆ?

05:57 PM May 29, 2017 | Sharanya Alva |

ನವದೆಹಲಿ/ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಗಾದಿಗೆ ಹಾಲಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನೇ ಮುಂದುವರಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಇದರಿಂದಾಗಿ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಏರಬೇಕೆಂಬ ಡಿಕೆ ಶಿವಕುಮಾರ್ ಕನಸು ಭಗ್ನಗೊಂಡಂತಾಗಿದೆ.

Advertisement

ಕೆಪಿಸಿಸಿ ಸಾರಥ್ಯವನ್ನು ಯಾರಿಗೆ ವಹಿಸಬೇಕೆಂಬ ಬಗ್ಗೆ ಸೋಮವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ಸಿದ್ದರಾಮಯ್ಯ, ಪರಮೇಶ್ವರ್, ಕರ್ನಾಟಕ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರ ಜೊತೆ ಚರ್ಚೆ ನಡೆಸಿದ್ದರು.

ಆಯ್ಕೆ ಕುರಿತಂತೆ ಎರಡು ಬಾರಿ ರಾಹುಲ್ ಗಾಂಧಿ ಸಭೆ ನಡೆಸಿದ್ದಾರೆಂದು ಮೂಲಗಳು ತಿಳಿಸಿದ್ದು, ಅಂತಿಮವಾಗಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಸಲಹೆ ಮೇರೆಗೆ ಹಾಲಿ ಅಧ್ಯಕ್ಷ ಪರಮೇಶ್ವರ್ ಅವರನ್ನೇ ಮುಂದುವರಿಸುವಂತೆ ನಿರ್ಧರ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

ಪರಮೇಶ್ವರ್ ಅವರನ್ನು ಈ ಹಂತದಲ್ಲಿ ಬದಲಾಯಿಸಿದರೆ ರಾಜ್ಯದಲ್ಲಿರುವ ದಲಿತರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಹಾಗಾಗಿ ಪರಮೇಶ್ವರ್ ಅವರೇ ಮುಂದುವರಿಸಲು ಹೈಕಮಾಂಡ್ ನಿರ್ಧಾರಕ್ಕೆ ಬಂದಿದ್ದು, ಈ ಬಗ್ಗೆ ಇಂದು ಸಂಜೆ ಅಧಿಕೃತವಾಗಿ ಘೋಷಣೆ ಹೊರಬೀಳಲಿದೆ.

ಗೃಹ ಸಚಿವ ಸ್ಥಾನಕ್ಕೆ ಪರಮೇಶ್ವರ್ ರಾಜೀನಾಮೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಮೇಶ್ವರ್ ಅವರನ್ನೇ ಮುಂದುವರಿಸುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಿಸಿದ ನಂತರ ಮಂಗಳವಾರ ಗೃಹ ಸಚಿವ ಸ್ಥಾನಕ್ಕೆ ಪರಮೇಶ್ವರ್ ಅವರು ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

Advertisement

ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಗಾದಿಯ ಪ್ರಬಲ ಆಕಾಂಕ್ಷಿಯಾಗಿದ್ದ ಡಿಕೆ ಶಿವಕುಮಾರ್ ಅವರ ಮನವೊಲಿಕೆಗೆ ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್ ಚುನಾವಣಾ ಪ್ರಚಾರ ಹೊಣೆ ನೀಡುವ ಸಾಧ್ಯತೆ ಇದೆ. ಕೆಪಿಸಿಸಿಗೆ ನಾಲ್ಕು ಉಪಾಧ್ಯಕ್ಷರನ್ನು ನೇಮಕ ಮಾಡುವ ಚಿಂತನೆಯೂ ಕಾಂಗ್ರೆಸ್ ಹೈಕಮಾಂಡ್ ನದ್ದಾಗಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next