Advertisement

ಕೇಂದ್ರ ಸಚಿವರ ಮಾತನ್ನು ಮೌನದಿಂದ ಕೇಳಿಬಂದ ಸಿಎಂ ರಾಜೀನಾಮೆ ನೀಡಲಿ: ಡಿಕೆಶಿವಕುಮಾರ್ ಆಗ್ರಹ

03:15 PM Mar 06, 2022 | Team Udayavani |

ರಾಮನಗರ: ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಾಣ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಪರಸ್ಪರ ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಕಿಡಿ ಕಾರಿದ್ದಾರೆ.

Advertisement

ಕನಕಪುರಕ್ಕೆ ಭೇಟಿ ನೀಡಿದ್ದ ಉಭಯ ನಾಯಕರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೇಕೆದಾಟು ಯೋಜನೆ ಕುರಿತು ಕರ್ನಾಟಕ ಮತ್ತು ತಮಿಳುನಾಡಿನವರೇ ಮಾತನಾಡಿ ಪರಿಹರಿಸಿಕೊಳ್ಳಬೇಕೆಂದರೆ ಇವರು ಯಾಕೆ ಬೇಕು ಎಂದು ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕುಡಿಯುವ ನೀರಿಗೆ ಯಾವುದೇ ಎನ್‌ಓ‌ಸಿ ಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟು ಹೇಳಿದೆ. ಈಗ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪರಿಸರ ಇಲಾಖೆ ಮೂಲಕ ಅನುಮತಿ‌ ಕೊಡುವ ಕೆಲಸ ಮಾಡಬೇಕು ಎಂದರು.

ಕೇಂದ್ರ ಸಚಿವರು ಮುಖ್ಯಮಂತ್ರಿ ಸಮ್ಮುಖದಲ್ಲಿ ಮೇಕೆದಾಟು ಯೋಜನೆ ವಿಚಾರದಲ್ಲಿ ನಾವು ಏನು ಮಾಡಲು ಆಗುವುದಲ್ಲ ಎಂದಿದ್ದಾರೆ. ಈ ಮಾತನ್ನು ಸಿಎಂ ಮೌನದಿಂದ ಕೇಳಿಸಿಕೊಂಡು ಬಂದಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ‌ ಈ ವಿಚಾರದಲ್ಲಿ ಉತ್ತರ ಕೊಡಬೇಕು. ಇಲ್ಲವೇ ರಾಜೀನಾಮೆ ಕೊಡಬೇಕು. ಕೇಂದ್ರ ಮಂತ್ರಿ ನನ್ನ ಕೈಯಲ್ಲಿ ಏನು ಮಾಡಲು ಆಗುವುದಿಲ್ಲವೆಂದರೆ ಅರ್ಥವೇನು? ಸಿಎಂ ಸ್ಥಾನ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಬೊಮ್ಮಾಯಿ‌ ಸುಮ್ಮನೆ ಕೂರಬಾರದಿತ್ತು. ಮೇಕೆದಾಟು ಯೋಜನೆಗೆ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಎಂದರು.

Advertisement

ಕೇಂದ್ರ ಸರ್ಕಾರ ಕೂಡಲೇ ಪರಿಸರ ಇಲಾಖೆ ಕ್ಲಿಯರೆನ್ಸ್ ಕೊಡಿಸಬೇಕು. ಈ ವಿಷಯದಲ್ಲಿ ಕೇಂದ್ರ ಸಚಿವರು ದಿನಾಂಕ ನಿಗದಿ ಮಾಡಬೇಕು ಎಂದು ಡಿಕೆಶಿ ಒತ್ತಾಯಿಸಿದರು.

ಎರಡೂ ರಾಜ್ಯಗಳ ನಡುವೆ ಮಧ್ಯಸ್ಥಿಕೆ ಮಾಡುತ್ತೇವೆ ಎನ್ನುವುದು ಬೇರೆ ವಿಚಾರ. ಆದರೆ ನಮ್ಮಿಂದ ಆಗುವುದಿಲ್ಲ ಎಂದು ಹೇಳಿರುವುದು ನಮ್ಮ ರಾಜ್ಯಕ್ಕೆ ಇದು ದೊಡ್ಡ ಅವಮಾನ. ಕೇಂದ್ರ ಸರ್ಕಾರಕ್ಕೆ ಶಕ್ತಿ ಇಲ್ಲ ಎಂಬುದನ್ನ ತೋರಿಸುತ್ತಿದೆ. ಇದಕ್ಕೆ ಸಿಎಂ ಉತ್ತರ ನೀಡಬೇಕು, ಇಲ್ಲವೇ ಅಧಿಕಾರ ಬಿಟ್ಟು ಹೋಗಲಿ ಎಂದು ಡಿ.ಕೆ.ಶಿವಕುಮಾರ್ ಗುಡುಗಿದರು.

ಸಚಿವ ಶೇಖಾವತ್ ಅವರ ಹೇಳಿಕೆ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ  ಟ್ವೀಟ್  ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಸಿದ ಡಿ.ಕೆ.ಶಿ ಕುಮಾರಸ್ವಾಮಿ ದೊಡ್ಡವರು. ಅವ್ರ ಬಗ್ಗೆ ಉತ್ತರ ಕೊಡುವ ಶಕ್ತಿ ನನಗಿಲ್ಲ ಎಂದರು.

ಇದನ್ನೂ ಓದಿ:‘ಮೇಕೆದಾಟು’ ಹೊಣೆಗಾರಿಕೆಯಿಂದ ಕೇಂದ್ರ ಸರಕಾರ ನುಣುಚಿಕೊಳ್ಳುತ್ತಿದೆ: ಕುಮಾರಸ್ವಾಮಿ ಆರೋಪ

ಆಶ್ವರ್ಯ ತಂದಿದೆ: ಡಿ.ಕೆ.ಸುರೇಶ್: ಮೇಕೆದಾಟು ಯೋಜನೆ ವಿಚಾರದಲ್ಲಿ ಕೇಂದ್ರ ಸಚಿವ ಶೇಖಾವತ್ ಅವರ‌ ಹೇಳಿಕೆ ತಮಗೆ ಆಶ್ಚರ್ಯ ತಂದಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ಚೆಂಡು ಅವರ ಬಳಿ ಇದೆ. ಅಧಿಕಾರವೂ ಅವರ ಬಳಿಯೇ ಇದೆ. ರಾಜ್ಯಗಳ ನಡುವೆ ಚರ್ಚೆ ಮಾಡುವುದಾಗಿದ್ದರೆ ನಾವು ಯಾಕೆ ಅವರ ಬಳಿ ಹೋಗಬೇಕಿತ್ತು? ಎಂದು ಪ್ರಶ್ನಿಸಿದರು.

ಕುಡಿಯುವ ನೀರಿಗೆ ಅನುಮೋದನೆ ಕೊಡಬೇಕಾಗಿದ್ದು ಕೇಂದ್ರ ಸರ್ಕಾರ. ರಾಜ್ಯ ಜನರ ದಿಕ್ಕು ತಪ್ಪಿಸುವ ಕೆಲಸವನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡುತ್ತಿವೆ. ಒಂದೆಡೆ ಇನ್ನೊಂದು ವರ್ಷದಲ್ಲಿ ಚಾಲನೆ ಕೊಡುತ್ತೇವೆ ಎನ್ನುತ್ತಾರೆ. ಮತ್ತೊಂದೆಡೆ ಎರಡೂ ರಾಜ್ಯಗಳು ಮಾತನಾಡಿಕೊಳ್ಳಿ ಎನ್ನುತ್ತಾರೆ. ಈ ದ್ವಂದ್ವ ನೀತಿ ಸರಿಯಲ್ಲ. ಕೇಂದ್ರ ಸರ್ಕಾರದ ನೀರಾವರಿ ಸಚಿವ ತಕ್ಷಣ ರಾಜ್ಯ ಸಭೆ ಕರೆದು ಕಾವೇರಿ ನೀರಾವರಿ ಸಮಿತಿ ಕರೆದು ಅನುಮೋದನೆ ಕೊಡಬೇಕು ಎಂದರು.

ತಮಿಳು ನಾಡಿನವರ ಬಳಿ ನಾವು ಮಾತನಾಡುವ ಅವಶ್ಯಕತೆ ಇಲ್ಲ. ತಮಿಳುನಾಡಿನ ಬಳಿ ಕೇಂದ್ರದವರು ಮಾತನಾಡಲಿ. ಕರ್ನಾಟಕಕ್ಕೂ ಅದಕ್ಕೂ ಸಂಬಂಧವಿಲ್ಲ. ತಮಿಳುನಾಡಿನ ನೀರಿನ ಪಾಲು ಕೊಡುವುದಾಗಿ ಸುಪ್ರೀಂಕೋರ್ಟ್ ನಲ್ಲಿ ನಾವು ಒಪ್ಪಿದ್ದೇವೆ. ಅನಾವಶ್ಯಕ ಗೊಂದಲವನ್ನು ರಾಜ್ಯದ ಜನರ ಮುಂದೆ ಇಡುವುದು ಬೇಡ ಎಂದು ಡಿ ಕೆ ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next