ಉಡುಪಿ: ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಒಬ್ಬ ಅಪಕ್ವ ರಾಜಕಾರಣಿಯಾಗಿದ್ದು ಅವರಿಗೆ ಇಂದಿರಾಗಾಂಧಿಯವರ ಹೆಸರು ಹೇಳುವ ಯೋಗ್ಯತೆ ಕೂಡ ಇಲ್ಲ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಆಡಳಿತ ಅವಧಿಯಲ್ಲಿ ನಡೆದ ಜನಪಯೋಗಿ ಕೆಲಸಗಳಾದ ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ದತಿ, ಜೀತ ಮುಕ್ತ ಕಾನೂನುಗಳನ್ನು ಮರೆತಿರುವ ಸುರೇಶ್ ನಾಯಕ್ ಅವರು ತುರ್ತು ಪರಿಸ್ಥಿತಿಯ ನೆಪವೊಡ್ಡಿ ಬಿಜೆಪಿ ನಾಯಕರು ಹಾಗೂ ಅವರ ಪಟಾಲಂ ಮೈಲೆಜ್ ಪಡೆದುಕೊಳ್ಳಲು ಒದ್ದಾಡುತ್ತಿರುವುದು ನೋಡಿದರೆ ನಿಜಕ್ಕೂ ಬಿಜೆಪಿಗರ ಸ್ಥಿತಿಯ ಬಗ್ಗೆ ಕರುಣೆ ಉಕ್ಕಿ ಬರುತ್ತದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕಾರಿಗಳಿಂದ ನಡೆದ ಕೆಲವು ಕೆಟ್ಟ ಸಂಗತಿಗಳನ್ನು ಮುಂದಿಟ್ಟುಕೊಂಡು ಅದನ್ನೇ ಬೃಹತ್ ಆಕಾರದಲ್ಲಿ ಚಿತ್ರಿಸಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೂಡ ಭಾರತ ದೇಶದಲ್ಲಿ ಆರ್ಥಿಕ ಪ್ರಗತಿ ಮತ್ತು ಭೌತಿಕ ಪ್ರಗತಿಯ ಬಗ್ಗೆ ಬಿಜೆಪಿಗರು ಕಣ್ಣಾಡಿಸಲಿ. ಮಹಿಳೆಯಾಗಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಕೆಲವೊಂದು ಉದ್ದೇಶಗಳಿಗಾಗಿ ಹೇರಿದ್ದರು ಸರಿ ಆದರೆ ಇಂದು ದೇಶದಲ್ಲಿ ಇರುವ ಅಘೋಷಿತ ತುರ್ತು ಪರಿಸ್ಥಿತಿ ಇವರ ಗಮನಕ್ಕೆ ಯಾಕೆ ಬಂದಿಲ್ಲ. ಗೋದ್ರಾ ನರಮೇಧದ ಸಂತ್ರಸ್ತರ ಪರವಾಗಿ ಇದ್ದರು ಎಂಬ ಒಂದೇ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿರುವುದು ಮೋದಿ ಸರಕಾರದ ಅಘೋಷಿತ ತುರ್ತು ಪರಿಸ್ಥಿತಿಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದರು.
ಇದನ್ನೂ ಓದಿ: ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು, ಅಂಗಾಂಗಗಳು ಛಿದ್ರ
ಬಿಜೆಪಿ ನಾಯಕರಿಗೆ ಇಂದಿರಾ ಗಾಂಧಿ, ನೆಹರೂ ಕಾಂಗ್ರೆಸ್ ಬಗ್ಗೆ ಮಾತನಾಡದೇ ಹೋದರೆ ಬಿಜೆಪಿಗರಿಗೆ ಯಾವುದೇ ಅಸ್ತಿತ್ವ ಇಲ್ಲ ಪ್ರತಿಯೊಂದಕ್ಕೂ ಇಂದಿರಾ ಗಾಂಧಿ, ನೆಹರೂ ಎನ್ನುವುದನ್ನು ಬಿಟ್ಟು ಇವರ ನಾಯಕರುಗಳ ಸಾಧನೆ ಏನಾದರೂ ಇದ್ದರೆ ಹೇಳುವುದು ಉತ್ತಮ. ಇವರ ಬಟ್ಟಲಲ್ಲಿ ಆನೆ ಬಿದ್ದಿರುವಾಗ ಬೇರೆಯವರ ಬಟ್ಟಲಲ್ಲಿ ನೊಣ ಇದೆ ಇಂದು ಬೊಟ್ಟು ಮಾಡಿ ತೋರಿಸಿ ಇವರೇ ಗೇಲಿಗೊಳಗಾಗುತ್ತಿರುವುದು ನಿಜಕ್ಕೂ ಇವರ ಪಕ್ಷದ ದಯನೀಯ ಸ್ಥಿತಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.