Advertisement

ಟಿಕೆಟ್‌ ಆಕಾಂಕ್ಷಿಗಳಿಗೆ ಕೆಪಿಸಿಸಿ ಚುನಾವಣಾ ಟಾಸ್ಕ್

10:14 PM Nov 27, 2022 | Team Udayavani |

ಬೆಂಗಳೂರು: “ನಿಮ್ಮ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿ. ತಪ್ಪುಗಳು ಅಥವಾ ಅನುಮಾನಗಳು ಕಂಡು ಬಂದಲ್ಲಿ ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ದೂರ ಕೊಡಬೇಕು ಹಾಗೂ ಅದನ್ನು ರಾಜ್ಯ ಘಟಕದ ಗಮನಕ್ಕೆ ತರಬೇಕು.’

Advertisement

ಇದು ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಿಗೆ ಕೆಪಿಸಿಸಿ ನೀಡಿರುವ “ಚುನಾವಣಾ ಟಾಸ್ಕ್’ ಆಗಿದೆ. ಇದರ ಜೊತೆಗೆ ಆಕಾಂಕ್ಷಿಗಳಿಗೆ ಒಗ್ಗಟ್ಟಿನ ಮಂತ್ರವನ್ನೂ ಹೇಳಿ ಕೊಡಲಾಗಿದೆ.

ಟಿಕೆಟ್‌ ಆಕಾಂಕ್ಷಿಗಳ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಹಾಗೂ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಭಾನುವಾರ ನಡೆದ “ಜೂಮ್‌ ಆ್ಯಪ್‌’ ಆನ್‌ಲೈನ್‌ ಸಭೆಯಲ್ಲಿ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಲ್ಲಿ ನಡೆದ ಅಕ್ರಮ ಸೇರಿದಂತೆ ಇತರ ಸಂಘಟನಾ ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿ ಆಕಾಂಕ್ಷಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
ಮುಖ್ಯವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿಲುಮೆ ಎಂಬ ಖಾಸಗಿ ಸಂಸ್ಥೆ ಮತದಾರರ ಮಾಹಿತಿಯನ್ನು ಕಲೆ ಹಾಕಿರುವ ಹಗರಣ ಬೆಳಕಿಗೆ ಬಂದಿದೆ.

ಇದೇ ರೀತಿಯಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ನಡೆದಿರುವ ಬಗ್ಗೆ ಅನುಮಾನಗಳು ಕೇಳಿ ಬರುತ್ತಿವೆ. ಆದ್ದರಿಂದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು ಮೊದಲು ಕ್ಷೇತ್ರದ ಮತದಾರರ ಪಟ್ಟಿ ಬಗ್ಗೆ ಎಚ್ಚರಿಕೆ ವಹಿಸಿ. ಪಟ್ಟಿಗೆ ಸೇರಿಸಿದ, ತೆಗೆದು ಹಾಕಲಾದ ಹೆಸರುಗಳ ಬಗ್ಗೆ ಪ್ರತಿ ಬೂತ್‌ ಮಟ್ಟದಲ್ಲೂ ಪರಿಶೀಲಿಸಿ, ನಮೂನೆ 7 ಇಲ್ಲದೆ ಹೆಸರು ತೆಗೆದು ಹಾಕಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಪಡೆಯಬೇಕು. ತಪ್ಪುಗಳು ಅಥವಾ ಅನುಮಾನಗಳು ಕಂಡು ಬಂದಲ್ಲಿ ತಕ್ಷಣ ಜಿಲ್ಲಾಧಿಕಾರಿಗಳಿಗೆ ದೂರು ಕೊಡಬೇಕು. ಈ ವಿಚಾರವನ್ನು ಪಕ್ಷದ ರಾಜ್ಯ ಘಟಕದ ಗಮನಕ್ಕೆ ತರಬೇಕು ಎಂದು ಆಕಾಂಕ್ಷಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಒಗ್ಗಟ್ಟು ಪಾಲಿಸಿ: ಪಕ್ಷದ ಸಂಘಟನಾತ್ಮಕ ವ್ಯವಸ್ಥೆಯಡಿ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ಟಿಕೆಟ್‌ಗೆ ಅರ್ಜಿ ಹಾಕಿದ್ದೀರಿ. ಪಕ್ಷ ಎಲ್ಲವನ್ನೂ ಪರಿಗಣಿಸಿ-ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ. ಯಾವುದೇ ಇರಲಿ ಹೈಕಮಾಂಡ್‌ ತೀರ್ಮಾನ ಅಂತಿಮ. ಹಾಗಾಗಿ, ಟಿಕೆಟ್‌ ಯಾರಿಗೆ ಸಿಕ್ಕರೂ ಪಕ್ಷದ ದೃಷ್ಟಿಯಿಂದ ಒಗ್ಗಟ್ಟನ್ನು ಪಾಲಿಸಬೇಕು. ಟಿಕೆಟ್‌ ಸಿಕ್ಕವರ ಪರವಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಅನಗತ್ಯ ಗೊಂದಲಗಳನ್ನು ನಿರ್ಮಾಣ ಮಾಡಿ ಪಕ್ಷಕ್ಕೆ ಮುಜುಗರ ತರುವಂತಹ ಕೆಲಸ ಯಾರೂ ಮಾಡಬಾರದು ಎಂದೂ ಸಭೆಯಲ್ಲಿ ತಾಕೀತು ಮಾಡಲಾಗಿದೆ ಎಂದು ಹೇಳಲಾಗಿದೆ.

Advertisement

“ಜೂಮ್‌ ಆ್ಯಪ್‌’ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್‌, ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ. ಸುರೇಶ್‌, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್‌, ಮಾಜಿ ಸಚಿವರಾದ ಆರ್‌.ವಿ. ದೇಶಪಾಂಡೆ, ಕೆ.ಜೆ ಜಾರ್ಜ್‌ ಸೇರಿದಂತೆ ಹಲವು ಶಾಸಕರು, ಮಾಜಿ ಶಾಸಕರು ಹಾಗೂ ಟಿಕೆಟ್‌ ಆಕಾಂಕ್ಷಿಗಳು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next