ಕೋವಿಡ್-19 ವೈರಸ್ ಇಂದು ಜಾಗತಿಕವಾಗಿ ಜನರನ್ನು ತಲ್ಲಣಗೊಳಿಸಿದೆ. ಸಾವಿರಾರು ಜನರು ಈ ಮಾರಕ ವೈರಸ್ ಗೆ ಬಲಿಯಾಗಿದ್ದು, ಹಲವು ದೇಶಗಳು ತುರ್ತು ಸುರಕ್ಷಾ ವಿಧಾನಗಳನ್ನು ಅನುಸರಿಸುತ್ತಿದೆ. ತಂತ್ರಜ್ಞಾನ ದೈತ್ಯ ಕಂಪೆನಿಗಳಾದ ಫೇಸ್ ಬುಕ್, ಆ್ಯಪಲ್ ಮುಂತಾದವೂ ಕೂಡ ಜನರ ನೆರವಿಗೆ ಧಾವಿಸಿದ್ದು, ಆರೋಗ್ಯ ಸಿಬ್ಬಂದಿಗಳಿಗೆ, ವೈದ್ಯಾಧಿಕಾರಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಮುಂತಾದವನ್ನು ಉಚಿತವಾಗಿ ನೀಡುತ್ತಿದೆ.
ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್ ಬುಕ್ ತುರ್ತಾಗಿ 7,20,000 ಮಾಸ್ಕ್ ಗಳನ್ನು ಆರೋಗ್ಯ ಸಿಬ್ಬಂದಿಗಳಿಗೆ ನೀಡಿದೆ. ಇಂತಹ ಸಂದರ್ಭದಲ್ಲಿ ನಾವು ಕೂಡ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವುದು ಆದ್ಯ ಕರ್ತವ್ಯ. ಮಾತ್ರವಲ್ಲದೆ ದೇಣಿಗೆ ನೀಡುವ ಸಲುವಾಗಿ ಲಕ್ಷಾಂತರ ರೂ. ಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ತಿಳಿಸಿದ್ದಾರೆ. ಫೇಸ್ ಬುಕ್ ನಲ್ಲಿ ಕೋವಿಡ್-19 ಕುರಿತ ಜಾಗೃತಿ ಜಾಹೀರಾತುಗಳು ಪ್ರತಿನಿತ್ಯ ಬರುತ್ತಿದ್ದು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಮಾತ್ರವಲ್ಲದೆ ಈ ಸಂದರ್ಭದಲ್ಲಿ ಕೆಲವೊಂದು ವಾಣಿಜ್ಯಾತ್ಮಕ ಉದ್ದೇಶ ಹೊಂದಿದ ಜಾಹೀರಾತುಗಳನ್ನು ರದ್ದು ಮಾಡಲಾಗಿದೆ.
ಆ್ಯಪಲ್ ಸಿಇಓ ಟ್ವಿಟ್ಟರ್ ನಲ್ಲಿ ಕೋವಿಡ್-19 ಕುರಿತು ಮಾಹಿತಿ ಹಂಚಿಕೊಂಡಿದ್ದು, ಸಂಸ್ಥೆಯ ವತಿಯಿಂದ ಉಚಿತವಾಗಿ ಮಾಸ್ಕ್ ಗಳನ್ನು ಒದಗಿಸಲಾಗಿದೆ. ನಮ್ಮ ತಂಡ ತುರ್ತು ಅಗತ್ಯ ವಸ್ತುಗಳನ್ನು ಕೂಡ ಆರೋಗ್ಯ ಸಹಾಯಕರಿಗೆ ಒದಗಿಸುತ್ತಿದೆ. ಅಮೇರಿಕಾ ಮತ್ತು ಯುರೋಪ್ ರಾಷ್ಟ್ರಗಳಿಗೆ ನೆರವಿನ ಹಸ್ತ ಚಾಚಲಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಪ್ರತಿಯೊಬ್ಬರು ಕೃತಜ್ಞತೆ ಸಲ್ಲಿಸಲೇ ಬೇಕು ಎಂದಿದ್ದಾರೆ.
ಅಮೇಜಾನ್ ಸಿಇಓ, ಜೆಫ್ ಬಿಜೋಸ್ ಕೂಡ ಕೋವೀಡ್-19 ವಿರುದ್ಧ ಹೋರಾಡುತ್ತಿರುವವರ ಸಹಾಯಕ್ಕೆ ಹಸ್ತ ಚಾಚಿದ್ದು, ಮಿಲಿಯನ್ ಗಟ್ಟಲೇ ಮಾಸ್ಕ್ ಗಳನ್ನು ತನ್ನ ಕೆಲಸಗಾರರಿಗೆ, ವೈದ್ಯಾಧಿಕಾರಿಗಳಿಗೆ ಒದಗಿಸಿದ್ದಾರೆ. ಜಗತ್ತಿನಾದ್ಯಂತ ಮಾಸ್ಕ್ ಪೂರೈಕೆ ಕೂಡ ಕುಂಠಿತವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಅವರ ನೆರವಿಗೆ ಧಾವಿಸಬೇಕಾದದ್ದು ನಮ್ಮ ಮೊದಲ ಕರ್ತವ್ಯ ಅಂದಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಅಲಿ ಬಾಬಾ ಸಂಸ್ಥಾಪಕ ಜಾಕ್ ಮಾ ಅಮೆರಿಕಾಕ್ಕೆ 1 ಮಿಲಿಯನ್ ಫೇಸ್ ಮಾಸ್ಕ್ ಮತ್ತು 5,00,000 ಟೆಸ್ಟ್ ಕಿಟ್ ಗಳನ್ನು ಒದಗಿಸಿದ್ದಾರೆ. ಮಾತ್ರವಲ್ಲದೆ 20,000 ಟೆಸ್ಟಿಂಗ್ ಕಿಟ್ ಗಳನ್ನು ಆಫ್ರಿಕನ್ ದೇಶಗಳಿಗೆ ಒದಗಿಸಿದ್ದಾರೆ. ಜೊತೆಗೆ 1,00,000 ಫೇಸ್ ಮಾಸ್ಕ್ ಮತ್ತು 1000 ಮೆಡಿಕಲ್ ಸೂಟ್ ಗಳನ್ನು ಒದಗಿಸಿದ್ದಾರೆ.
ಭಾರತದಲ್ಲಿ ಓಲಾ ಸಂಸ್ಥೆ ಈಗಾಗಲೇ ತನ್ನ ಕ್ಯಾಬ್ ಚಾಲಕರಿಗೆ, ಸಹ ಸಂಸ್ಥೆಗಳಿಗೆ, ಮತ್ತು ಅವರ ಕುಟುಂಬಸ್ಥರಿಗೆ ಕೋವಿಡ್-19 ಪಾಸಿಟಿವ್ ಪ್ರಕರಣ ಕಂಡುಬಂದರೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ. ಯಾವುದೇ ಚಾಲಕರು ಮತ್ತು ಅವರ ಕುಟುಂಬಸ್ಥರಿಗೆ ಸೋಂಕು ತಗುಲಿರುವುದು ದೃಢಪಟ್ಟರೆ ಆರ್ಥಿಕ ನೆರವು ನೀಡುತ್ತೇವೆ. ಇದು ಓಲಾ ಬೈಕ್, ಓಲಾ ರೆಂಟಲ್ಸ್, ಎಲ್ಲದಕ್ಕೂ ಸಂಬಂಧಪಡುತ್ತದೆ. ಮಾತ್ರವಲ್ಲದೆ MFine ಎಂಬ ಆ್ಯಪ್ ನೊಂದಿಗೆ ಒಡಬಂಡಿಕೆ ಮಾಡಿಕೊಂಡಿದ್ದು, ಸೂಕ್ತ ವೈದ್ಯಕೀಯ ಸಲಹೆ ನೀಡಲು ಇದು ನೆರವಾಗುತ್ತದೆ ಎಂದು ತಿಳಿಸಿದೆ.
ಹಲವಾರು ಖಾಸಗಿ ಮತ್ತು ಸರ್ಕಾರಿ ನೌಕರರು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ BSNL ಕೂಡ work@home ಎಂಬ ಬ್ರಾಡ್ ಬ್ಯಾಂಡ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಈ ಪ್ಲ್ಯಾನ್ BSNL ಲ್ಯಾಂಡ್ ಲೈನ್ ಬಳಕೆದಾರರಿಗೆ ಉಚಿತವಾಗಿ ಸಿಗುತ್ತದೆ. ಅಂದರೆ ಒಂದು ದಿನಲ್ಲಿ 5ಜಿಬಿ ಡಾಟಾ ವನ್ನು 10 ಎಂಬಿಪಿಎಸ್ ಸ್ಪೀಡ್ ನಲ್ಲಿ ನೀಡಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ಕೂಡ ವಾಟ್ಸಪ್ ಹೆಲ್ತ್ ಅಲರ್ಟ್ ಸರ್ವಿಸ್ ಅನ್ನು ಜಾರಿಗೆ ತಂದಿದ್ದು, ಕೋವಿಡ್-19 ನ ನೈಜ ಮಾಹಿತಿಗಳನ್ನು ಜನರಿಗೆ ನೀಡುತ್ತಿದೆ. ಇದಕ್ಕಾಗಿ +41798931892 ನಂಬರ್ ಅನ್ನು ನೀಡಿದೆ. ಈ ಸೇವೆ ದಿನದ 24 ಗಂಟೆಯೂ ಲಭ್ಯವಿರುತ್ತದೆ.
ಗೂಗಲ್ ಕೂಡ ಕೋವಿಡ್-19 ವಿರುದ್ಧ ಸಮರ ಸಾರಿದ್ದು ಜನರು ಅನುಸರಿಸಬೇಕಾದ ಸುರಕ್ಷಾ ವಿಧಾನಗಳನ್ನು ಸಕಾಲಿಕವಾಗಿ ಬಿಡುಗಡೆ ಮಾಡುತ್ತಿದೆ. ಮಾತ್ರವಲ್ಲದೆ ಗೂಗಲ್ ಡೂಡಲ್ ಮತ್ತು ವಿಡಿಯೋ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಯೂಟ್ಯೂಬ್ ಕೂಡ ಇದರೊಂದಿಗೆ ಕೈ ಜೋಡಿಸಿದೆ.
-ಮಿಥುನ್ ಮೊಗೇರ