ಬದಿಯಡ್ಕ: ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಕೊಟ್ಟಿಯೂರು ಶಿವ ಕ್ಷೇತ್ರದಲ್ಲಿ ವೈಶಾಖ ಮಹೋತ್ಸವ ಸಂಪನ್ನ ಗೊಂಡಿತು. ಕೇರಳದ ಐತಿಹಾಸಿಕ ಪ್ರಸಿದ್ಧವಾದ ಕ್ಷೇತ್ರಗಳಲ್ಲೊಂದಾಗಿದೆ ಕೊಟ್ಟಿಯೂರು ಕ್ಷೇತ್ರ. ಶಕ್ತಿ ಅಥವಾ ಸತಿ ದೇವಿಯ ಅತ್ಯಂತ ಪವಿತ್ರವಾದ ಈ ಕ್ಷೇತ್ರಕ್ಕೆ ಪೌರಣಿಕ ಹಿನ್ನೆಲೆಯಿದ್ದು ದಕ್ಷ ಯಜ್ಞ ನಡೆದ ಪುಣ್ಯಭೂಮಿ ಇದಾಗಿದೆ ಎಂದು ಉಲ್ಲೇಖವಿದೆ. ಬಿದಿರು ಮತ್ತು ತೆಂಗಿನ ಗರಿ ಮತ್ತು ಗರಿಕೆ ಹುಲ್ಲಿನಿಂದ ತಯಾರಿಸಿದ ಸಣ್ಣ ಸಣ್ಣ ಯಾಗಶಾಲೆಗಳು ಇಲ್ಲಿನ ಪ್ರಧಾನ ಆಕರ್ಷಣೆ.
ಒಂದು ತಿಂಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಳ್ಳುವ ಆಚರಣೆಗಳು ಪ್ರತಿ ವರ್ಷ ಮೇ-ಜೂನ್ (ವೈಶಾಖ) ತಿಂಗಳಲ್ಲಿ ಪ್ರಾರಂಭವಾಗಿ ವೈಶಾಖಮಾಸ ಉತ್ಸವ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ರಾಜ್ಯ- ಹೊರ ರಾಜ್ಯಗಳಿಂದಾಗಿ ಸಾವಿರಾರು ಭಕ್ತರು ಈ ಉತ್ಸವದಲ್ಲಿ ಪಾಲ್ಗೊಂಡು ಶಿವನ ಅನುಗ್ರಹಕ್ಕೆ ಪಾತ್ರ ರಾಗುತ್ತಾರೆ. ನೈಯ್ನಾಟದೊಂದಿಗೆ ಇಲ್ಲಿ ಉತ್ಸವವು ಪ್ರಾರಂಭವಾಗುತ್ತದೆ. 28 ದಿವಸಗಳ ಅನಂತರ ತಿರು ಕಲಶಾಟ್ಟೋಟದೊಂದಿಗೆ ಉತ್ಸವವು ಸಮಾಪ್ತಿಯಾಗುತ್ತದೆ.
ವರ್ಷಂಪ್ರತಿ ನಡೆಯುವಂತೆ ಹಸ್ತ ನಕ್ಷತ್ರದಂದು ಬೆಳಗ್ಗೆ ನಿತ್ಯ ಪೂಜೆಗಳ ಬಳಿಕ ಚತುಷ್ಪಥ ನಿವೇದಿಸಿ, ಅಪರಾಹ್ನ ಶಿವೇಲಿ ನಂತರ ವಾಳಾಟ್ಟಂ ಜರಗಿತು. ತದನಂತರ ಕುಡಿಪತಿಗಳಿಂದ ತಿರುವಂಜಿಯ ಕಲ್ಲಿಗೆ ತೆಂಗಿನ ಕಾಯಿ ಒಡೆಯಲಾಯಿತು. ನಿತ್ಯ ಪೂಜೆಗಳ ಬಳಿಕ ರಾತ್ರಿ ತೊಡಗಿದ ಕಲಶ ಪೂಜೆಗಳು ಮರುದಿನ ಮುಂಜಾವಿನ ತನಕ ಜರಗಿತು.
ಅದೇ ದಿನ ಬೆಳಗ್ಗೆ ತೃಕ್ಕಲಶಾಟ್ ಮತ್ತು ಬ್ರಾಹ್ಮಣರಿಂದ ನಾಮಜಪದ ನಂತರ ಕಲಶಾಭಿಷೇಕ ಜರಗಿತು. ಕಲಾಶಾಭಿಷೇಕದ ನಂತರ ಪ್ರಸಾದವನ್ನು ಭಕ್ತರಿಗೆ ವಿತರಣೆ ಮಾಡಲಾಯಿತು.
ಕಲಶಾಭಿಷೇಕಕ್ಕೆ ಮುನ್ನವೇ ಬಿದಿರು ಹಾಗೂ ತಾಳಿ ಓಲೆಗಳಲ್ಲಿ ನಿರ್ಮಿಸಿದ ಗುಡಿಗಳನ್ನು ತೆಗೆದು ತಿರುವಂಜಿರದಲ್ಲಿ ಉಪೇಕ್ಷಿಸಿದರು. ತೃಕ್ಕಲಶಾಟ್ ಪೂರ್ತಿಯಾಗುವುದರೊಂದಿಗೆ ಈ ವರ್ಷದ ವೈಶಾಖ ಮಾಸೋತ್ಸವವು ಸಮಾಪ್ತಿಗೊಂಡಿತು.