ಕುಣಿಗಲ್: 15 ವರ್ಷದ ಬಳಿಕ ಹೇಮಾವತಿ ನೀರು ಹರಿದು ಕೆರೆ ತುಂಬಿ ಕೊಡಿ ಬಿದ್ದಿರುವ ಸಂತೋಷವನ್ನು ತಾಲೂಕಿನ ಕೊತ್ತಗೆರೆ ಗ್ರಾಮಸ್ಥರು ಶಾಸಕ ಡಾ.ಎಚ್ .ಡಿ.ರಂಗನಾಥ್ ಅವರೊಂದಿಗೆ ಕೆರೆಗೆ ಗಂಗಾಪೂಜೆ ಮಾಡಿ, ಬಾಗಿನ ಅರ್ಪಿಸಿ ಸಂಭ್ರಮಿಸಿದರು.
ಕೊತ್ತಗೆರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಂಭ್ರಮದ ದಿನವಾಗಿತ್ತು. 15 ವರ್ಷದ ನಂತರ ಕೊತ್ತಗೆರೆ ಕೆರೆ ಕೋಡಿಬಿದ್ದು, ಕೋಡಿಯ ಮೂಲಕ ನೀರು ಹರಿದ ಕಾರಣ ಈ ಭಾಗದ ಗ್ರಾಮಸ್ಥರು ಕೆರೆ ಏರಿಯನ್ನು ಬಾಳೆ ಕಂದು ಕಟ್ಟಿ, ಹಸಿರು ತೋರಣದಿಂದ ಸಿಂಗಾರ ಗೊಳಿಸಿದರು. ಕೆರೆಯ ದ್ವಾರ ಬಾಗಿಲಿನಿಂದ ಜಾನಪದ ಡೊಳ್ಳು ಕುಣಿತದೊಂದಿಗೆ ಶಾಸಕ ರಂಗನಾಥ್ ಅವರನ್ನು ಕೋಡಿವರೆಗೆ ಮೆರವಣಿಗೆ ಮೂಲಕ ಕರೆ ತಂದರು, ಬಳಿಕ ಶಾಸಕರು ಸಂಪ್ರದಾಯದಂತೆ ಗಂಗಾಪೂಜೆ ಮಾಡಿ, ಬಾಗಿನ ಅರ್ಪಿಸಿದರು.
ಸಾಮಾನ್ಯರು ಕೈ ಜೋಡಿಸಿ: ಶಾಸಕ ಡಾ.ಎಚ್.ಡಿ.ರಂಗನಾಥ್ ಮಾತನಾಡಿ, ಕುಣಿಗಲ್ ದೊಡ್ಡಕೆರೆ ತುಂಬಿ 20 ವರ್ಷ ಕಳೆದಿದೆ. ಈಗಾಗಲೇ ಕೆರೆ ಭರ್ತಿಗೆ ಕ್ರಮ ಕೈಗೊಂಡಿದ್ದು, ಈಗ ಹರಿದು ಬರುತ್ತಿರುವ ನೀರಿನ ಪ್ರಮಾಣ ನಾಲ್ಕು ದಿನ ಹರಿದರೇ ದೊಡ್ಡಕೆರೆ ಸಹ ಕೋಡಿ ಬೀಳಲಿದೆ. ನೀರಾವರಿಯಿಂದ ವಂಚಿತ ವಾಗಿರುವ ತಾಲೂಕಿಗೆ ಶಾಶ್ವತವಾದ ನೀರಾವರಿ ವ್ಯವಸ್ಥೆ ಮಾಡುವುದೇ ನನ್ನ ಹಾಗೂ ಸಂಸದ ಡಿ.ಕೆ. ಸುರೇಶ್ ಕನಸಾಗಿದೆ. ಇದಕ್ಕೆ ತಾಲೂಕಿನ ರೈತರು ಹಾಗೂ ಸಾಮಾನ್ಯರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷೆ ಅಕ್ಷನಾ ಖಾನ್, ಮಾಜಿ ಅಧ್ಯಕ್ಷರಾದ ನಾರಾಯಣ್, ಬಿ.ಡಿ.ಕುಮಾರ್, ಗಂಗರಂಗಯ್ಯ, ಸದಸ್ಯರಾದ ಪರಮೇಶ್, ಗಂಗಧರ್, ಸ್ವಾಮಿ, ಜಿಪಂ ಮಾಜಿ ಸದಸ್ಯ ದೊಡ್ಡಯ್ಯ, ತಾಪಂ ಮಾಜಿ ಸದಸ್ಯರಾದ ಗಂಗರಂಗಯ್ಯ, ಶ್ರೀನಿವಾಸ್, ಮುಖಂಡರಾದ ಚನ್ನೇಗೌಡ, ನಾಗರಾಜು ಇದ್ದರು.