Advertisement

ಕೋಟೇಶ್ವರ ಕೋಡಿ ರಸ್ತೆ ಅವ್ಯವಸ್ಥೆ: ಅನುದಾನ ಮಂಜೂರು

08:32 PM Oct 06, 2021 | Team Udayavani |

ಕುಂದಾಪುರ: ಕೋಟೇಶ್ವರದಿಂದ ಹಳೆ ಅಳಿವೆಯ (ಬೀಚ್‌ ರೋಡ್‌) ತನಕ ರಸ್ತೆ ಹದಗೆಟ್ಟಿದ್ದು ವಾಹನ ಸಂಚಾರ ದುಸ್ತರವಾಗಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಎರಡು ವಾಹನಗಳು ಏಕಕಾಲದಲ್ಲಿ ಸಂಚರಿಸುವುದು ಕಷ್ಟವಾಗಿದ್ದು ದ್ವಿಚಕ್ರ ವಾಹನ ಸವಾರರಿಗೆ ಕೆಸರ ಸಿಂಚನ ಸಾಮಾನ್ಯವಾಗಿದೆ. ಮಳೆಗಾಲ ಮುಗಿದ ಬಳಿಕ ರಸ್ತೆ ಪೂರ್ಣಪ್ರಮಾಣದಲ್ಲಿ ದುರಸ್ತಿಯಾಗಲಿದೆ.

Advertisement

ಎರಡೂ ಪಾರ್ಶ್ವಗಳಲ್ಲಿ ಒಂದು ವಾಹನದ ಎದುರು ಇನ್ನೊಂದು ವಾಹನ ಸಾಗಲು ಸ್ಥಳಾವಕಾಶ ಇಲ್ಲದೇ 3.5 ಮೀ.ನಷ್ಟು ಅಗಲ ಕಿರಿದಾದ ರಸ್ತೆಯಲ್ಲಿ ಎರಡು ಕಡೆಗಳಲ್ಲೂ ದೊಡ್ಡ ಹೊಂಡದಿಂದ ಕೂಡಿವೆ. ವಾಹನ ಬರುತ್ತಿದ್ದಾಗ ಪಾದಚಾರಿಗಳು ಸಂಚರಿಸಲು ಅಸಾಧ್ಯವಾಗಿದೆ.
ವಿನಾಯಕ ಕೋಡಿ ಸಂಪರ್ಕ ಸೇತುವೆ ಕಾಮಗಾರಿ ನಡೆಯುತ್ತಿರುವ ಕಾರಣ ಇಲ್ಲಿ ವಾಹನಗಳು ಅಧಿಕ ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ವಿನಾಯಕ ಕೋಡಿಯಲ್ಲಿ ಒಂದು ಸೇತುವೆಯ ಕಾಮಗಾರಿ ಬಹುತೇಕ ಪೂರ್ಣ ವಾದರೂ ಇನ್ನೂ ವಾಹನಗಳ ಓಡಾಟಕ್ಕೆ ಬಿಟ್ಟುಕೊಟ್ಟಿಲ್ಲ. ಇನ್ನೊಂದು ಕಾಮಗಾರಿ ಮೇಲೇಳುವ ಲಕ್ಷಣ ಕಾಣುತ್ತಿಲ್ಲ ಎಂದು ಊರವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗಾಗ ಬರುತ್ತಿರುವ ಮಳೆ ಕಾಮಗಾರಿ ಪುನರಾರಂಭಿಸಲು ತೊಡಕಾಗಿದೆ. ಆದ್ದರಿಂದ ಈ ರಸ್ತೆಯಲ್ಲಿ ಕಳೆದ ಫೆಬ್ರವರಿಯಿಂದ ಸಂಚಾರ ಆರಂಭಗೊಂಡಿಲ್ಲ.

ವಾಹನ ದಟ್ಟನೆ
ಕೋಡಿ ವಿನಾಯಕ ರಸ್ತೆ ಬದಲಿಗೆ ಕುಂದಾಪುರದಿಂದ ಕೋಡಿಗೆ ಹೋಗುವ ವಾಹನಗಳು ಒಂದೋ ನಗರದಲ್ಲಿ ಇರುವ ಚರ್ಚ್‌ ರಸ್ತೆಯನ್ನು ಅವಲಂಬಿಸಬೇಕು ಅಥವಾ ಕೋಟೇಶ್ವರ ಹಳೆಅಳಿವೆ ರಸ್ತೆ ಮೂಲಕ ಸಾಗಬೇಕು. ಬಸ್ಸು ಮೊದಲಾದ ಎಲ್ಲ ವಾಹನಗಳೂ ಇದೇ ಮಾರ್ಗ ಅನುಸರಿಸುತ್ತಿವೆ. ಆದ್ದರಿಂದ ಈ ರಸ್ತೆಯಲ್ಲಿ ವಾಹನಗಳ ದಟ್ಟನೆ ಹೆಚ್ಚಾಗಿದೆ. ಪರಿಣಾಮ ಹಳೆ ಅಳಿವೆ ರಸ್ತೆಗೆ ಭಾರ ಹೆಚ್ಚಾಗಿದೆ. ಧಾರಣ ಸಾಮರ್ಥ್ಯಕ್ಕಿಂತ ಹೆಚ್ಚಿನ ವಾಹನಗಳನ್ನು ತಾಳಿಕೊಳ್ಳಬೇಕಿದೆ.

ಇದನ್ನೂ ಓದಿ:ತಲಕಾವೇರಿ ತೀರ್ಥೋದ್ಭವ; ಭಕ್ತರಿಗೆ ಮುಕ್ತ ಅವಕಾಶ: ಕೋಟ ಶ್ರೀನಿವಾಸ ಪೂಜಾರಿ

ಮಂಜೂರು
ಈಗ ಕೆಲವು ತಿಂಗಳಿನಿಂದ ಅಧಿಕ ವಾಹನ ಓಡಾಟದಿಂದ ಹಾಳಾದ, ಕಳೆದ ಅನೇಕ ವರ್ಷಗಳಿಂದ ದುರಸ್ತಿಗೆ ಕಾಯುತ್ತಿರುವ ಈ ರಸ್ತೆಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈಗ ಅನುದಾನ ಮಂಜೂರು ಮಾಡಿಸಿದ್ದಾರೆ. ಕೋಟೇಶ್ವರದಿಂದ ಸುಮಾರು ಅರ್ಧ ಕಿ.ಮೀ. ದೂರಕ್ಕೆ ಪೂರ್ಣ ಡಾಮರು ಕಾಮಗಾರಿಗೆ 40 ಲಕ್ಷ ರೂ. ಮಂಜೂರಾಗಿದ್ದು ಟೆಂಡರ್‌ ಆಗಿದೆ. ಮಳೆ ನಿಂತ ಬಳಿಕ ಕಾಮಗಾರಿ ನಡೆಯಲಿದೆ. ಅನಂತರದ ರಸ್ತೆ ದುರಸ್ತಿಗೆ 3 ಕೋ.ರೂ. ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಲು ಸರ್ವೇ ಕಾರ್ಯ ನಡೆದಿದೆ. ಕೋಡಿಯಿಂದ ಚಕ್ರಮ್ಮ ದೇವಸ್ಥಾನದವರೆಗೆ 3 ಕೋ.ರೂ. ಮಂಜೂರಾಗಿದ್ದು ಕಾಮಗಾರಿ ನಡೆಯಲಿದೆ.

Advertisement

3 ಕೋ.ರೂ. ಮಂಜೂರು
ಕೋಟೇಶ್ವರ ಹಳೆ ಅಳಿವೆ ಕೋಡಿ ರಸ್ತೆಗೆ ಶಾಸಕರ ಮೂಲಕ ಅನುದಾನ ಮಂಜೂರಾಗಿದ್ದು ಮಳೆಗಾಲದ ಬಳಿಕ ಕಾಮಗಾರಿ ಆರಂಭವಾಗಲಿದೆ. ಪೂರ್ಣ ಡಾಮರಿಗೆ 40 ಲಕ್ಷ ರೂ. ಟೆಂಡರ್‌ ಆಗಿದ್ದು ಅನಂತರ ಕ್ರಿಯಾ ಯೋಜನೆ ತಯಾರಿ ಹಂತದಲ್ಲಿದೆ. ಚಕ್ರಮ್ಮ ದೇವಸ್ಥಾನದವರೆಗೆ 3 ಕೋ.ರೂ. ಮಂಜೂರಾಗಿದೆ.
-ಹರ್ಷವರ್ಧನ, ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next