Advertisement

ಕೋಟ: ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಮಕ್ಕಳ ಸಾವು

12:54 PM May 31, 2017 | Team Udayavani |

ಕೋಟ: ಕೃಷಿಗಾಗಿ ನೆನೆ ಹಾಕಿದ ಬೀಜವನ್ನು ಮೇಲೆ ತೆಗೆಯಲು ಕೃಷಿ ಹೊಂಡಕ್ಕೆ ಇಳಿದ ತಾಯಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ದೇಲೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರದ ಬಯಲುಮನೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. 

Advertisement

ಇಲ್ಲಿನ ನರಸಿಂಹ ಶೆಟ್ಟಿ ಅವರ ಪುತ್ರಿ ಭಾರತಿ ಶೆಟ್ಟಿ (42) ಹಾಗೂ ಅವರ ಪುತ್ರಿಯರಾದ ಪೃಥ್ವಿ (21), ಪ್ರಜ್ಞಾ (18) ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟವರು. 

ಬೀಜದ ಭತ್ತವನ್ನು ಗೋಣಿ ಚೀಲದಲ್ಲಿ ಕಟ್ಟಿ ಹೊಲದಲ್ಲಿದ್ದ ಕೃಷಿ ಹೊಂಡದಲ್ಲಿ ನೆನೆಯಲು ಹಾಕಿದ್ದು, ಅದನ್ನು ನೀರಿನಿಂದ ತೆಗೆಯುವ ಸಂದರ್ಭ ಈ ದುರಂತ ಸಂಭವಿಸಿದೆ. ಮನೆಯಲ್ಲಿ ಮೂವರೂ ಇಲ್ಲದೇ ಇರುವುದನ್ನು ಗಮನಿಸಿ ನರಸಿಂಹ ಶೆಟ್ಟಿ ಅವರು ಕೃಷಿ ಹೊಂಡದ ಬಳಿ ಬಂದು ನೋಡಿದಾಗ ಕೆಲವು ಬೀಜದ ಚೀಲಗಳು ಮೇಲ್ಭಾಗದಲ್ಲಿ ಇರುವುದು ಕಂಡು ಬಂತು. ಅನುಮಾನಗೊಂಡ ಅವರು ಅಕ್ಕಪಕ್ಕದವರನ್ನು ಕೂಗಿ ಕರೆದಾಗ ಮೂವರು ಕೃಷಿ ಹೊಂಡದಲ್ಲಿ ಮುಳುಗಿರುವುದು ಬೆಳಕಿಗೆ ಬಂತು. ಬಳಿಕ ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಮೇಲೆತ್ತಲಾಯಿತು. 

ಭಾರತಿ ಶೆಟ್ಟಿ ಅವರ ಪತಿ ಸುರೇಂದ್ರ ಶೆಟ್ಟಿ ಅವರು ಅಂಪಾರಿನಲ್ಲಿರುವ ತನ್ನ ಮನೆ ಯಲ್ಲಿದ್ದುಕೊಂಡು ಕೃಷಿ ಮಾಡುತ್ತಿದ್ದರು. ಭಾರತಿ ಶೆಟ್ಟಿ ತನ್ನ ಇಬ್ಬರು ಪುತ್ರಿಯರೊಂದಿಗೆ ತಂದೆ ಮನೆಯಲ್ಲಿ ವಾಸಿಸುತ್ತಿದ್ದರು. ಸಂಜೆ 7.30ರ ಹೊತ್ತಿಗೆ ಘಟನೆ ಸಂಭವಿಸಿದ್ದು, ಈ ಬಗ್ಗೆ ತಿಳಿದ ಬಳಿಕ ಸುರೇಂದ್ರ ಶೆಟ್ಟಿ ದೇಲೆಟ್ಟುವಿಗೆ ಆಗಮಿಸಿದರು.

ಇಬ್ಬರೇ ಮಕ್ಕಳು
ನರಸಿಂಹ ಶೆಟ್ಟಿ ಅವರದ್ದು ಕೃಷಿ ಕುಟಂಬವಾಗಿದೆ. ಭಾರತಿ ಶೆಟ್ಟಿ-ಸುರೇಂದ್ರ ಶೆಟ್ಟಿ ದಂಪತಿಗೆ ಇಬ್ಬರೇ ಮಕ್ಕಳಿದ್ದು, ಅವರಿಬ್ಬರೂ ತಾಯಿಯೊಂದಿಗೆ ಕೃಷಿ ಸಂಬಂಧಿ ಕಾರ್ಯದಲ್ಲಿರುವಾಗಲೇ ಸಾವಿಗೀಡಾಗಿದ್ದಾರೆ. ಇಬ್ಬರು ಪುತ್ರಿಯರೂ ತಾಯಿಯೊಂದಿಗೆ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದರು. ನೀರಿನಲ್ಲಿ ನೆನೆ ಹಾಕಿದ ಭತ್ತದ ಬೀಜವನ್ನು ತೆಗೆಯುವುದಕ್ಕಾಗಿ ಸಂಜೆಯ ವೇಳೆ ತಾಯಿಯೊಂದಿಗೆ ಇಬ್ಬರೂ ಪುತ್ರಿಯರೂ ಹೋಗಿದ್ದರು. ನೀರಿನಲ್ಲಿ ನೆನೆದು ಭಾರವಾಗಿದ್ದ ಗೋಣಿಯಲ್ಲಿದ್ದ ಭತ್ತವನ್ನು ಮೇಲೆತ್ತುವ ಸಂದರ್ಭ ಓರ್ವರು ಜಾರಿ ನಿಯಂತ್ರಣ ತಪ್ಪಿ ಬಿದ್ದಾಗ ಇತರ ಇಬ್ಬರು ಅವರನ್ನು ರಕ್ಷಿಸುವ ಯತ್ನದಲ್ಲಿ ನೀರಿಗೆ ಬಿದ್ದು ಸಾವಿಗೀಡಾಗಿರಬೇಕೆಂದು ಶಂಕಿಸಲಾಗಿದೆ. ಮೃತಪಟ್ಟ ಪೃಥ್ವಿ ಬ್ರಹ್ಮಾವರದ ಎಸ್‌ಎಂಎಸ್‌ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಪ್ರಜ್ಞಾ ಅವರು ಆರ್‌.ಎನ್‌. ಶೆಟ್ಟಿ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದ್ದರು. ಈ ಇಬ್ಬರು ಮಕ್ಕಳು ಪ್ರತಿಭಾವಂತರಾಗಿದ್ದರು. ಪೃಥ್ವಿ ಕೃಷಿ ಚಟುವಟಿಕೆ ಸಂದರ್ಭ ಟಿಲ್ಲರ್‌ ಬಳಸಿ ಗದ್ದೆ ಉಳುತ್ತಿದ್ದಳು.

Advertisement

ಮುಗಿಲು ಮುಟ್ಟಿದ ರೋದನ: ದೇಲೆಟ್ಟು ಬಯಲುಮನೆಯಲ್ಲಿ ನರಸಿಂಹ ಶೆಟ್ಟಿ ಅವರ ಪುತ್ರ, ಭಾರತಿ ಅವರ ತಮ್ಮ ಉಮೇಶ್‌ ಕೂಡ ವಾಸಿಸುತ್ತಿದ್ದರು. ಈಗ ಒಂದೇ ಮನೆಯ ಮೂವರನ್ನು ಕಳೆದುಕೊಂಡ ಕುಟುಂಬದ ರೋದನ ಮುಗಿಲುಮುಟ್ಟಿದೆ. 

ಘಟನ ಸ್ಥಳಕ್ಕೆ ಕೋಟ ಠಾಣಾಧಿಕಾರಿ ರಾಜ್‌ಗೊàಪಾಲ್‌, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್‌ ಭೇಟಿ ನೀಡಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next