ಉಡುಪಿ: ಸರಕಾರ ಯೋಚನೆ ಮಾಡಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದೆ. ಟೀಕೆ ಟಿಪ್ಪಣಿ ಎಲ್ಲದಕ್ಕೂ ಸರಕಾರ ಹಾಗೂ ನಾವೆಲ್ಲ ಉತ್ತರ ಕೊಡುತ್ತಿದ್ದೇವೆ. ಆದರೆ ರಾಷ್ಟ್ರೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಅವರು ಸಾರ್ವಜನಿಕವಾಗಿ ಪುಸ್ತಕ ಹರಿದಾಕುವ ಮಟ್ಟಕ್ಕೆ ಇಳಿದಿರುವುದು ಆತಂಕ ಮೂಡಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಷಾದ ವ್ಯಕ್ತಪಡಿಸಿದರು.
ರವಿವಾರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು ಡಿಕೆಶಿ ತಮ್ಮ ವರ್ತನೆ ಬಗ್ಗೆ ಪುನರಾಲೋಚನೆ ಮಾಡಬೇಕು. ಪ್ರತಿರೋಧಕ್ಕೆ ಸದನದ ಒಳಗೆ ಹಾಗೂ ಹೊರಗೆ ಅವಕಾಶ ಇದೆ, ಹೀಗೆ ಸಾರ್ವಜನಿಕವಾಗಿ ಪುಸ್ತಕ ಹರಿದಾಕಿರುವುದು ಖಂಡನೀಯ. ಅವರ ಹುದ್ದೆಗೆ ಈ ವರ್ತನೆ ತಕ್ಕದಲ್ಲ ಎಂದರು.
ಪ್ರಣವಾನಂದ ಶ್ರೀಗಳಿಂದ ಎಚ್ಚರಿಕೆ
ಗುಲ್ಬರ್ಗ ಭಾಗದಲ್ಲಿ ಅಮರಣಾಂತ ಉಪವಾಸ ಮಾಡುವ ಎಚ್ಚರಿಕೆ ನೀಡಿದ ಪ್ರಣವಾನಂದ ಶ್ರೀಗಳು ಈಡಿಗ, ಬಿಲ್ಲವ, ನಾಮ್ ದಾರಿ ಸಮಾಜಕ್ಕೆ ಸಂಬಂಧಿಸಿ ಶೇಂದಿ ಮರು ಆರಂಭಕ್ಕೆ ಆಗ್ರಹ ಮಾಡಿದ್ದಾರೆ. ಶ್ರೀಗಳ ಮನವಿ ಸರಕಾರದ ಗಮನಕ್ಕೆ ಬಂದಿದೆ. ಜತೆಗೆ ನಾರಾಯಣಗುರು ನಿಗಮ ಸ್ಥಾಪನೆ ಕೂಡ ಬೇಡಿಕೆ ಇದೆ. ಬೇಡಿಕೆ ಇಟ್ಟು ನಾಳೆಯಿಂದ ಅಮರಣಾಂತ ಉಪವಾಸ ಮಾಡುತ್ತೇನೆಂದು ಶ್ರೀಗಳು ಹೇಳಿದ್ದಾರೆ ಎಂದರು.
ಶೇಂದಿ ಹೊರತುಪಡಿಸಿ ನೀರಾ ಮಾರಾಟಕ್ಕೆ ಸರಕಾರವೇ ಅನುಮತಿ ನೀಡಿದ್ದು, ತೋಟಗಾರಿಕೆ ಇಲಾಖೆ ಮೂಲಕ ತೆಂಗಿನ ಮರದಿಂದ ತೆಗೆದ ನೀರಾವನ್ನು ಮಾರಾಟ ಮಾಡಲು ಮುಕ್ತ ಅವಕಾಶ ಇದೆ. ಜತೆಗೆ ನೀರಾವನ್ನು ಶೇಂದಿಯಾಗಿ ಮಾರ್ಪಡಿಸಿ ಮಾರಾಟ ಮಾಡುವ ಬಗ್ಗೆಯೂ ಚರ್ಚೆಯಲ್ಲಿದೆ. ಇನ್ನು ನಾರಾಯಣಗುರು ನಿಗಮ ಬೇಡಿಕೆಯನ್ನೂ ಸ್ವಾಮೀಜಿಗಳು ಇಟ್ಟಿದ್ದಾರೆ.
Related Articles
ಮುಖ್ಯಮಂತ್ರಿಗಳು ಈ ಬಗ್ಗೆ ಚರ್ಚೆ ಮಾಡುವ ಪ್ರಸ್ತಾವ ಮಾಡಿದ್ದಾರೆ. ಹಿಂದುಳಿದ ವರ್ಗಗಳಿಗೆ ಬಜೆಟ್‌ನಲ್ಲಿ ನೀಡಿದ 400 ಕೋಟಿ ರೂ. ಅನುದಾನ ಈಡಿಗ ಬಿಲ್ಲವ ಸಮುದಾಯದಕ್ಕೆ ಸಾಲದ ರೂಪದಲ್ಲಿ ನೀಡುವ ಪ್ರಸ್ತಾವ ಇದೆ ಎಂದವರು ತಿಳಿಸಿದರು.
ಈಡಿಗ, ಬಿಲ್ಲವ ಹಾಗೂ ಶೇಂದಿ ಮಾರಾಟ ಮಾಡುತ್ತಿದ್ದ ಸಮುದಾಯದ ಸ್ವಸಹಾಯ ಸಂಘಗಳಿಗೆ ಝೀರೋ ಪರ್ಸೆಂಟ್ ರೂಪದಲ್ಲಿ ಸಾಲ ಪ್ರಸ್ತಾವ ಇದೆ. ಈ ನಡುವೆ ಪ್ರಣವಾನಂದ ಶ್ರೀಗಳು ಕಟುವಾಗಿ ಮಾತನಾಡಿದ್ದಾರೆ ಎಂದವರು ಹೇಳಿದರು.