ಮಣಿಪಾಲ: ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಪ್ರಶಸ್ತಿ ವಾಪಸ್ ಮಾಡಿರುವುದು ಸಂಪೂರ್ಣ ಢೋಂಗಿ. ಹಾಗೆ ಮಾಡಿದವರು ಪ್ರಶಸ್ತಿಯ ಬದಲಿಗೆ ಅದರ ಜೆರಾಕ್ಸ್ ಪ್ರತಿ ಮಾತ್ರ ಕೊಟ್ಟಿದ್ದರು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಾಂಗ್ರೆಸ್‌ನ ರಾಷ್ಟ್ರಿಯ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಭಾರತದ ಬಗ್ಗೆ ವಿದೇಶದಲ್ಲಿ ಕೀಳಾಗಿ ಮಾತನಾಡಿರುವುದು ಸರಿಯಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದರೂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಯಾವ ಮುಖಂಡರೂ ಇದರ ಬಗ್ಗೆ ಮಾತನಾಡಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ಸಂದರ್ಭದಲ್ಲಿ ಕೆಲವು ಬುದ್ಧಿಜೀವಿಗಳು ದೇಶದಲ್ಲಿ ಅಸಹಿಷ್ಣುತೆಯಿದೆ ಎಂದು ಪ್ರಶಸ್ತಿ ವಾಪಸ್ ಅಭಿಯಾನ ಮಾಡಿದ್ದರು. ಈ ಕುರಿತು ವಿಧಾನ ಪರಿಷತ್‌ನಲ್ಲಿ ಪ್ರಶ್ನೆ ಮಾಡಿದ್ದೆ. ಅದಕ್ಕೆ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಉತ್ತರಿಸಿ, ಸಾಹಿತಿಗಳು ಪ್ರಶಸ್ತಿ ವಾಪಸ್ ನೀಡಿಲ್ಲ. ಅದರ ಜೆರಾಕ್ಸ್ ಮಾತ್ರ ನೀಡಿದ್ದಾರೆ ಎಂದಿದ್ದರು. ಹೀಗಾಗಿ ಭಾರತದಲ್ಲಿ ಅಸಹಿಷ್ಣುತೆ ಇದೆ ಎನ್ನುವುದು ಮತ್ತು ಪ್ರಶಸ್ತಿ ವಾಪಸ್ ಎರಡೂ ಡೋಂಗಿ ಎಂದು ಮಣಿಪಾಲದ ಕಂಟ್ರಿಇನ್ ಹೊಟೇಲ್‌ನಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಬಂಟ ಸಮುದಾಯದಿಂದ ಪ್ರತ್ಯೇಕ ನಿಗಮ ಸ್ಥಾಪನೆಗೆ ಬೇಡಿಕೆ ಇಟ್ಟಿರುವುದನ್ನು ಸಿಎಂ ಗಮನಕ್ಕೆ ತರಲಾಗುವುದು. ಈಗಾಗಲೇ ಬಿಲ್ಲವ, ಈಡಿಗ ಸಹಿತ ಹಲವು ಸಮುದಾಯಕ್ಕೆ ಅನುಕೂಲ ಆಗುವಂತೆ ನಿಗಮ ಸ್ಥಾಪನೆ ಮಾಡಲಾಗಿದೆ ಎಂದರು.