ಕೋಟ: ಕೋಟ ಪೊಲೀಸ್ ಠಾಣೆಗೆ 75ಲಕ್ಷ ವೆಚ್ಚದಲ್ಲಿ ಸುವ್ಯವಸ್ಥಿತ ನೂತನ ಕಟ್ಟಡ ಮಂಜೂರಾಗಿದ್ದು ಇದರ ಶಿಲಾನ್ಯಾಸ ಕಾರ್ಯಕ್ರಮ ಮಾ. 8ರಂದು ಠಾಣೆಯ ಆವರಣದಲ್ಲಿ ನಡೆಯಿತು.
ಈ ಸಂದರ್ಭ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಶಿಲಾನ್ಯಾಸ ನೆರವೇರಿಸಿ, ಕಟ್ಟಡ ಅತೀ ಶೀಘ್ರದಲ್ಲಿ ಉತ್ತಮ ರೀತಿಯಲ್ಲಿ ಸಿದ್ಧಗೊಳ್ಳಲಿ ಎಂದು ಶುಭ ಹಾರೈಸಿದರು.
ಪೊಲೀಸ್ ಉಪ ಅಧೀಕ್ಷಕ ಟಿ.ಆರ್. ಜೈಶಂಕರ್, ಬ್ರಹ್ಮಾವರ ವೃತ ನಿರೀಕ್ಷಕ ಪೂವಯ್ಯ, ಬ್ರಹ್ಮಾವರ ಠಾಣಾಧಿಕಾರಿ ರಾಘವೇಂದ್ರ ಸಿ., ಅಭಿಯಂತರ ಸಂತೋಷ್ ಕುಮಾರ್, ಗುತ್ತಿಗೆದಾರ ಪ್ರಮೋದ್ ಕುಮಾರ್ ಶೆಟ್ಟಿ, ಸಾಮಾಜಿಕ ಹೋರಾಟಗಾರ ಗಿರೀಶ್ ನಾಯಕ್ ಹಾಗೂ ಕೋಟ ಠಾಣೆಯ ಸಿಬಂದಿ ಉಪಸ್ಥಿತರಿದ್ದರು.
ಉದಯವಾಣಿ ವರದಿ:
ಸಾಮಾಜಿಕ ಹೋರಾಟಗಾರರ ಶ್ರಮ
ಕೋಟ ಠಾಣೆಯ ಹಳೆಯ ಕಟ್ಟಡ 1996ರಲ್ಲಿ ನಿರ್ಮಾಣಗೊಂಡಿದ್ದು, ಅದು ಪ್ರಸ್ತುತ ಸಂಪೂರ್ಣ ಶಿಥಿಲಗೊಂಡಿದೆ ಹಾಗೂ ಮಳೆಗಾಲದಲ್ಲಿ ಎಲ್ಲಾ ಕಡೆ ನೀರು ಸೋರುತಿತ್ತು. ಹೀಗಾಗಿ ಹೊಸ ಕಟ್ಟಡ ನಿರ್ಮಿಸುವಂತೆ ಸ್ಥಳೀಯರು 2015ರಲ್ಲಿ ಬೆಂಗಳೂರಿನ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಮೇರೆಗೆ ಪೊಲೀಸ್ ಹೌಸಿಂಗ್ ಬೋರ್ಡ್ ಮೂಲಕ ಕಟ್ಟಡ ಹಾಗೂ ವಸತಿಗೃಹ ನಿರ್ಮಾಣಕ್ಕೆ ನೀಲನಕಾಶೆ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ರವಾನೆಯಾಗಿತ್ತು.
ಅನಂತರ 2017ರಲ್ಲಿ ರಾಜ್ಯದ ವಿವಿಧ ಠಾಣೆಯ ಕಟ್ಟಡಗಳು ಮಂಜೂರಾಗುವ ಸಂದರ್ಭ ಈ ಕಾಮಗಾರಿಗೂ ಅನುಮೋದನೆ ದೊರೆತಿತ್ತು. ಆದರೆ ಬೇರೆ ಠಾಣೆಗಳ ಕಾಮಗಾರಿ ಪೂರ್ಣಗೊಂಡರು ಕೋಟ ಠಾಣೆಯ ಕಾಮಗಾರಿ ಆರಂಭಗೊಂಡಿರಲಿಲ್ಲ. ಈ ಕುರಿತು ಪ್ರಶ್ನಿಸಿದಾಗ ಮಂಜೂರಾತಿ ರದ್ದುಗೊಂಡಿದೆ ಎನ್ನುವ ಉತ್ತರ ಕೂಡ ಕೇಳಿಬಂದಿತ್ತು. ಆಗ ಠಾಣೆಯ ಸಮಸ್ಯೆಯ ಕುರಿತು ಉದಯವಾಣಿ ಹಲವು ಬಾರಿ ನಿರಂತರ ವರದಿ ಪ್ರಕಟಿಸಿ ಅಧಿಕಾರಿಗಳ ಗಮನಸೆಳೆದಿತ್ತು ಮತ್ತು ಸ್ಥಳೀಯ ಸಾಮಾಜಿಕ ಹೋರಾಗಾರರಾದ ಕೋಟ ಗಿರೀಶ್ ನಾಯಕ್ ಅವರು ಮಾಹಿತಿ ಹಕ್ಕು ಮುಂತಾದವುಗಳ ಮೂಲಕ ನಿರಂತರ ಹೋರಾಟ ನಡೆಸಿ ಹೊಸ ಕಟ್ಟಡ ನಿರ್ಮಾಣವಾಗಬೇಕು ಎಂದು ಪಟ್ಟುಹಿಡಿದಿದ್ದರು. ಇದರ ಫಲವಾಗಿ ಇದೀಗ ನೂತನ ಕಟ್ಟಡದ ಕಾಮಗಾರಿ ಆರಂಭಗೊಂಡಿದೆ.