ಕೋಟಾ (ರಾಜಸ್ಥಾನ): ಜೆಇಇ, ನೀಟ್ ಪರೀಕ್ಷೆಗಳ ಕೋಚಿಂಗ್‌ಗಳಿಗಾಗಿಯೇ ಪ್ರಸಿದ್ಧವಾಗಿ ದೇಶದ ʻಕೋಚಿಂಗ್ ಹಬ್ʼ ಎಂದೇ ಕರೆಯಲ್ಪಟ್ಟಿರುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೊಸದೇನಲ್ಲ. ದೇಶದ ಮೂಲೆ ಮೂಲೆಗಳಿಂದ ಬೇರೆ ಬೇರೆ ಕಾಲೇಜು ಪ್ರವೇಶ ಪರೀಕ್ಷೆಗಳ ಕೋಚಿಂಗ್‌ಗೆಂದು ಬರುವ ವಿದ್ಯಾರ್ಥಿಗಳು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಕೋಟಾದಲ್ಲಿ ಸರ್ವೇ ಸಾಮಾನ್ಯವೆನ್ನುವಂತಾಗಿದೆ.
ಇದನ್ನು ತಡೆಗಟ್ಟುವ ಉದೇಶದಿಂದ ಕೋಟಾ ಜಿಲ್ಲಾಡಳಿತ ವಿಚಿತ್ರ ಆದೇಶವೊಂದನ್ನು ಹೊರಡಿಸಿದೆ. ಜಿಲ್ಲೆಯ ಎಲ್ಲಾ ಹಾಸ್ಟೆಲ್ ರೂಂಗಳು ಮತ್ತು ಪಿ.ಜಿ ಗಳಲ್ಲಿ ಸ್ಪ್ರಿಂಗ್ ಇರುವ ಫ್ಯಾನ್‌ಗಳನ್ನು ಅಳವಡಿಸಲು ಜಿಲ್ಲಾಡಳಿತ ಆದೇಶಿಸಿದೆ.
ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ.
ರಾಜಸ್ಥಾನದ ಕೋಟಾ ಜಿಲ್ಲೆಯ ಜಿಲ್ಲಾಧಿಕಾರಿ ಓಂ ಪ್ರಕಾಶ್ ಬುಂಕಾರ್ ಅವರು ಈ ಆದೇಶ ಹೊರಡಿಸಿದ್ದು, ಕೋಚಿಂಗ್‌ಗಾಗಿ ಕೋಟಾಗೆ ಬರುವ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಗಟ್ಟುವುದಕ್ಕಾಗಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
2022 ರಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಕೆಲವೊಂದು ಆದೇಶಗಳನ್ನು ಹೊರಡಿಸಿತ್ತು. ಅದರಲ್ಲಿ ವಿದ್ಯಾರ್ಥಿಗಳಿಗೆ ವಾರದ ರಜೆ ನೀಡುವುದು, ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 80 ಮೀರದಂತೆ ಇರುವುದು, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮನೋವೈಜ್ಙಾನಿಕ ಮೌಲ್ಯಮಾಪನ ಸೇರಿ ಹಲವು ವಿಚಾರಗಳ ಬಗ್ಗೆ ಕೋಚಿಂಗ್ ಸಂಸ್ಥೆ, ಹಾಸ್ಟೆಲ್, ಪಿಜಿ ಮಾಲಿಕರಿಗೆ ಆದೇಶಿಸಲಾಗಿತ್ತು.
ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತೀರಾ ಸಾಮಾನ್ಯ. ಈ ವರ್ಷವೊಂದರಲ್ಲೇ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಮಂಗಳವಾರವಷ್ಟೇ ಬಿಹಾರ ಮೂಲದ 18 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಬೆನ್ನಲ್ಲೇ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ.
ಇದನ್ನೂ ಓದಿ: G20: ರಾಸಾಯನಿಕ, ಜೈವಿಕ ಶಸ್ತ್ರಾಸ್ತ್ರಗಳ ದಾಳಿ ನಿಭಾಯಿಸಲು ದೆಹಲಿ ಪೊಲೀಸರಿಗೆ ತರಬೇತಿ