ಕೋಟ: ಡ್ರೈಫುಡ್ ವ್ಯವಹಾರದಲ್ಲಿ ಹಣ ವಿನಿಯೋಗಿಸಿದರೆ ಪ್ರತಿ ತಿಂಗಳು 50,000 ಹಣವನ್ನು ನೀಡುವುದಾಗಿ ಹೇಳಿ ಮಹಮ್ಮದ್ ಸಿದ್ದಿಕ್ ಎಂಬಾತ ಕೋಟತಟ್ಟು ನಿವಾಸಿ ಜುಮ್ಮಿ ಸುಫಿಯಾನ್ ಎಂಬವರಿಗೆ ವಂಚಿಸಿರುವ ಘಟನೆ ನಡೆದಿದೆ.
ಪ್ರಕರಣದ ವಿವರ:
ಜುಮ್ಮಿ ಸುಫಿಯಾನ್ (28ವರ್ಷ) ಎಂಬವರಿಗೆ ಮುಂಬೈನಲ್ಲಿ ಡ್ರೈಫುಡ್ ವ್ಯವಹಾರ ಮಾಡಿಕೊಂಡಿರುವ ಮಹಮ್ಮದ್ ಸಿದ್ದಿಕ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ನಂತರ ಆರೋಪಿ ಮಹಮ್ಮದ್ ಸಿದ್ದಿಕ್ ಸುಫಿಯಾನ್ ಮನೆಗೆ ಬಂದು ತನ್ನ ಡ್ರೈಫುಡ್ ವ್ಯವಹಾರದಲ್ಲಿ ಹಣ ವಿನಿಯೋಗಿಸಿದರೆ ಪ್ರತಿ ತಿಂಗಳು 50,000 ನೀಡುವುದಾಗಿ ನಂಬಿಸಿದ್ದ.
2023ರ ಡಿಸೆಂಬರ್ ನಲ್ಲಿ ಕೋಟ ಪಡುಕೆರೆಯ ಸುಫಿಯಾನ್ ಸಂಬಂಧಿ ಆಯಿಷಾ ಬದ್ರುದ್ದಿನ್ ಅವರ ಮನೆಯಲ್ಲಿ ಸುಫಿಯಾನ್ ಮತ್ತು ತಾಯಿ ಫರ್ಜಾನಾ ಹುಸೇನ್ ಅವರಲ್ಲಿ ಸಿದ್ದಿಕ್ ಮಾತುಕತೆ ನಡೆಸಿದ್ದು, ಅದರಂತೆ ಫರ್ಜಾನಾ ಅವರ ಖಾತೆಯಿಂದ ಹಂತ, ಹಂತವಾಗಿ ಒಟ್ಟು 5 ಲಕ್ಷ ಹಣವನ್ನು ಪೋನ್ ಪೇ ಮೂಲಕ ಹಾಗೂ ಕಂಡ್ಲೂರಿನ ನಸ್ರವುಲ್ಲಾ ಅವರ ಸಮ್ಮುಖದಲ್ಲಿ ಆರೋಪಿಗೆ ಬ್ಯಾಂಕ್ ಚೆಕ್ ಮತ್ತು ನಗದು ಸೇರಿ ಒಟ್ಟು 19 ಲಕ್ಷ ಹಣವನ್ನು ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಸಿದ್ದಿಕ್ ಡ್ರೈಫುಡ್ ವ್ಯವಹಾರ ಪ್ರಾರಂಭವಾಗಿ ಮೊದಲ 6 ತಿಂಗಳು ಒಟ್ಟು 3 ಲಕ್ಷ ಹಣ ಸುಫಿಯಾನ್ ಗೆ ನೀಡಿದ್ದು, ನಂತರ ಯಾವುದೇ ಹಣ ನೀಡದೆ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.