ಕೋಟ: ಗ್ರಾ.ಪಂ. ಅಧೀನದ ಅಂಗಡಿ ಕೋಣೆಯಲ್ಲಿ ಏಲಂ ಆಗಿರುವ ಚರ ಸೊತ್ತುಗಳನ್ನು ಬಿಡ್ಡುದಾರರಿಗೆ ಹಸ್ತಾಂತರಿಸಲು ಅಡ್ಡಿಪಡಿಸಿ ಪಿಡಿಒಗೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕೆದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಫೆ. 6ರಂದು ಸಂಭವಿಸಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆದೂರು ಗ್ರಾ.ಪಂ. ಪಿಡಿಒ ಪ್ರಸಾದ್ ಗ್ರಾ.ಪಂ. ಅಂಗಡಿ ಕೋಣೆಯಲ್ಲಿನ ಚರ ಸ್ವತ್ತುಗಳನ್ನು ಫೆ. 4ರಂದು ಬಹಿರಂಗ ಏಲಂ ಮಾಡಿದ್ದು, ಬೇಳೂರು ಸೀತಾರಾಮ ಶೆಟ್ಟಿ ಎನ್ನುವರರು ಏಲಂನಲ್ಲಿ ಕೆಲವು ಚರ ಸೊತ್ತುಗಳನ್ನು ಬಿಡ್ ಮೂಲಕ 51 ಸಾವಿರ ರೂ. ಗೆ ಪಡೆದಿದ್ದರು. ಫೆ. 6ರಂದು ಬೆಳಗ್ಗೆ ಪ್ರಸಾದ ಅವರು ಏಲಂ ಆದ ಚರ ಸೊತ್ತುಗಳನ್ನು ಲಿಸ್ಟ್ ಮಾಡಿ, ಪಂಚಾಯತ್ ಸಿಬಂದಿ ಮಾಧವ, ಸೀತಾರಾಮ ಮತ್ತು ಸದಸ್ಯರೊಂದಿಗೆ ಸೇರಿ ಹಸ್ತಾಂತರಿಸುವಾಗ ಬಿಡ್ಡುದಾರ ಬೇಳೂರು ಸೀತಾರಾಮ ಶೆಟ್ಟಿಯವರು ಏಕಾಎಕಿ ಅಂಗಡಿಯೊಳಗೆ ನುಗ್ಗಿ ಸೊತ್ತುಗಳನ್ನು ಲಿಸ್ಟ್ ಮಾಡುವ ಅಗತ್ಯವಿಲ್ಲ. ಇಲ್ಲಿರುವ ಎಲ್ಲ ವಸ್ತುಗಳು ನನಗೇ ಸೇರಿದ್ದು ಎಂದು ಪ್ರಸಾದರಿಗೆ ಹಲ್ಲೆ ನಡೆಸಿ, ದಾಂಧಲೆ ಮಾಡಿ, ಕೆಲವು ಚರ ಸೊತ್ತುಗಳನ್ನು ಬಲಾತ್ಕಾರವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.