ಕೊರಟಗೆರೆ:ತುಂಬಾಡಿ ಕೆರೆಗೆ ಈಜಾಡಲು ಹೋಗಿ ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತನ ಮಗನನ್ನು ಕಾಪಾಡಲು ಏಕಾಏಕಿ ನೀರಿಗಿಳಿದ ವ್ಯಕ್ತಿಯೂ ಸಹ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ತುಂಬಾಡಿ ಗ್ರಾಮದ ಹೊಸಕೆರೆಯಲ್ಲಿ ದುರ್ಘಟನೆ ನಡೆದಿದೆ. ಸ್ನೇಹಿತನ ಮಗನೊರ್ವ ಕೆರೆಯಲ್ಲಿ ಈಜಾಡಲು ಹೋಗಿ ಮುಳುಗುತ್ತೀದ್ದ ವೇಳೆ ಕಾಪಾಡಲು ಪ್ರಯತ್ನಿಸಿ ಆತನೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ತುಮಕೂರು ನಗರದ ಅಂತರಸಹಳ್ಳಿಯ ನಿತಿನ್(11) ಈಜಾಡಲು ಹೋಗಿ ನೀರಿನಲ್ಲಿ ಮುಳುಗುತ್ತಿದ್ದಾಗ ಸತ್ಯಮಂಗಲದ ದಿವಾಕರ(45) ಆತನನ್ನು ಕಾಪಾಡಲು ನೀರಿಗೆ ಇಳಿದಿದ್ದಾರೆ. ಈಜಾಡಲು ಬರದ ಇಬ್ಬರೂ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ತುಂಬಾಡಿ ಗ್ರಾಮದ ಭಾಗ್ಯಮ್ಮ ಎಂಬಾಕೆಯ ತಂಗಿಯ ಮನೆಗೆ ಆಗಮಿಸಿದ ವೇಳೆ ಘಟನೆ ನಡೆದಿದೆ. ನೀರಿನಲ್ಲಿ ಮುಳುಗಿದ ಇಬ್ಬರನ್ನು ತುಂಬಾಡಿ ಗ್ರಾಮಸ್ಥರು ತಕ್ಷಣ ನೀರಿನಿಂದ ಮೇಲೆತ್ತುವ ಕೆಲಸ ಮಾಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡ ಹೆಚ್ಚಿನ ಚಿಕಿತ್ಸೆಗೆ ಪ್ರಯತ್ನಪಟ್ಟರೂ ಚಿಕಿತ್ಸೆ ಫಲಕಾರಿ ಆಗಿಲ್ಲ. ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.