Advertisement

ಕೊರಟಗೆರೆ: ಕ್ರಶರ್ ಗಳ ಹಾವಳಿ; ತಿನ್ನುವ ಅನ್ನದಲ್ಲೂ, ಕುಡಿಯುವ ನೀರಿನಲ್ಲೂ ಧೂಳು

10:47 AM Jun 29, 2022 | Team Udayavani |

ಕೊರಟಗೆರೆ: ತಿನ್ನುವ ಅನ್ನದಲ್ಲೂ ಧೂಳು.. ಕುಡಿಯುವ ನೀರಿನಲ್ಲೂ ಧೂಳು.. ಹೌದು ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬಿಕ್ಕೆಗುಟ್ಟೆ ಗ್ರಾಮದ ಬಳಿ ನಡೆಯುತ್ತಿರುವ ಕ್ರಶರ್ ಗಳ ಹಾವಳಿಯಿಂದ ಜನರು ಮಣ್ಣನ್ನು ತಮ್ಮ ಆಹಾರವಾಗಿ ಮತ್ತು ಕುಡಿಯುವ ನೀರಾಗಿ ಬಳಸುತ್ತಿದ್ದಾರೆ. ಇದು ಕೇವಲ ಜನರಿಗಷ್ಟೇ ಸಿಮೀತವಾಗದೇ ಅಮಾಯಕ ಮೂಕ ಪ್ರಾಣಿಗಳು ಸೇವಿಸುವಂತಾಗಿದೆ. ಇದರಿಂದ ಜನರು ಪ್ರಾಣ ಭೀತಿಯಲ್ಲಿ ಜೀವನ ಕಳೆಯುವಂತಾಗಿದೆ.

Advertisement

ಪ್ರತಿನಿತ್ಯ ಕ್ರಶರ್ ನಿಂದ ಸಿಡಿಸುವ ಸಿಡಿ ಮದ್ದುಗಳಿಂದಾಗಿ ಶಬ್ಧ ಮಾಲಿನ್ಯ ಉಂಟಾಗುವುದಷ್ಟೇ ಅಲ್ಲದೇ ಪಕ್ಕದಲ್ಲೇ ಇರುವ ಗ್ರಾಮಗಳಿಗೆ ಒಂದು ನರಕವಾಗಿ ಪರಿಣಮಿಸಿದೆ. ಸದಾ ಧೂಳಿನಿಂದ ಕೂಡಿಕೊಂಡಿರುವ ಈ ಪ್ರದೇಶದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿ ಜನರು ಬೇರೆ ಪ್ರದೇಶಗಳಿಗೆ ಹೋಗುವುದೊಂದೇ ಬಾಕಿ ಉಳಿದಿದೆ.

ಬಿಕ್ಕೆಗುಟ್ಟೆ ಗ್ರಾಮದಲ್ಲಿನ ಜನರು ಒಂದಿಲ್ಲೊಂದು ಖಾಯಿಲೆಯಿಂದ ಮರಣ ಹೊಂದುತ್ತಿದ್ದಾರೆ. ಜನ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಲೇ, ಸತ್ತವರಿಗೆ ಮಣ್ಣನ್ನು ಹಾಕುತ್ತಿದ್ದಾರೆ. ಇನ್ನೂ ಮೂಖ ಪ್ರಾಣಿಗಳ ವೇಧನೆಯನ್ನು ಯಾರು ತಾನೇ ಕೇಳಿಯಾರು?
ಅವುಗಳಿಗೆ ಸರಿಯಾದ ಮೇವು ಸಿಗುತ್ತಿಲ್ಲ. ತಿನ್ನುವ ಹುಲ್ಲಿನ ಮೇಲೆ ಒಂದು ಅಡಿ ಧೂಳು ಕುಳಿತುಕೊಂಡರೆ ಮುಗ್ಧ ಪ್ರಾಣಿಗಳು ಹೇಗೆ ತಾನೆ ತಿನ್ನಲು ಸಾಧ್ಯ. ಇದರಿಂದಾಗಿ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿಕೊಂಡರು ಸರಿಯಾಗಿ ಸ್ಪಂಧಿಸುತ್ತಿಲ್ಲ. ಇನ್ನೂ ಗ್ರಾಮಸ್ಥರು ಕ್ರಶರ್ ಬಳಿ ಹೋಗಿ ನಿಲ್ಲಿಸಲು ಹೇಳಿದರೆ ಪೊಲೀಸ್ ಮುಖಾಂತರ ಬೆದರಿಕೆ ಬೇರೆ ಹಾಕಿಸುತ್ತಾರಂತೆ. ಅಂದರೆ ಪೊಲೀಸರು ಸಾರ್ವಜನಿಕರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೋ ಅಥವಾ ಕ್ರಷರ್ ಓನರ್ ಪರವಾಗಿ ಕೆಲಸ ಮಾಡುತ್ತಿದ್ದಾರೊ ತಿಳಿಯದಾಗಿದೆ.

ಬಿಕ್ಕಳಿಕೆ ಬಂದರು ಕುಡಿಯಲು ಯೋಗ್ಯವಲ್ಲದ ನೀರು
ಪ್ರತಿದಿನ ಕುಡಿಯಲು ಬಳಸುವ ನೀರು ಕ್ರಶರ್ ಗಳ ಹಾವಳಿಯಿಂದ ಧೂಳುಮಯವಾಗಿದೆ. ಈಗಾಗಲೇ ಕುಡಿಯುವ ನೀರಿನಲ್ಲಿ ಸಮಸ್ಯೆ ಆದರೆ ಸಾಕಷ್ಟು ಖಾಯಿಲೆಗಳು ಹರಡುತ್ತವೆ ಎಂಬುದನ್ನು ಅನೇಕ ಕಾರ್ಯಕ್ರಮಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಹೇಳಿರುತ್ತಾರೆ. ಆದರೆ ಅಧಿಕಾರಿಗಳು ಮಾತ್ರ ಪಿಲ್ಟರ್ ವಾಟರ್ ಕುಡಿಯುತ್ತಾ, ಎಸಿ ರೂಮ್‍ನಲ್ಲಿ ಕುಳಿತುಕೊಂಡಿದ್ದಾರೆ. ಹೀಗೆ ಆದರೆ ಅಧಿಕಾರಿಗಳ ಕಚೇರಿಗಳನ್ನು ನುಗ್ಗ ಬೇಕಾಗುತ್ತದೆ ಎಂದು ಸ್ಥಳೀಯರು ಉಗ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮನೆಯೊಳಗೆ ಊಟ ಮಾಡಲು ಆಗುತ್ತಿಲ್ಲ
ಹೊಲ ಗದ್ದೆಗಳಿಗೆ ಹೋಗಿ ಕೆಲ ಮಾಡಿ ಮನೆಗೆ ಬಂದು ಕುಳಿತರೆ ಸಾಕು ಸಿಡಿಮದ್ದುಗಳಿಂದ ಬರುವ ಸಣ್ಣ ಸಣ್ಣ ಕಲ್ಲುಗಳು ಮನೆಯ ಹೆಂಚು, ತಗಡಿನ ಮೇಲೆ ಬೀಳುತ್ತವೆ. ಇದರಿಂದಾಗಿ ಮನೆಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡುವುದಿರಲಿ, ಊಟ ಮಾಡುವುದಕ್ಕೂ ಭಯ ಪಡುವಂತಾಗಿದೆ. ಹಸುಗೂಸು ಇರುವ ಮನೆಯಲ್ಲಿ ಮಕ್ಕಳು ಹಾಗೂ ಗರ್ಭೀಣಿಯರು ಸಾಕಷ್ಟು ಸಮಸ್ಯೆಯನ್ನು ಅನುಭವಿಸುವಂತಾಗಿದೆ.

Advertisement

ಪ್ರಭಾವಿಗಳಿಗೆ ಸೇರಿರುವ ಬಿಕ್ಕೆಗುಟ್ಟೆ ಜಲ್ಲಿ ಕ್ರಶರ್ ಗಳು ಪ್ರಭಾವಿಗಳ ಒಡೆತನದಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಎದುರಿಸಲು ಸಾಮಾನ್ಯ ಜನರು ಭಯ ಪಡುವಂತಾಗಿದೆ. ಅಧಿಕಾರಿ ವರ್ಗವೂ ಅವರ ಜೊತೆ ಶಾಮೀಲಾಗಿರುವ ಶಂಕೆಯನ್ನು ಬಿಕ್ಕೆಗುಟ್ಟೆ ಗ್ರಾಮದ ಜನರು ವ್ಯಕ್ತಪಡಿಸಿದ್ದಾರೆ. ಇನ್ನೂ ಅಲ್ಲಿ ಕೆಲಸ ಮಾಡುವವರು ಸ್ಥಳೀಯ ಜನರಿಗೆ ಮುಂಚಿತವಾಗಿ ಮಾಹಿತಿ ಕೊಡದೆ ಕ್ರಷರ್‍ ಗಳಲ್ಲಿಸಿಡಿಮದ್ದುಗಳನ್ನು ಸಿಡಿಸಲಾಗುತ್ತದೆ. ಸಿಡಿಮದ್ದುಗಳ ಆರ್ಭಟದಿಂದ ಗರ್ಭಿಣಿಯರಾಗಿರುವ ಹೆಣ್ಣುಮಕ್ಕಳಿಗೆ ಗರ್ಭಪಾತ, ಅಪೌಷ್ಟಿಕತೆ, ನಾನಾ ರೋಗ ರುಜಿನಗಳು ಬರುವ ಸಾಧ್ಯತೆ ಇದೆ. ಇನ್ನೂ ಯಾವ ಮಾಧ್ಯಮದವರು ಬಂದರೂ, ಯಾವ ಅಧಿಕಾರಿಗಳು ಬಂದರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ವರದಿ ಮಾಡಲು ಹೋದ ನಮ್ಮ ಮೇಲೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಭಾವಿಗಳ ಕಲ್ಲು ಗಣಿಗಾರಿಕೆಯಿಂದ ಸುತ್ತಮುತ್ತಲ ಬೆಳೆಗಳು ನಾಶವಾಗಿ, ರೈತರು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಇನ್ನೂ ಜೆಲ್ಲಿಯನ್ನು ತುಂಬಿಕೊಂಡು ಹೋಗುವ ರಸ್ತೆಗಳೆಲ್ಲಾ ಮಣ್ಣಿನಿಂದ ಕೂಡಿದ್ದು, ಇದರಿಂದಾಗಿ ಆ ಸುತ್ತಮುತ್ತಲಿನ ಜೀವಸಂಕುಲವೇ ನಾಶವಾಗುವ ಸಾಧ್ಯತೆ ಇದೆ.

ವಾರದ ಹಿಂದೆ ಆರೋಗ್ಯವಾಗಿದ್ದ ಒಬ್ಬ ವ್ಯಕ್ತಿ ಕ್ರಶರ್ ನಲ್ಲಿ ಸಿಡಿದ ಸಿಡಿಮದ್ದಿನ ಶಬ್ದಕ್ಕೆ ಹಸುಗಳು ಬೆದರಿ ಎಳೆದುಕೊಂಡು ಹೋದಾಗ ಕಾಲು ಮುರಿದುಕೊಂಡ ವ್ಯಕ್ತಿ ಸಾವಿಗೀಡಾಗಿದ್ದಾನೆ. ಅಧಿಕಾರಿಗಳು ಸಾರ್ವಜನಿಕರ ಕೆಲಸಗಾರರೋ ಅಥವಾ ಪ್ರಭಾವಿಗಳ ದಾಸರೋ ಎಂದು ಬಿಕ್ಕೆಗುಟ್ಟೆ ಗ್ರಾಮದ ಜನ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿದರು.

ಮೃತ ದೇಹವನ್ನು ಇಟ್ಟುಕೊಂಡು ಪ್ರತಿಭಟನೆಗೆ ಸಿದ್ಧರಾಗಿದ್ದ ಸ್ಥಳೀಯರು ಅಂತ್ಯ ಸಂಸ್ಕಾರ ಮಾಡಿದ್ದಾರೆ.ಸ್ಥಳದಲ್ಲೇ ನಮ್ಮ ತಾಲ್ಲೂಕು ದಂಡಾಧಿಕಾರಿಗಳಿಗೆ ಕರೆ ಮಾಡಿ ವಿಷಯ ಮುಟ್ಟಿಸಿದಾಗ ಸಂಪೂರ್ಣ ಮಾಹಿತಿ ಪಡೆದು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಅಲ್ಲಿದ್ದ ಕುಟುಂಬಸ್ಥರಿಗೆ ಹಾಗೂ ನಮಗೆ ಭರವಸೆ ನೀಡಿದ್ದಾರೆ.

ಈಗಾಗಲೇ ಆ ಗ್ರಾಮಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ವರದಿ ಸಲ್ಲಿಸಿದ್ದಾರೆ . ನಾನು ಕೂಡ ನಾಳೆ ಆ ಗ್ರಾಮಕ್ಕೆ ತೆರಳುತ್ತಿದ್ದೇನೆ. ಜನರ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ
ನಹೀದಾ ಜಮ್ ಜಮ್, ತಾಲೂಕು ದಂಡಾಧಿಕಾರಿ.

ನಮ್ಮ ಗ್ರಾಮದಲ್ಲಿ ಸುಮಾರು 80 ಕುಟುಂಬಗಳಿವೆ. ಎಲ್ಲಾ ಮನೆಯಲ್ಲೂ 4-5 ಜನ ವಾಸವಿದ್ದಾರೆ. ಆದ್ರೆ ಎಲ್ಲಾ ಮನೆಯಲ್ಲಿಯೂ ಕೂಡ ಒಬ್ಬ ರೋಗಿ ಕಡ್ಡಾಯವಾಗಿದ್ದಾರೆ. ಏಕೆಂದರೆ ಇಲ್ಲಿ ನಡೆಸುತ್ತಿರುವ ಕ್ರಶರ್ ಗಳಿಂದ ಬರುವ ಧೂಳಿನಿಂದ ಹಿರಿಯರು, ಮಕ್ಕಳು ಆರೋಗ್ಯಕ್ಕೀಡಾಗುತ್ತಿದ್ದಾರೆ. ಅಷ್ಟೇ ಅಲ್ಲ ತಿನ್ನುವ ಅನ್ನದಲ್ಲೂ ಧೂಳು, ಕುಡಿಯುವ ನೀರಿನದು ಧೂಳು ತುಂಬಿಕೊಳ್ಳುತ್ತದೆ. ಬೆಟ್ಟಗಳಲ್ಲಿ ಸಿಡಿಸುವ ಮದ್ದಿನಿಂದ ಮನೆಗಳು ಬಿರುಕು ಬಿಟ್ಟಿವೆ. ಇಷ್ಟೆಲ್ಲಾ ಆಗುತ್ತಿದ್ದರೂ ಯಾವ ಅಧಿಕಾರಿಗಳು ನಮ್ಮ ಊರಿನ ಕಡೆ ಬರುತ್ತಿಲ್ಲ. ನಮ್ಮ ಸಮಸ್ಯೆ ಆಲಿಸುತ್ತಿಲ್ಲ.
ನರಸಿಂಹರಾಜು, ಸ್ಥಳೀಯರು

ಪ್ರಕೃತಿಯ ತಾಣವಾಗಿದ್ದ ಈ ಊರನ್ನು ಕ್ರಶರ್ ಗಳ ಹಾವಳಿಯಿಂದ ಹಾಳು ಮಾಡಿದ್ದಾರೆ. ಕಾಡಿನಿಂದ ನಾಡಿಗೆ ಬರುತ್ತಿರುವ ಪ್ರಾಣಿಗಳ ಹಾವಳಿ ಒಂದು ಕಡೆ ಆದರೆ, ಇನ್ನೊಂದು ಕಡೆ ಕ್ರಶರ್ ಸಿಡಿಮದ್ದಿನ ಹಾವಳಿ. ಅನೇಕ ವರ್ಷಗಳಿಂದ ಈ ಕ್ರಷರ್ ಗಳ ವಿರುದ್ಧವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ಆದರೆ ಯಾವ ಅಧಿಕಾರಿಯೂ ಸ್ಪಂದಿಸಿಲ್ಲ. ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ. ಇತ್ತೀಚೆಗೆ ನಡೆದ ಗ್ರಾಮ ವಾಸ್ತವ್ಯದಲ್ಲಿ ಕೂಡ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದಕ್ಕೂ ಸ್ಪಂದಿಸದ ಅಧಿಕಾರಿಗಳ ಮೂರ್ಖ ವರ್ತನೆಗೆ ಬೇಸರವಾಗಿದೆ
ನಾಗರಾಜು, ಸಾಮಾಜಿಕ ಹೋರಾಟಗಾರ

ಬಿಕ್ಕೆಗುಟ್ಟೆ ಊರಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬಕ್ಕೂ ಸರಿಯಾದ ಮನೆಯಿಲ್ಲ. ಗುಡಿಸಲಿಲ್ಲ. ಕಲ್ಲಿನ ಕ್ವಾರಿಯಲ್ಲಿ ಸಿಡಿಸುವ ಸಿಡಿಮದ್ದಿನಿಂದ ಭಯಭೀತರಾಗಿರುವ ಗರ್ಭಿಣಿ ಮಹಿಳೆಯರು, ಇದುವರೆಗೂ ಅನೇಕ ಮೂಕ ಪ್ರಾಣಿಗಳು ಸಾವನ್ನಪ್ಪಿವೆ, ಇತ್ತೀಚೆಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಕ್ರಷರ್ ನಿಲ್ಲಿಸಿ ಎಂದು ಹೋಗುವ ಗ್ರಾಮಸ್ಥರಿಗೆ ಪೋಲೀಸರಿಂದ ಬೆದರಿಸಿ ಮತ್ತೆ ವಾಪಸ್ ಕಳಿಸುತ್ತಾರೆ. ಎಲ್ಲಿ ಹೋಯಿತು ನಮ್ಮ ಪ್ರಜಾಪ್ರಭುತ್ವ. ಎಲ್ಲಿ ಇದ್ದಾರೆ ನಿಷ್ಟಾವಂತ ಅಧಿಕಾರಿಗಳು. ಈ ಜನರ ಕಷ್ಟಕ್ಕೆ ಆಗುವ ಅಧಿಕಾರಿ ಯಾರು ಕಾದು ನೋಡಬೇಕಾಗಿದೆ.
ನವೀನ್ ಕುಮಾರ್, ಮಾನವ ಹಕ್ಕುಗಳ ಹೋರಾಟಗಾರ

ಸಿದ್ದರಾಜು.ಕೆ .ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next