ಕೊರಟಗೆರೆ: ಅಂತರ್ಜಿಲ್ಲಾ ಮೇಕೆ, ಕುರಿ ಹಾಗೂ ಬೈಕ್ ಕಳ್ಳರನ್ನು ಪೊಲೀಸ್ ನವರು ನಿಖರ ಮಾಹಿತಿ ಮೇರೆಗೆ ಎರಡು ದ್ವಿಚಕ್ರ ವಾಹನ,6 ಮೇಕೆ ಸೇರಿದಂತೆ ನಾಲ್ಕು ಜನ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಕೊರಟಗೆರೆ ಪೋಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ತೋವಿನಕೆರೆ ಹೋಬಳಿಯ ಚಿಕ್ಕಸಂಜೀವೇ ಗೌಡನ ಪಾಳ್ಯದ 1 ಮೇಕೆ, ಮಾಗಡಿ ತಾಲೂಕಿನ ಮಾಯಸಂದ್ರ ಗ್ರಾಮದ 3 ಹಾಗೂ ಇದೇ ತಾಲೂಕಿನ ಯಲ್ಲಾಪುರದ 2 ಮೇಕೆ ಸೇರಿದಂತೆ ಒಟ್ಟು ಐದು ಮೇಕೆಗಳು ಹಾಗೂ ತಿಪಟೂರಿನ ಕಲ್ಪತರು ಗ್ರಾಂಡ್ ಹೋಟೆಲ್ ಬಳಿ 1 ಬೈಕ್, ಮಂಡ್ಯದ ಕಲ್ಯಾಣ ಮಂಟಪದ ಬಳಿ 1 ಬೈಕ್ ಕಳವು ಮಾಡಲಾದ ಅಂತರ್ ಜಿಲ್ಲಾ ನಾಲ್ವರು ಕಳ್ಳರನ್ನು ಕೊರಟಗೆರೆ ಪೊಲೀಸ್ ಇಲಾಖೆ ಮಾಲು ಸಹಿತ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಅಂತರ್ ಜಿಲ್ಲಾ ನಾಲ್ವರು ಕಳ್ಳರಲ್ಲಿ ಕೋಳಾಲ ಹೋಬಳಿಯ ಬೈರಗೊಂಡ್ಲು ಗ್ರಾಮದ ಇಬ್ಬರು ಆರೋಪಿಗಳಾದ ಹನುಮಂತ(19) , ರಮೇಶ(40) ,ತುಮಕೂರು ತಾಲೂಕಿನ ಕಸಬಾ ಹೋಬಳಿಯ ಒಕ್ಕೋಡಿ ಗೊಲ್ಲರಹಟ್ಟಿಯ ನಾಗಾರಾಜು( 45), ಮಂಡ್ಯ ಜಿಲ್ಲೆಯ ಶ್ರೀ ರಂಗ ಪಟ್ಟಣ ಕೆಆರ್ ಎಸ್ ತಾಲೂಕಿನ ಸಂತೆಮಾಳ ಗ್ರಾಮದ ಅನಿಲ್ (30) ಹಾಗೂ ಒಬ್ಬ ಬಾಲಾಪರಾಧಿಯನ್ನು ಬಂಧಿಸುವಲ್ಲಿ, 1,80,000 ಮೌಲ್ಯದ ಎರಡು ಬೈಕ್ ಗಳನ್ನು ಹಾಗೂ 80,000 ಮೌಲ್ಯದ ಆರು ಮೇಕೆಗಳನ್ನು ವಶಪಡಿಸಿ ಕೊಳ್ಳುವಲ್ಲಿ ಕೊರಟಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ಪತ್ತೆಯಲ್ಲಿ ತುಮಕೂರು ಜಿಲ್ಲಾ ಅಡಿಷನಲ್ ಎಸ್ಪಿ ಉದೇಶ್,ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರಾಮಕೃಷ್ಣ ಕೆ.ಜಿ. ಆದೇಶದಂತೆ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಅವಿನಾಶ್ ಮಾರ್ಗದರ್ಶನದಂತೆ ಸಿಪಿಐ ಸಿದ್ದರಾಮೇಶ್ವರ, ಪಿಎಸ್ಐ ಮಂಜುಳಾ , ಪಿಎಸ್ಐ ನಾಗರಾಜು ಸೇರಿದಂತೆ ಕೊರಟಗೆರೆ ಕ್ರೈಂ ಸಿಬ್ಬಂದಿ ಈ ಪ್ರಕರಣ ಭೇದಿಸುವಲ್ಲಿ ಹೆಚ್ಚು ಶ್ರಮಿಸಿದ್ದು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಳ್ಳತನ ಪ್ರಕರಣ ಭೇದಿಸಿದ ಪೋಲೀಸ್ ಸಿಬ್ಬಂದಿಗಳನ್ನು ಪೋಲೀಸ್ ಅಧೀಕ್ಷಕ ರಾಹುಲ್ ಕುಮಾರ್ ಶಹಾಪುರ್ ವಾಡ್ ಅಭಿನಂದಿಸಿದ್ದಾರೆ.